ವರ್ತಕರ ಗೋಡೌನ್‍ಗಳಲ್ಲಿನ ದಾಸ್ತಾನು ರಾಗಿ ಬಗ್ಗೆ ಮಾಹಿತಿ ಕಲೆ ಹಾಕಲು ಸೂಚನೆ

ಗುಬ್ಬಿ
    ರೈತರಿಂದ 1900 ರೂಗಳಿಗೆ ರಾಗಿ ಖರೀದಿಸಿಕೊಳ್ಳುವ ಕೆಲ ವರ್ತಕರು ಮತ್ತು ಮಧ್ಯವರ್ತಿಗಳು ಈ ಖರೀದಿ ಕೇಂದ್ರದಲ್ಲಿ ನಿಗದಿಯಾದ 3150 ರೂಗಳ ಮಾರಾಟ ನಡೆಸುತ್ತಾರೆ. ಈ ಹಿಂದೆ ಇದನ್ನೇ ದಂಧೆಯಾಗಿಸಿಕೊಂಡ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಈ ನಿಟ್ಟಿನಲ್ಲಿ ವರ್ತಕರ ಗೋಡೌನ್‍ಗಳಲ್ಲಿರುವ ದಾಸ್ತಾನು ರಾಗಿಗಳ ಬಗ್ಗೆ ಸೂಕ್ತ ಮಾಹಿತಿ ಕಲೆ ಹಾಕಿ ಕ್ರಮವಹಿಸಲು ಸ್ಥಳದಲ್ಲಿದ್ದ ತಹಸೀಲ್ದಾರ್ ಅವರಿಗೆ ಶಾಸಕ ಎಸ್.ಆರ್.ಶ್ರೀನಿವಾಸ್ ಸೂಚಿಸಿದರು.
     ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ತೆರೆದ ಸರ್ಕಾರದ ಬೆಂಬಲ ಬೆಲೆ ನಿಗದಿಯಂತೆ ರಾಗಿ ಖರೀದಿಸುವ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರ ಪಹಣಿ ಬಳಸಿಕೊಂಡು ಕೆಲ ಮಧ್ಯವರ್ತಿಗಳು ರಾಗಿ ಮಾರಾಟದ ದಂಧೆ ನಡೆಸುತ್ತಾರೆ. ಈ ಬಗ್ಗೆ ತಾಲ್ಲೂಕು ಆಡಳಿತ ಸೂಕ್ಷ್ಮವಾಗಿ ಅವಲೋಕಿಸಬೇಕಿದೆ. ಈ ಹಿಂದೆ ಈ ದಂಧೆ ರೈತರನ್ನು ಕಂಗೆಡಿಸಿತ್ತು ಎಂದು ತಿಳಿಸಿದರು.
     ದೇಶದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾಗುವ ರೈತಾಪಿ ವರ್ಗಕ್ಕೆ ಸರ್ಕಾರ ಬೆಂಬಲ ಬೆಲೆ ಘೋಷಿಸಿದರೂ ಮೋಸ ವಂಚನೆ ನಡೆದರೆ ಇದು ರೈತನ ಬದುಕಿನಲ್ಲಿ ನಡೆಯುವ ಚೆಲ್ಲಾಟವಾಗುತ್ತದೆ. ಭ್ರಷ್ಟಾಚಾರ ಯಾವುದೇ ರಂಗದಲ್ಲಿದ್ದರೂ ಕೃಷಿ ಕ್ಷೇತ್ರದಲ್ಲಿ ಭ್ರಷ್ಟಾಚಾರ ಕಾಣಿಸುತ್ತಿರುವುದು ನಮ್ಮ ದೌರ್ಭಾಗ್ಯ. ವರ್ತಕರ ಕೈ ಗೊಂಬೆಗಳಾಗುವ ಅಧಿಕಾರಿಗಳ ವರ್ಗ ಪಹಣಿ ಮೂಲಕ ರಾಗಿ ಖರೀದಿಗೆ ಸಾಥ್ ನೀಡುತ್ತಾರೆ. ಈ ಬಗ್ಗೆ ಕೂಡಾ ಸಾಕಷ್ಟು ದೂರು ಬಂದಿದ್ದವು ಎಂದ ಅವರು, ಕಷ್ಟಪಟ್ಟು ಬೆಳೆ ತೆಗೆಯುವ ರೈತನಿಗೆ ತಾನು ಮಾಡಿದ ಖರ್ಚು ಹುಟ್ಟುವುದಿಲ್ಲ. ರೈತನಿಂದ ಖರೀದಿ ಮಾಡಿದ ಮಧ್ಯವರ್ತಿ ಮಾತ್ರ ಲಕ್ಷಗಟ್ಟಲೇ ಲಾಭ ನೋಡುತ್ತಾನೆ ಎಂದು ವಿಷಾದಿಸಿದರು.
    ಈ ಬಾರಿ ಮಳೆ ಚೆನ್ನಾಗಿಯೇ ಬಂದ ಕಾರಣ ರಾಗಿ ಕೂಡಾ ಉತ್ತಮ ಇಳುವರಿಯಾಗಿದೆ. ಮಾರುಕಟ್ಟೆಗೆ ಬರುವ ರೈತನಿಗೆ ಮಾತ್ರ 2 ಸಾವಿರ ರೂಗಳಿಗಿಂತ ಅಧಿಕ ಲಾಭ ಸಿಗುವುದಿಲ್ಲ. ಆದರೆ ರಾಗಿ ಖರೀದಿ ಕೇಂದ್ರಕ್ಕೆ ತಂದು ಮಾರಾಟ ಮಾಡಲು ದಾಖಲೆ ಒದಗಿಸಬೇಕು ಎಂಬ ಕಾರಣಕ್ಕೆ ರಾಗಿಯನ್ನೇ ವರ್ತಕರಿಗೆ ನೀಡಿ ತೆರಳುವ ರೈತರು ನಮ್ಮಲ್ಲಿ ಹೆಚ್ಚಾಗಿದ್ದಾರೆ. ಲಾಭ ಕಾಣದೆ ಪರದಾಡುವ ರೈತರು ಖರೀದಿ ಕೇಂದ್ರವನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಜೊತೆಗೆ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ತಾಲ್ಲೂಕು ಆಡಳಿತ ಮಾಡಬೇಕು ಎಂದು ತಿಳಿಸಿದ ಅವರು, ಖರೀದಿ ಕೇಂದ್ರದಲ್ಲಿ ಅವ್ಯವಹಾರಕ್ಕೆ ಆಸ್ಪದ ನೀಡದಂತೆ ಕಟ್ಟುನಿಟ್ಟಿನ ಕ್ರಮವಹಿಸಲು ಸೂಚಿಸಿದರು.
     ಎಪಿಎಂಸಿ ಅಧ್ಯಕ್ಷ ಜಿ.ಟಿ.ರೇವಣ್ಣ ಮಾತನಾಡಿ ಪ್ರತಿ ರೈತ ಒಂದು ಎಕರೆಗೆ 15 ಕ್ವಿಂಟಾಲ್ ರಾಗಿ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಇದರ ಬಳಕೆ ಮಾಡಿಕೊಳ್ಳುವ ರೈತರು ತಮ್ಮ ಪಹಣಿಯನ್ನು ಮಧ್ಯವರ್ತಿಗಳಿಗೆ ನೀಡಿ ಪರದಾಡಬಾರದು. ತಮ್ಮ ರಾಗಿಯನ್ನು ನೇರ ಖರೀದಿ ಕೇಂದ್ರಕ್ಕೆ ತರುವ ಮುನ್ನ ನೋಂದಣಿ ಮಾಡಿಸಿಕೊಳ್ಳಲು ಮುಂದಾಗುವ ಜೊತೆಗೆ ಮುಗ್ದ ರೈತರಿಗೂ ಈ ಕೇಂದ್ರದ ಬಗ್ಗೆ ಮಾಹಿತಿ ರವಾನಿಸಿ ಎಂದು ಕರೆ ನೀಡಿದರು.
   ಎಪಿಎಂಸಿ ಸದಸ್ಯ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ರೈತರು ಬೆಳೆದ ಎಲ್ಲಾ ಬೆಳೆಗಳಿಗೂ ವೈಜ್ಞಾನಿಕ ಬೆಲೆ ನಿಗದಿಯಾಗಬೇಕಿದೆ. ತಾನು ಬೆಳೆದ ಕೃಷಿ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಪರದಾಟ ನಡೆಸಿದರೆ, ಮತ್ತೊಂದು ಕಡೆ ವರ್ತಕರು ಲಕ್ಷಾಂತರ ರೂಗಳ ಲಾಭ ಪಡೆದು ನೆಮ್ಮದಿ ಕಾಣುತ್ತಾನೆ. ಈರುಳ್ಳಿ ಬೆಲೆಯೇ ಸೂಕ್ತ ನಿದರ್ಶನವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತಪರ ಯೋಜನೆ ನೀಡುತ್ತಿದೆ. ಆದರೆ ಕೃಷಿ ನಡೆಸಲು ಅವಶ್ಯವಿರುವ ನೀರಾವರಿ ಮತ್ತು ವಿದ್ಯುತ್ ಒದಗಿಸಿದರೆ ಸಾಕು ದೇಶವನ್ನೆ ಶ್ರೀಮಂತಗೊಳಿಸುವ ಶಕ್ತಿ ರೈತರಲ್ಲಿದೆ ಎಂದರು.
    ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಂ.ಮಮತಾ, ಸದಸ್ಯರಾದ ಎಚ್.ಸಿ.ಪ್ರಭಾಕರ್, ವೀರಭದ್ರಯ್ಯ, ತಿಮ್ಮರಾಜು, ಮುಖಂಡರಾದ ಹೊದಲೂರು ವಿಜಯ್‍ಕುಮಾರ್, ಧರ್ಮೇಗೌಡ, ಸಹಾಯಕ ಕೃಷಿ ನಿರ್ದೇಶಕ ಕೆಂಪಚೌಡಪ್ಪ, ಆಹಾರ ನಿರೀಕ್ಷಕ ಸಿದ್ದೇಗೌಡ, ಎಪಿಎಂಸಿ ಸಹಾಯಕ ಕಾರ್ಯದರ್ಶಿ ವಿ.ನಂದೀಶ್, ಸಿಬ್ಬಂದಿಗಳಾದ ಎಚ್.ಎಸ್.ರಾಜ್‍ಕುಮಾರ್, ಕೆ.ಮಧುಸೂದನ್ ಮುಂತಾದವರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap