ಚಿಕ್ಕನಾಯಕನಹಳ್ಳಿ
ತಾಲ್ಲೂಕಿನಲ್ಲಿ ಸದ್ದಿಲ್ಲದೆ ಡಕಾಯಿತರು ತಮ್ಮ ಕೈ ಚಳಕ ತೋರುತ್ತಿದ್ದಾರೆ, ಕಳೆದ ಹದಿನೈದು ದಿನದೊಳಗೆ ಗ್ರಾಮೀಣ ಹಾಗೂ ಪಟ್ಟಣಗಳಲ್ಲಿ ನಗದನ್ನು ದೋಚಿ ಪರಾರಿಯಾಗುತ್ತಿದ್ದಾರೆ.
ಡಕಾಯಿತರ ಗುಂಪೊಂದು ಕಳೆದ ವಾರದಿಂದೀಚೆಗೆ ತಾಲ್ಲೂಕಿನ ಗ್ರಾಮೀಣ ಭಾಗವಾದ ಹೊನ್ನೆಬಾಗಿಯಲ್ಲಿ ನಾಲ್ಕೈದು ಮನೆಯಲ್ಲಿ ಕಳ್ಳತನ ಮಾಡಿದ್ದಾರೆ ಹಾಗೂ ಮಂಗಳವಾರ ರಾತ್ರಿ ಪಟ್ಟಣದಲ್ಲಿ ಪೊಲಿಸರ ವೇಷದಲ್ಲಿ ನುಗ್ಗಿ ಮನೆಯಲ್ಲಿದ್ದವರನ್ನು ಕಟ್ಟಿಹಾಕಿ ಹಣ ದೋಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಪಟ್ಟಣದ ನ್ಯಾಯಾಲಯದ ಪಕ್ಕ ಕನಕಗಿರಿ ಬಡಾವಣೆಯಲ್ಲಿ ದರೋಡೆಕೋರರು ಪೊಲಿಸರ ವೇಷ ಧರಿಸಿ ನಿವೃತ್ತ ಬೆಸ್ಕಾಂ ನೌಕರ ಎನ್.ಶ್ರೀಕಂಠಯ್ಯ ಎಂಬುವವರ ಮನೆಗೆ ನುಗ್ಗಿದ ಸುಮಾರು 10 ಮಂದಿ ದರೋಡೆಕೋರರು ಮನೆಯೊಳಗಿದ್ದ ಇಬ್ಬರು ಮಹಿಳೆಯರನ್ನು ಕಟ್ಟಿಹಾಕಿ 3 ಲಕ್ಷ ಹಣ ದೋಚಿದ್ದಾರೆ.
ದರೋಡೆಕೋರರು ಸುಮಾರು 25 ರಿಂದ 30 ವರ್ಷ ವಯಸ್ಸಿನ ಯುವಕರಾಗಿದ್ದಾರೆ. ಆಗಮಿಸಿದ್ದ ದರೋಡೆಕೋರರಲ್ಲಿ ಇಬ್ಬರು ಪೊಲಿಸ್ ಸಮವಸ್ತ್ರ ಧರಿಸಿದ್ದರು ಎನ್ನಲಾಗಿದೆ. ಹಾಗೂ ಮಾಸ್ಕ್ ಧರಿಸಿದ್ದರು ಎಂದು ತಿಳಿದುಬಂದಿದೆ.
ಮಂಗಳವಾರ ಸಂಜೆ ಶ್ರೀಕಂಠಯ್ಯನವರು ವಾಯುವಿಹಾರಕ್ಕೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಅವರ ಪತ್ನಿ ಕೆ.ವಿಜಯ ಹಾಗೂ ನಾದಿನಿ ಕೆ.ಗಿರಿಜಾ ಇದ್ದರು. ಈ ಸಂದರ್ಭದಲ್ಲಿ ಮನೆಗೆ ನುಗ್ಗಿದ ದರೋಡೆಕೋರರಲ್ಲಿ ಇಬ್ಬರು ಪೊಲಿಸ್ ವೇಷಧಾರಿಗಳು ಬಾಗಿಲು ತೆಗೆಸಿ ಮನೆಗೆ ನುಗ್ಗಿದ್ದಾರೆ, ತಕ್ಷಣ ಅವರ ಗುಂಪಿನ ಜನರು ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆಯರನ್ನು ಬೆದರಿಸಿ, ಅವರನ್ನು ಕಟ್ಟಿಹಾಕಿ ಮನೆಯಲ್ಲಿದ್ದ 3ಲಕ್ಷ ಹಣವನ್ನು ಕದ್ದೊಯ್ದಿದ್ದಾರೆ. ನಗದನ್ನು ದೋಚಿದ ದರೋಡೆಕೋರರು ಚಿನ್ನಾಭರಣಗಳನ್ನು ಕದ್ದಿಲ್ಲ.
ಗ್ರಾಮೀಣ ಭಾಗವಾದ ಹೊನ್ನೆಬಾಗಿಯಲ್ಲಿ ಐದು ಮನೆಯಲ್ಲಿ ಕಳ್ಳತನವಾಗಿದೆ. ಕಳ್ಳತನವಾಗುವಾಗ ಮನೆಯವರು ರಾತ್ರಿ ಮನೆಯಲ್ಲಿಯೇ ನಿದ್ರಿಸುತ್ತಿದ್ದರು ಎನ್ನಲಾಗಿದೆ, ಹೊನ್ನೆಬಾಗಿಯ ಲೋಕೇಶ್ ಎಂಬುವವರ ಮನೆಯವರು ಮಾತ್ರ ಮನೆಯಲ್ಲಿ ಇರಲಿಲ್ಲ ಇವರ ಮನೆಯಲ್ಲಿ 50ಸಾವಿರಕ್ಕೂ ಹೆಚ್ಚು ಹಣ ದೋಚಲಾಗಿದೆ. ಹೊನ್ನೆಬಾಗಿಯಲ್ಲಿ ಕಳ್ಳತನ ಮಾಡುವದಕ್ಕೂ ಮುನ್ನ ಬುಳ್ಳೇನಹಳ್ಳಿ ಗ್ರಾಮದಲ್ಲಿ ಮನೆಯ ಬಾಗಿಲನ್ನು ಹೊಡೆದಿದ್ದಾರೆ, ಅಲ್ಲಿ ಏನೂ ದೊರಕದ ನಂತರ ಹೊನ್ನೆಬಾಗಿಗೆ ಆಗಮಿಸಿ ಕಳ್ಳತನ ಮಾಡಿದ್ದಾರೆ ಒಂದಕ್ಕಿಂತ ಹೆಚ್ಚಿನ ಗುಂಪುಗಳು ಸೇರಿ ಈ ಭಾಗದಲ್ಲೂ ಕಳ್ಳತನ ಮಾಡುತ್ತಿದ್ದಾರೆ ಎನ್ನಲಾಗಿದೆ.ಈ ಸಂಬಂಧ ಚಿ.ನಾ.ಹಳ್ಳಿ ಪೊಲಿಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ