ಉಪ ತಹಸೀಲ್ದಾರ್ ಕೆ.ರಾಜೇಶ್ ಇನ್ನಿಲ್ಲ

ಶಿರಾ

   ಶಿರಾ ತಾಲ್ಲೂಕಿನ ಹುಲಿಕುಂಟೆ, ಕಸಬಾ ಹಾಗೂ ಜಿಲ್ಲೆಯ ವಿವಿಧೆಡೆ ಕಂದಾಯ ಇಲಾಖೆಯಲ್ಲಿ ರಾಜಸ್ವ ನಿರೀಕ್ಷಕರಾಗಿದ್ದು, ನಂತರ ಉಪ ತಹಸೀಲ್ದಾರ್ ಕೂಡ ಆಗಿ ಸೇವೆ ಸಲ್ಲಿಸಿದ್ದ ಶಿರಾ ತಾ.ಬೂವನಹಳ್ಳಿ ಸಮೀಪದ ಅಜ್ಜಯ್ಯನ ಪಾಳ್ಯದ ಕೆ.ರಾಜೇಶ್ (50) ಹೃದಯಾಘಾತದಿಂದ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.

    ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ರಾಜಸ್ವ ನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದ ರಾಜೇಶ್ ಕಳೆದ ನಾಲ್ಕು ವರ್ಷಗಳ ಹಿಂದಷ್ಟೇ ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿಗೆ ಉಪ ತಹಸೀಲ್ದಾರ್ ಆಗಿ ನೇಮಕಗೊಂಡಿದ್ದರು.

    ಮಂಗಳವಾರ ಬೆಳಗ್ಗೆ ಶಿರಾದ ಅವರ ನಿವಾಸದಲ್ಲಿದ್ದಾಗ ತೀವ್ರವಾದ ಎದೆ ನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಕೂಡಲೇ ಶಿರಾ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿಯೇ ರಾಜೇಶ್ ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟರು ಎನ್ನಲಾಗಿದೆ.

    ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿರುವ ರಾಜೇಶ್ ಒಬ್ಬ ಭಾವನಾ ಜೀವಿಯೂ ಆಗಿದ್ದು, ಕಂದಾಯ ಇಲಾಖೆಯಲ್ಲಿ ಸಾರ್ವಜನಿಕರಿಂದ ಪ್ರಶಂಸೆಗೂ ಒಳಗಾಗಿದ್ದರು. ಮಂಗಳವಾರ ಸಂಜೆ 4.30ಕ್ಕೆ ಬೂವನಹಳ್ಳಿ ಸಮೀಪದ ಅವರ ಸ್ವಗೃಹವಾದ ಅಜ್ಜಯ್ಯನಪಾಳ್ಯದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಶಾಸಕ ಬಿ.ಸತ್ಯನಾರಾಯಣ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ತಾ.ಜೆ.ಡಿ.ಎಸ್. ಅಧ್ಯಕ್ಷ ಆರ್.ಉಗ್ರೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್. ಮಂಜುನಾಥ್ , ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿ ಬೂವನಹಳ್ಳಿ ನಾಗರಾಜು, ಹಿರಿಯೂರು ತಹಸೀಲ್ದಾರ್ ಕಾಂತರಾಜು ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link