ಬೆಂಗಳೂರು
ಒಂಟಿಯಾಗಿ ಒಡಾಡುವವರನ್ನು ವಾಹನ ಸವಾರರನ್ನು ಅಡ್ಡಗಟ್ಟಿ ಬೆದರಿಸಿ ಹಣ ಚಿನ್ನಾಭರಣ ದೋಚುತ್ತಿದ್ದ ಕುಖ್ಯಾತ ಸುಲಿಗೆಕೋರ ದರ್ಶನ್ ಅಲಿಯಾಸ್ ದರ್ಶುಗೆ ಆರ್‌ಎಂಸಿ ಯಾರ್ಡ್ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.ಬಲಗಾಲಿಗೆ ಗುಂಡೇಟು ತಗುಲಿರುವ ಹಾಸನದ ದರ್ಶನ್(21)ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬಂಧಿಸಲು ಬೆನ್ನಟ್ಟಿಹೋದ ಆರ್‌ಎಂಸಿ ಯಾರ್ಡ್ ಪೊಲೀಸ್ ಪೇದೆ ಮುನಿಕೃಷ್ಣ ಎಂಬುವವರ ಮೇಲೆ ದರ್ಶನ್ ಹಲ್ಲೆ ನಡೆಸಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ತಿಳಿಸಿದ್ದಾರೆ.
ಫುಡ್ ಸಪ್ಲೈ ಕಂಪನಿಯ ಉದ್ಯೋಗಿ ಪ್ರದೀಪ್ ಅವರು ಬಳಿ ಸೋಮವಾರ ರಾತ್ರಿ 11.45ರ ವೇಳೆ ಕೆಲಸ ಮುಗಿಸಿಕೊಂಡು ಮನೆಗೆ ಆರ್‌ಎಂಸಿ ಯಾರ್ಡ್ ಪ್ರಭಾಕರ್ ಕೋರೆ ಕನ್ವೆಂಷನ್ ಹಾಲ್ ಹೊಂಡಾ ಡಿಯೋ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ಚಾಕು ತೋರಿಸಿ ಬೆದರಿಸಿ, 1,700 ನಗದು, ಮೊಬೈಲ್ ಹಾಗೂ ಬೈಕ್ ಕಸಿದು ಪರಾರಿಯಾಗಿದ್ದ ದರ್ಶನ್ ಸೋಲದೇವನಹಳ್ಳಿಯ ಚಿಕ್ಕಬಾಣವಾರ ಬಳಿ ವ್ಯಕ್ತಿಯೊಬ್ಬರ ಮೊಬೈಲ್ ಕಸಿದು ತಲೆಮರೆಸಿಕೊಂಡಿದ್ದ.
ಪ್ರಭಾಕರ್ ಕೋರೆ ಕನ್ವೆಂಷನ್ ಹಾಲ್‌ನಲ್ಲಿ ನಡೆದಿದ್ದ ಸುಲಿಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದ ಆರ್‌ಎಂಸಿ ಯಾರ್ಡ್ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಂದ್ರ ಕುಮಾರ್ ಅವರು, ಆರೋಪಿಗಾಗಿ ಶೋಧ ನಡೆಸುತ್ತಿದ್ದಾಗ, ಚಿಕ್ಕಬಾಣವಾರದ ಕೆರೆಯ ಬಳಿ 5.15ರ ವೇಳೆ ಬೈಕ್‌ನಲ್ಲಿ ಹೋಗುತ್ತಿದ್ದ ಮಾಹಿತಿ ಪತ್ತೆಯಾಯಿತು.
ಕೂಡಲೇ ಇನ್ಸ್‌ಪೆಕ್ಟರ್ ಮಹೇಂದ್ರ ಕುಮಾರ್, ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ಪೊಲೀಸ್ ಜೀಪ್ ಅನ್ನು ನೋಡಿ ಪರಾರಿಯಾಗಲು ಯತ್ನಿಸಿದ ದರ್ಶನ್‌ನನ್ನು ಬೆನ್ನಟ್ಟಿಹೋದ ಪೇದೆ ಮುನಿಕೃಷ್ಣ ಅವರಿಗೆ ಚಾಕುವಿನಿಂದ ಹಲ್ಲೆ ನಡೆಸಿ, ಓಡಲು ಯತ್ನಿಸಿದಾಗ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ, ಮಹೇಂದ್ರ ಕುಮಾರ್ ಎಚ್ಚರಿಕೆ ನೀಡಿದರೂ, ಮತ್ತೆ ಹಲ್ಲೆಗೆ ಮುಂದಾಗಿದ್ದಾನೆ.
ಈ ವೇಳೆ ಆತ್ಮರಕ್ಷಣೆಗಾಗಿ ಮತ್ತೊಂದು ಸುತ್ತು ಗುಂಡು ಹಾರಿಸಿದ್ದು, ಆ ಗುಂಡು ಬಲಗಾಲಿಗೆ ತಗುಲಿ ದರ್ಶನ್ ಕುಸಿದುಬಿದ್ದಿದ್ದಾನೆ. ಆತನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಸನ ಮೂಲದ ದರ್ಶನ್, ಕೆಂಗೇರಿ, ತಲಘಟ್ಟಪುರ, ಹಾಸನ, ಸೋಲದೇವನಹಳ್ಳಿ, ಮಾದನಾಯಕನಹಳ್ಳಿ, ಬಾಗಲಗುಂಟೆ, ಪೀಣ್ಯ, ಇನ್ನಿತರ ಪೊಲೀಸ್ ಠಾಣೆಗಳಲ್ಲಿ ನಡೆದಿದ್ದ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
ಗೊರಗುಂಟೆಪಾಳ್ಯದಲ್ಲಿ ಕೆಲದಿನಗಳ ಹಿಂದೆ ದರ್ಶನ್ ಇತ್ತೀಚೆಗೆ ಮನೆ ಬದಲಾಯಿಸಿದ್ದು, 6 ಪ್ರಕರಣಗಳಲ್ಲಿ ವಾರೆಂಟ್ ಜಾರಿಯಾಗಿದ್ದರೂ, ನ್ಯಾಯಾಲಯಕ್ಕೆ ಹಾಜರಾಗದೆ, ತಲೆಮರೆಸಿಕೊಂಡಿದ್ದು, 11ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಆತ ಪೊಲೀಸರಿಗೆ ಬೇಕಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
