ಮೈಮುಲ್ ಅಕ್ರಮ : ಇಲಾಖೆ ತನಿಖೆಗೆ ಆದೇಶ ನೀಡಲಾಗಿದೆ

ಮೈಸೂರು:

      ಮೈಮುಲ್ ಅಕ್ರಮ ನೇಮಕಾತಿ ವಿಚಾರಕ್ಕೆ ಸಂಬಂಧಿಸಿ ಇಲಾಖೆ ತನಿಖೆಗೆ ಆದೇಶ ನೀಡಲಾಗಿದೆ. ತನಿಖಾ ವರದಿ ಬಂದ ಮೇಲೆ ಲೋಪದೋಷಗಳಿದ್ದರೆ ಸರಿಪಡಿಸಲಾಗುವುದು. ಯಾರೋ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿ ಇಡೀ ನೇಮಕಾತಿ ಪ್ರಕ್ರಿಯೆ ಕೈಬಿಡಲು ಸಾಧ್ಯವಿಲ್ಲ ಎಂದು ಸಹಕಾರ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್ ಖಡಕ್ ಆಗಿ ಹೇಳಿದ್ದಾರೆ.

     ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಭಟನೆ, ಬ್ಲಾಕ್‌ಮೇಲ್‌ಗಳಿಗೆ ನಾವು ಬಗ್ಗುವುದಿಲ್ಲ ಎಂದು ಅವರು ಶಾಸಕ ಸಾ.ರಾ. ಮಹೇಶ್ ಅವರಿಗೆ ತಿರುಗೇಟು ನೀಡಿದರು. ಸಿಬ್ಬಂದಿ ಇಲ್ಲದೆ ಡೈರಿ ನಡೆಸಲು ಸಾದ್ಯ ಇಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹೇಳುತ್ತಾರೆ. ಹಾಗಾಗಿ ಆರು ತಿಂಗಳಿನಿಂದಲೂ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. 

      ಈಗ ನೇಮಕಾತಿಯಾಗುತ್ತಿರುವ ಹುದ್ದೆಗಳಿಗೆ ಅನುಮೋದನೆಯನ್ನು ತಂದವರೇ ಸಾ.ರಾ.ಮಹೇಶ್ ಅವರು. ಈ ಹಿಂದೆ ಮೈಮುಲ್‌ನ ಅಧಿಕಾರ ಯಾರ ಕೈಯಲ್ಲಿ ಇತ್ತು ಎಂಬುದು ಎಲ್ಲರಿಗೂ ಗೊತ್ತು. ಸಾ. ರಾ ಮಹೇಶ್ ಆರೋಪ ಮಾಡುತ್ತಿದ್ದಾರೆ ಎಂದು ನೇಮಕಾತಿ ಪ್ರಕ್ರಿಯೆ ನಿಲ್ಲಿಸಲು ಸಾಧ್ಯವಿಲ್ಲ. ಯಾರು ಏನಾದರೂ ಹೇಳಿಕೊಳ್ಳಲಿ ಅದಕ್ಕೆಲ್ಲಾ ತಾವು ಉತ್ತರ ಕೊಡುವುದಿಲ್ಲ. ಇಲಾಖೆ ತನಿಖೆಗೆ ಆದೇಶ ಕೊಟ್ಟಿದ್ದೇವೆ. ತನಿಖೆ ವರದಿ ಬಂದ ಮೇಲೆ ಲೋಪದೋಷಗಳಿದ್ದರೆ ಸರಿಪಡಿಸುತ್ತೇವೆ. ಯಾರೋ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿ ಇಡೀ ನೇಮಕಾತಿ ಪ್ರಕ್ರಿಯೆ ಕೈಬಿಡಲು ಸಾಧ್ಯವಿಲ್ಲ ಎಂದು ಖಡಕ್ ಆಗಿ ಹೇಳಿದರು.

     ಮಹಾರಾಷ್ಟ್ರದಿಂದ ಬಂದಿರುವ ಒಬ್ಬರಿಗೆ ಕೊರೊನಾ ಬಂದಿದೆ. ಮತ್ತೊಬ್ಬ ವ್ಯಕ್ತಿಯಲ್ಲಿಯೂ ಕೊರೋನಾ ಸೋಂಕಿನ ಲಕ್ಷ್ಮಣಗಳಿವೆ. ಸದ್ಯ ಮೈಸೂರಿನಲ್ಲಿ ಕೊರೋನಾ ನಿಯಂತ್ರಣದಲ್ಲಿದೆ. ಮುಂಬೈ ಸೇರಿದಂತೆ ಹೊರ ರಾಜ್ಯದಿಂದ ಬಂದವರ ಕ್ವಾರಂಟೈನ್ ಆಗುತ್ತಿದೆ. ಜಿಲ್ಲಾಡಳಿತ ಅದಕ್ಕೆ ಬೇಕಾದ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.

     ಮತ್ತೊಂದೆಡೆ ಶಾಸಕ ಜಿ.ಟಿ.ದೇವೇಗೌಡ ಅವರು ಸಾ.ರಾ.ಮಹೇಶ್ ಅವರ ವಿರುದ್ಧ ಹರಿಹಾಯ್ದಿದ್ದು, ಸಾ.ರಾ.ಮಹೇಶ್ ಅವರಿಗೆ ಎಲ್ಲವೂ ಗೊತ್ತು. ಅವರಿಗೆ ಇರುವಷ್ಟು ಬುದ್ಧಿವಂತಿಕೆ ತಮಗೆ ಇಲ್ಲ ಎಂದು ಸ್ವಪಕ್ಷದ ಶಾಸಕನ ವಿರುದ್ಧ ಟೀಕಿಸಿದ್ದಾರೆ. 

     ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಸದಸ್ಯರು ಅವರವರ ಕೆಲಸ ಮಾಡಬೇಕು. ಅದಕ್ಕೆ ತಾವು ಅವಕಾಶ ಕಲ್ಪಿಸುತ್ತಿದ್ದೇನೆ. ಶಾಸಕನಾಗಿ ತಾವೇ  ಎಲ್ಲವನ್ನು ಮಾಡಬೇಕು ಎನ್ನುವುದು ಸಾ.ರಾ.ಮಹೇಶ್ ಅವರ ಬುದ್ಧಿ. ಸಾ.ರಾ.ಮಹೇಶ್ ಏನು ಕೆಲಸ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಮೈಮುಲ್, ಡಿಸಿಸಿ ಬ್ಯಾಂಕ್ ಮುಂತಾದವು ಸ್ವಾಯತ್ತ ಸಂಸ್ಥೆಗಳು. ಅವುಗಳ ನಿರ್ವಹಣೆ ಮಾಡುವುದು ಸರ್ಕಾರದ ಜವಾಬ್ದಾರಿ. ಎಲ್ಲವನ್ನೂ ತಾವೇಕೇ ಮಾಡಲಿ. ತಮಗೆ ಮಾಡಲು ಬೇರೆ ಕೆಲಸಗಳಿವೆ. ಎಲ್ಲಾ ವಿಚಾರದಲ್ಲೂ ಮೂಗು ತೂರಿಸುವುದಕ್ಕೆ ನಾನು ಸಾ.ರಾ. ಮಹೇಶ್ ಅಲ್ಲ ಎಂದು ಮೈಸೂರಿನಲ್ಲಿ ಶಾಸಕ ಜಿ.ಟಿ. ದೇವೇಗೌಡ ಹರಿಹಾಯ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap