ಪ್ರಜಾಪ್ರಭುತ್ವ ಯಾವುದೇ ಒಂದು ಗುಂಪಿಗೆ ಸೀಮಿತವಲ್ಲ : ಸಂತೋಷ್ ಹೆಗ್ಡೆ

ಬೆಂಗಳೂರು:

     ಪ್ರಜಾಪ್ರಭುತ್ವ ಎನ್ನುವುದು ಯಾವುದೇ ಒಂದು ಗುಂಪಿಗೆ ಸೀಮಿತವಲ್ಲ. ಪ್ರಜಾಪ್ರಭುತ್ವದ ಮೂಲತತ್ವಗಳು ಉಳಿಯಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಇಂದಿಲ್ಲಿ ಪ್ರತಿಪಾದಿಸಿದರು.

      ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಅಥೆನ್ಸ್ ರಾಜ್ಯಾಡಳಿತ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, 2 ಸಾವಿರ ವರ್ಷಗಳ ಹಿಂದೆಯೇ ಅಥೆನ್ಸ್‍ನಲ್ಲಿ ಪ್ರಜಾಪ್ರಭುತ್ವ ಜಾರಿಯಾಗಿದೆ. ಜನರಿಂದ ಜನರಿಗಾಗಿ ಸರ್ಕಾರ ಎಂಬ ಕಲ್ಪನೆ ಅಲ್ಲಿಂದಲೇ ಶುರುವಾಗಿದೆ. ಹೀಗಾಗಿ ಪ್ರಜಾಸತ್ತೆಯ ಮೂಲ ಬೇರುಗಳನ್ನು ರಕ್ಷಿಸಬೇಕಿದೆ ಎಂದರು. ಕೃತಿ ಬಿಡುಗಡೆ ಮಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮೌಲ್ಯ ಕಳೆದುಕೊಳ್ಳುತ್ತಿರುವ ಪ್ರಸಕ್ತ ರಾಜಕೀಯ ಸನ್ನಿವೇಶ ತಮಗೆ ವಿಷಾದ ಮೂಡಿಸಿದೆ. ನಮ್ಮ ರಾಜಕೀಯ ವ್ಯವಸ್ಥೆ ಸಾಕಷ್ಟು ಹದಗೆಟ್ಟಿದೆ. ಮತದಾನ ಸೇರಿದಂತೆ ಪ್ರಜಾಪ್ರಭುತ್ವದ ಎಲ್ಲಾ ಆಯಾಮಗಳಲ್ಲಿಯೂ ಇಂದು ಜನ ಸಕ್ರಿಯಾಗಿ ಪಾಲ್ಗೊಳ್ಳಬೇಕಾಗಿದೆ ಎಂದರು.

     ಸ್ವಾತಂತ್ರ ಬಂದ ನಂತರ ಜನಸಾಮಾನ್ಯರು ಹೊಸ ವ್ಯವಸ್ಥೆ ಬಗ್ಗೆ ಆಶಾವಾದ ತಾಳಿದರು. ತಮ್ಮೆಲ್ಲ ಸಂಕಷ್ಟಗಳೂ ಹೊಸ ವ್ಯವಸ್ಥೆಯಿಂದ ನಿವಾರಣೆ ಆಗುತ್ತದೆ ಎಂದು ಬಯಸಿದರು. ಮತದಾನ ಮಾಡಲು ಮತಗಟ್ಟೆಗಳಿಗೆ ಗಾಂಧಿ, ಸರ್‍ದಾರ್ ಪಟೇಲ್ ಮುಂತಾದ ರಾಷ್ಟ್ರೀಯ ನಾಯಕರ ಭಾವಚಿತ್ರ ಹಿಡಿದು ಸರತಿ ಸಾಲಿನಲ್ಲಿ ಹೋಗುತ್ತಿದ್ದುದನ್ನು ನಾನು ನೋಡಿದ್ದೇನೆ. ಮತಗಟ್ಟೆಗೆ ತೆರಳುವ ಮುನ್ನ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸಿದ್ದನ್ನು ಕಂಡಿದ್ದೇನೆ. ಅವರ ಆಶೋತ್ತರ ಈಡೇರಬೇಕು ಎಂದರು.

     ಎಚ್.ವಿಶ್ವನಾಥ್ ಮಾತನಾಡಿ ಅಥೆನ್ಸ್‍ನಲ್ಲಿ 20 ದಿನಗಳ ಕಾಲ ಪ್ರವಾಸ ಮಾಡಿ ಅಧ್ಯಯನದ ಮೂಲಕ ಕೃತಿ ರಚಿಸಿದ್ದೇನೆ. ಈ ಕೃತಿಯನ್ನು ಅಲ್ಲಿನ ಸಂಸತ್ತಿಗೂ ನೀಡುತ್ತಿದ್ದೇನೆ. ಅಥೆನ್ಸ್‍ನಲ್ಲಿಯೂ ಮೂಢನಂಬಿಕೆಗಳಿವೆ. ಆದರೆ ಪ್ರಜಾತಂತ್ರದ ಬೇರುಗಳು ಗಟ್ಟಿಯಾಗಿವೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link