ಹೇಮಾವತಿ ನಾಲೆ ಆಧುನೀಕರಣಕ್ಕೆ ಸಂಸದರ ಆಗ್ರಹ

ತುಮಕೂರು

       ಹೇಮಾವತಿ ನಾಲೆಯನ್ನು ಆಧುನಿಕರಣಗೊಳಿಸಿ ಜಿಲ್ಲೆಗೆ ಪೂರ್ಣ ಪ್ರಮಾಣದ ಹೇಮಾವತಿ ನೀರು ಪಡೆಯಲು ನೆರವಾಗಬೇಕು ಹಾಗೂ ಕೇಳಿಬಂದಿರುವ ಹೇಮಾವತಿ ನಾಲೆಗೆ ಎಕ್ಸ್‍ಪ್ರೆಸ್ ಕೆನಾಲ್ ನಿರ್ಮಾಣ ಪ್ರಯತ್ನವನ್ನು ಚರ್ಚಿಸದೆ ಕೈ ಬಿಡಬೇಕು ಎಂದು ಸಂಸದ ಎಸ್ ಪಿ ಮುದ್ದಹನುಮೇಗೌಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

       ಈ ಸಂಬಂಧ ತಾವು ಮುಖ್ಯಮಂತ್ರಿ ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಾ. ಪರಮೇಶ್ವರ್, ಬೃಹತ್ ನೀರಾವರಿ ಸಚಿವ ಡಿ ಕೆ ಶಿವಕುಮಾರ್, ಜಿಲ್ಲೆಯ ಸಚಿವರಾದ ಎಸ್ ಆರ್ ಶ್ರೀನಿವಾಸ್, ವೆಂಕಟರವಣಪ್ಪ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಮಾಡಿರುವ ಜೊತೆಗೆ ಪತ್ರ ಬರೆದಿರುವುದಾಗಿ ಪತ್ರಕಾಗೋಷ್ಠಿಯಲ್ಲಿ ಹೇಳಿದರು.

        ಜಿಲ್ಲೆಯ ಎಲ್ಲಾ ಶಾಸಕರು, ವಿಧಾನಪರಿಷತ್ ಸದಸ್ಯರು ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಬೇಕೆಂದು ಮನವಿ ಮಾಡಿದ ಸಂಸದರು, ಹೇಮಾವತಿ ನಾಲೆಗೆ ಎಕ್ಸ್‍ಪ್ರೆಸ್ ಕೆನಾಲ್ ನಿರ್ಮಿಸುವ ಪ್ರಯತ್ನ ನೀರಾವರಿ ಯೋಜನೆ ಪರಿಕಲ್ಪನೆಗೆ ವಿರುದ್ಧವಾದದ್ದು, ಇದಕ್ಕೆ ರೈತರು, ನೀರಾವರಿ ಹೋರಾಟಗಾರರು, ನೀರಾವರಿ ತಜ್ಞರೂ ವಿರೋಧವ್ಯಕ್ತಪಡಿಸಿದ್ದಾರೆ, ತಾವೂ ವಿರೋಧಿಸುವುದಾಗಿ ಹೇಳಿದರು.

        ತುಮಕೂರು ಜಿಲ್ಲೆಗೆ ಹಂಚಿಕೆಯಾಗಿರುವ 24.8 ಟಿಎಂಸಿ ಹೇಮಾವತಿ ನೀರನ್ನು ಈವರೆಗೆ ಯಾವ ವಷರ್ವೂ ಪೂರ್ಣಪ್ರಮಾಣದಲ್ಲಿ ಪಡೆಯಲು ಸಾಧ್ಯವಾಗಿಲ್ಲ. ಈ ವರ್ಷ ಹೇಮಾವತಿ ಜಲಾಶಯ ವ್ಯಾಪ್ತಿಯಲ್ಲಿ ಸಾಕಷ್ಟು ಮಳೆಯಾಯಿತು. ಜಲಾಶಯದಲ್ಲಿ ಸಾಕಷ್ಟು ಪ್ರಮಾಣದ ನೀರು ಸಂಗ್ರಹವಾಗಿತ್ತು, ತಮಿಳು ನಾಡಿಗೆ ಬಿಡಬೇಕಾದ ನೀರು ಬಿಟ್ಟರೂ ಹೆಚ್ಚಿನ ನೀರು ಸಮುದ್ರ ಸೇರಿತು.

       ಆದರೆ, ಜಿಲ್ಲೆಗೆ ಪಡೆಯಬೇಕಾದ ನೀರು ಪಡೆಯಲು ಸಾಧ್ಯವಾಗಲಿಲ್ಲ. ಇದಕ್ಕೆ ಪ್ರಮುಖ ಕಾರಣ, ಹೇಮಾವತಿ ನಾಲೆಯ ದುಸ್ಥಿತಿ. ನಾಲೆಯುದ್ದಕ್ಕೂ ಹೂಳು ತುಂಬಿದೆ, ಗಿಡಮರ ಬೆಳೆದು ನೀರು ಸರಾಗವಾಗಿ ಹರಿದುಬರಲು ಸಾಧ್ಯವಾಗುತ್ತಿಲ್ಲ. ಹೀಗಾಗಿ 0ಯಿಂದ 187ನೇ ಕಿಮಿವರೆಗೆ ನಾಲೆಯನ್ನು ಆಧುನೀಕರಣಗೊಳಿಸಿ, ಸುಸ್ಥಿತಿ ಕಾಪಾಡಬೇಕು, ಆಗ ಮಾತ್ರ ನಮ್ಮ ಪಾಲಿನ ನೀರು ಪಡೆಯಲು ಸಾಧ್ಯ ಎಂದು ಮುದ್ದಹನುಮೇಗೌಡರು ಹೇಳಿದರು.

         ಜಿಲ್ಲೆಯ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಹೇಮಾವತಿ ನಾಲೆ ಆಧುನಿಕರಣಕ್ಕಾಗಿ ಅಧಿವೇಶನದಲ್ಲಿ ಚರ್ಚೆ ಮಾಡಿ ಸಹಕರಿಸಬೇಕು. ಹಾಗೇ, ನೀರಾವರಿ ವ್ಯವಸ್ಥೆಯಲ್ಲಿ ಎಕ್ಸ್‍ಪ್ರೆಸ್ ಕೆನಾಲ್ ಎಂಬುದು ಅಡ್ಡದಾರಿ ವ್ಯವಸ್ಥೆ ಅದನ್ನು ಪ್ರೋತ್ಸಾಹಿಸದೆ ವಿರೋಧಿಸಬೇಕು ಎಂದು ಮನವಿ ಮಾಡಿದರು.

ವರಿಷ್ಠರ ತೀರ್ಮಾನ

        ಬರುವ ಲೋಕಸಭಾ ಚುನಾವಣೆಯಲ್ಲಿ ತಾವು ಅರ್ಹ ಹಾಗೂ ಗೆಲ್ಲುವ ಅಭ್ಯರ್ಥಿಯೋ, ಅಲ್ಲವೋ ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಕ್ಷೇತ್ರದ ಅಭಿವೃದ್ಧಿ ಬಗ್ಗೆಯಷ್ಟೇ ಚಿಂತನೆ ಮಾಡುತ್ತೇನೆ, ಅಭ್ಯರ್ಥಿ ಆಯ್ಕೆ ವಿಚಾರ ಪಕ್ಷದ ನಾಯಕರಿಗೆ ಬಿಟ್ಟದ್ದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.ಮುಖಂಡರಾದ ಆರ್ ಕಾಮರಾಜ್, ಗೂಳೂರು ವಿಜಯಕುಮಾರ್, ರಾಯಸಂದ್ರ ರವಿಕುಮಾರ್ ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap