ತುಮಕೂರು

ಹೆಬ್ಬೂರು ಪೋಲೀಸ್ ಠಾಣೆ ಹಾಗೂ ಕುಣಿಗಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಲಿಗೆಕೋರರನ್ನು ಬಂಧಿಸಿದ್ದು, ಲಕ್ಷಾಂತರ ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಡಾ.ಕೋನ ವಂಶಿ ಕೃಷ್ಣ ತಿಳಿಸಿದರು.
ನಗರದ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಗಳ ಸಂಬಂಧಿತ ಮಾಹಿತಿಯನ್ನು ವಿವರಿಸಿದರು.
ಪ್ರಕರಣ 1:
ನ.23ರಂದು ಹೆಬ್ಬೂರು ಪೋಲೀಸ್ ಠಾಣಾ ವ್ಯಾಪ್ತಿಯ ಬಾಣಾವರ ಗೇಟ್ ಬಳಿ ತುಮಕೂರು ಕುಣಿಗಲ್ ರಸ್ತೆಯಲ್ಲಿ 05 ಜನ ಖದೀಮರು ಟಾಟಾ ಸುಮೊ ವಾಹನವನ್ನು ನಿಲ್ಲಿಸಿಕೊಂಡು ಕೈಗಳಲ್ಲಿ ಲಾಂಗ್, ಡ್ರಾಗನ್, ಪಿಸ್ತೂಲ್ ಇಟ್ಟುಕೊಂಡು ರಸ್ತೆಯಲ್ಲಿ ಬರುವ ವಾಹನಗಳನ್ನು ನಿಲ್ಲಿಸಿ ದರೋಡೆ ಮಾಡಲು ಹೊಂಚು ಹಾಕಿರುವ ಬಗ್ಗೆ ಸೂಕ್ತ ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿ ಮಾರಕಾಸ್ತ್ರಗಳ ಸಮೇತ ಐದು ಮಂದಿ ದುಷ್ಕರ್ಮಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೆಂಗಳೂರಿನ ಶಾಂತಿ ಲೇಔಟ್‍ನಲ್ಲಿ ವಾಸವಿದ್ದು ಆಟೋ ಚಾಲಕ ವೃತ್ತಿ ನ ಮಾಡುತ್ತಿದ್ದ 29 ವರ್ಷದ ಜಫ್ರುದ್ದೀನ್ ಅಲಿಯಾಸ್ ಜಾಫರ್ ಬಿನ್ ನೂರುದ್ದೀನ್ , ಈತನ ಸಹೋದರ 28 ವರ್ಷದ ಸಫೀರುದ್ದೀನ್ ಅಲಿಯಾಸ್ ಶೇರು, ಬೆಂಗಳೂರಿನ ನೀಲಸಂದ್ರದ ನಿವಾಸಿ ಕಾರ್ ಮೆಕ್ಯಾನಿಕ್ ಮಾಡುತ್ತಿದ್ದ 35ವರ್ಷದ ಮೊಕದ್ದರ್ ಪಾಷಾ ಅಲಿಯಾಸ್ ಮೊಕದ್ದರ್, ಬೆಂಗಳೂರಿನ ವೆಂಕಟೇಶಪುರದ ನಿವಾಸಿ ಸೇಲ್ಸ್‍ಮ್ಯಾನ್ ಕೆಲಸ ಮಾಡುತ್ತಿದ್ದ 28ವರ್ಷದ ಮೊಹಮ್ಮದ್ ಸಲೀಂ ಅಲಿಯಾಸ್ ಸಲೀಂ, ಅಲಿಯಾಸ್ ಎಂ.ಡಿ.ಸಲೀಂ ಹಾಗೂ ಬೆಂಗಳೂರಿನ ನೀಲಸಂದ್ರದ ನಿವಾಸಿ ತಳ್ಳುವ ಗಾಡಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ 24ವರ್ಷದ ವ್ಯಕ್ತಿ ಕಲೀಂಪಾಷಾ ಅಲಿಯಾಸ್ ಅಲ್ಲು ಎಂದು ಗುರುತಿಸಲಾಗಿದೆ.
ಈ ಆರೋಪಿಗಳು ಕಳೆದ 25 ದಿನಗಳ ಹಿಂದೆ ಹೊನ್ನುಡಿಕೆ ಹ್ಯಾಂಡ್ ಪೋಸ್ಟ್‍ನಲ್ಲಿ ಟಾಟಾ ಸುಮೋ, ಮೊಬೈಲ್ ಸುಲಿಗೆ, ಅದೇ ದಿನ ಮಾಗಡಿ ಬಳಿ ರಸ್ತೆಯ ಬದಿಯಲ್ಲಿದ್ದ ದೇವಸ್ಥಾನದಲ್ಲಿ ಮೂರು ದೇವರ ವಿಗ್ರಹಗಳನ್ನು ಕಳವು ಮಾಡಿದ್ದಾರೆ. ಕಳೆದ 10 ತಿಂಗಳ ಹಿಂದೆ ಬೆಂಗಳೂರಿನ ಭಾರತೀ ನಗರದಲ್ಲಿ ಒಂದು ಟಾಟಾ ಸುಮೋ ವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ ಎಂದು ಪೋಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾತ್ಸಂದ್ರ ಸಿಪಿಐ ನೇತೃತ್ವದಲ್ಲಿನ ತಂಡ ಆರೋಪಿಗಳನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದು, ಒಂದು ಟಾಟಾ ಸುಮೋ, ಮತ್ತೊಂದು ಟಾಟಾ ಸುಮೋ ವಾಹನದ ಎಂಜಿನ್ ಹಾಗೂ ಇತರೆ ಬಿಡಿ ಭಾಗಗಳು, 10 ಮೊಬೈಲ್ ಫೋನ್‍ಗಳು,ಮ ಒಂದು ನಾಡ ಪಿಸ್ತೂಲ್, 05 ಜೀವಂತ ಗುಂಡುಗಳು, ಲಾಂಗ್, 07 ಡ್ರಾಗರ್ ಹಾಗೂ ಮೂರು ದೇವರ ವಿಗ್ರಹಗಳನ್ನು ವಶ ಪಡಿಸಿಕೊಂಡು 1 ದರೋಡೆ ಪ್ರಕರಣ, 1 ಸುಲಿಗೆ ಪ್ರಕರಣ, 2 ಕಳವು ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ತಿಳಿಸಿದರು.
ಪ್ರಕರಣ 2:
ಕುಣಿಗಲ್ ಪೋಲೀಸ್ ಠಾಣಾ ವ್ಯಾಪ್ತಿಯ ಮಹಾತ್ಮಗಾಂಧಿ ಕಾಲೇಜಿನಲ್ಲಿ ಕಂಪ್ಯೂಟರ್ ಕೊಠಡಿಯ ಕಿಟಕಿಯ ಮೂಲಕ ಒಳಹೊಕ್ಕು ಕೊಠಡಿಯಲ್ಲಿದ್ದ ಹಳೆದ ಕಂಪ್ಯೂಟರ್‍ನ ಮಾನಿಟರ್‍ಗಳು, ಕೀಪ್ಯಾಡ್‍ಗಳು, ಮೌಸ್ ಹಾಗೂ ಸಿಪಿಯುಗಳನ್ನು ಕಳ್ಳತನ ಮಾಡಿದ್ದ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 04 ಕಂಪ್ಯೂಟರ್ ಮತ್ತು 3800 ರೂಗಳ ನಗದು ಮೊತ್ತವನ್ನು ವಶ ಪಡಿಸಿಕೊಳ್ಳಲಾಗಿದೆ.
ಈ ಪ್ರಕರಣದಲ್ಲಿ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿಯ ಬಾಳೇಗೌಡನಪಾಳ್ಯದ 19ವರ್ಷದ ಯುವಕ ಅಜಯ್ ಅಲಿಯಾಸ್ ಅಜೇಯ ಬಿ.ಟಿ., ತಂದೆ ತ್ಯಾಗರಾಜು ಸೇರಿದಂತೆ ಇನ್ನೂ ನಾಲ್ಕು ಮಂದಿ ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕೋನ ವಂಶಿ ಕೃಷ್ಣ ತಿಳಿಸಿದ್ದಾರೆ.
ಪ್ರಕರಣ 03:
ಕುಣಿಗಲ್ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕುಣಿಗಲ್ ಟೌನ್ ಜಿ.ಡಿ.ಸರ್ಕಲ್ ಚೆಕ್ ಪೋಸ್ಟ್ ಬಳಿ ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ 19 ವರ್ಷದ ಲೋಕೇಶ್ ತಂದೆ ತೋಪೇಗೌಡ ಎಂಬ ಯುವಕ ನಂಬರ್ ಪ್ಲೇಟ್ ಇಲ್ಲದ ಸ್ಪ್ಲೆಂಡರ್ ಪ್ಲಸ್ ದ್ವಿಚಕ್ರ ವಾಹನವನ್ನು ಓಡಿಸಿಕೊಂಡು ಬಂದಿದ್ದು, ಆತನನ್ನು ವಿಚಾರಿಸಲಾಗಿ ಯಾವುದೇ ದಾಖಲೆಗಳನ್ನು ತೋರಿಸದ ಹಿನ್ನಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ದ್ವಿಚಕ್ರ ವಾಹನವನ್ನು ಕಳವು ಮಾಡಿರುವುದು ತಿಳಿದು ಬಂದಿದೆ. ಈ ಬಗ್ಗೆ ತನಿಖೆ ಮಾಡಿದಾಗ ಬೆಂಗಳೂರಿನ ಅಂದ್ರಳ್ಳಿ ಮೈನ್ ರೋಡ್, ತಿಗಳರಪಾಳ್ಯ ಸೇರಿದಂತೆ ಇತರಡೆ ವಾಹನಗಳನ್ನು ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈತನಿಂದ 1,50,000 ರೂ ಮೌಲ್ಯದ 5 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಮೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಉದೇಶ್ ಮಾರ್ಗದರ್ಶನದಲ್ಲಿ ವಿವಿಧ ತಂಡಗಳನ್ನು ರಚಿಸಲಾಗಿದ್ದು ಕಡಿಮೆ ಅವಧಿಯಲ್ಲಿ ವಿವಿಧ ಪ್ರಕರಣಗಳನ್ನು ಭೇದಿಸಿದ ಅಧಿಕಾರಿಗಳನ್ನು ಕೋನ ವಂಶಿ ಕೃಷ್ಣ ಅಭಿನಂದಿಸಿದ್ದಾರೆ. ಅದೇ ರೀತಿ ಇನ್ನೂ ಹೆಚ್ಚಿನದಾಗಿ ವಿವಿಧ ಪ್ರಕರಣಗಳನ್ನು ಭೇದಿಸಬೇಕು ಎಂದು ಸಲಹೆ ನೀಡಿದರು.
