ಬೆಂಗಳೂರು
ಶಾಸಕ ಆನಂದ್ ಸಿಂಗ್ ಮೇಲೆ ಕಂಪ್ಲಿ ಶಾಸಕ ಗಣೇಶ್ ಹಲ್ಲೆ ಮಾಡಿರುವ ಪ್ರಕರಣವನ್ನು ಇಲಾಖೆ ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದು, ಗಣೇಶ್ ಅವರಿಗೆ ಜಾಮೀನು ಸಿಗುವ ಅವಕಾಶವಿಲ್ಲ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಪ್ಲಿ ಶಾಸಕ ಗಣೇಶ್ ಅವರನ್ನು ಬಂಧಿಸಲು ಪೊಲೀಸರು ನಿರಂತರ ಪ್ರಯತ್ನದಲ್ಲಿದ್ದಾರೆ. ಆದಷ್ಟು ಬೇಗ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆಯಿದೆ ಎಂದರು.
ಜಾಮೀನು ಸಿಗುವವರೆಗೂ ಪೊಲೀಸ್ ಕೈಗೆ ಸಿಗಬೇಡಿ ಎಂದು ಅವರ ವಕೀಲರು ಗಣೇಶ್ ಅವರಿಗೆ ಸಲಹೆ ಕೊಟ್ಟಿರಬಹುದು. ಆದರೆ ಅವರು ಎಲ್ಲೆಲ್ಲಿ ಅಡಗಿರಬಹುದು ಎನ್ನುವ ಸಂಶಯ ಇರಬಹುದೋ ಅಲ್ಲೆಲ್ಲಾ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆದಷ್ಟು ಬೇಗ ಅವರನ್ನು ಬಂಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಗಣೇಶ್ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬುದಕ್ಕೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಕಾನೂನಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟಪಡಿಸಿದರು.