ದಾವಣಗೆರೆ:
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಜೊತೆಗೆ ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವ ಸಂಕಲ್ಪ ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತ್ಯ ಸಂಚಾಲಕ ಜಿ.ಬಸವರಾಜ ಕರೆ ನೀಡಿದರು.
ನಗರದ ಅಭಿನವ ರೇಣುಕ ಮಂದಿರದ ಆವರಣದಲ್ಲಿ ಶುಕ್ರವಾರ ಸಂಜೆ ವಿಜಯದಶಮಿಯ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್, ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿ ವತಿಯಿಂದ ಏರ್ಪಡಿಸಿದ್ದ ಅಂಬುಛೇಧನ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ವಿಜಯ ದಶಮಿಯ ಪವಿತ್ರ ದಿನದಂದು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸುವ ಜೊತೆಗೆ ದುಷ್ಟ ಶಕ್ತಿಗಳನ್ನು ಮಟ್ಟ ಹಾಕುವ ಸಂಕಲ್ಪ ಮಾಡಬೇಕೆಂದು ಕಿವಿಮಾತು ಹೇಳಿದರು.
ಅಧರ್ಮ, ಅನ್ಯಾಯ, ರಾಕ್ಷಸೀ ಗುಣಗಳನ್ನು ನಾಶ ಮಾಡಿ, ಸತ್ಯ, ನ್ಯಾಯ, ಧರ್ಮಕ್ಕೆ ಜಯ ಕೊಟ್ಟ ದಿನವೇ ವಿಜಯದಶಮಿಯಾಗಿದೆ. ಆದ್ದರಿಂದ ಈ ಹಬ್ಬವು ನಮಗೆ ಅತ್ಯಂತ ಶ್ರೇಷ್ಠವಾಗಿದೆ. ತಮ್ಮ ಸ್ವಾರ್ಥಕ್ಕಾಗಿ ಇತರರ ಸುಖ ಬಲಿಕೊಟ್ಟು ಸಮಾಜಕ್ಕೆ ಕಂಟಕಪ್ರಾಯರಾಗಿರುವವರೇ ರಾಕ್ಷಸರು. ಅಂತಹ ರಾಕ್ಷಸರು, ಕೆಟ್ಟವರು ಈಗಲೂ ಇದ್ದಾರೆ. ಈಗಲೂ ಗೋಹತ್ಯೆ, ಲವ್ ಜಿಹಾದ್, ಆಕ್ರಮಣ, ಮತಾಂತರ, ಭಯೋತ್ಪಾದನೆ ನಡೆಯುತ್ತಿದ್ದು, ಇಂಥಹ ದುಷ್ಟಶಕ್ತಿಗಳ ಮೇಲೆ ಜಯ ಸಾಧಿಸುವ ಸಂಕಲ್ಪ ಮಾಡಬೇಕೆಂದು ಅವರು ಸಲಹೆ ನೀಡಿದರು.
ಎದುರಾಳಿ ಎಷ್ಟೇ ಬಲಿಷ್ಠನಾಗಿದ್ದರೂ ಅಂತಿಮ ಜಯ ಧರ್ಮ, ನ್ಯಾಯಕ್ಕೆ ಎಂಬುದಕ್ಕೆ ನಮ್ಮ ಇತಿಹಾಸದಲ್ಲಿ ಸಾಕ್ಷಿ ಸಿಗುತ್ತದೆ. ವಿರಾಟನ ಗೋವುಗಳನ್ನು ಕೌರವರು ಅಪಹರಿಸಿದಾಗ ಅರ್ಜುನ ಬನ್ನಿಮರಕ್ಕೆ ಪೂಜೆ ಮಾಡಿ, ಅಲ್ಲಿದ್ದ ಗಾಂಢೀವವನ್ನು ಎದೆಗೇರಿಸಿ ಜಯ ಸಾಧಿಸಿದ್ದನ್ನು ನೋಡುತ್ತೇವೆ. ದುಷ್ಟರಿಗೆ ಪಾಠ ಕಲಿಸಲು ಆಯುಧ ಬೇಕು. ನಮ್ಮ ಎಲ್ಲ ದೇವತೆಗಳ ಕೈಯಲ್ಲೂ ಆಯುಧಗಳಿವೆ. ಆದರೆ ಇಂದು ಪೆನ್, ಸ್ಕೂಟರ್, ಕಾರುಗಳನ್ನು ಪೂಜೆ ಮಾಡುತ್ತಿರುವುದು ದುರಂತ. ನಮ್ಮ ಆಯುಧಗಳಾದ ಖಡ್ಗ, ಬಂದೂಕುಗಳನ್ನು ಪೂಜಿಸಬೇಕು. ಕೆಟ್ಟವರಲ್ಲಿ ಭಯ ಹುಟ್ಟಿಸಲು ಆಯುಧ ಪೂಜೆ ಮಾಡಬೇಕೆಂದು ಹೇಳಿದರು.
ಉರಿ ದಾಳಿಯಲ್ಲಿ 19 ಭಾರತೀಯ ಸೈನಿಕರನ್ನು ಬಲಿ ತೆಗೆದುಕೊಂಡ ಪಾಕಿಸ್ತಾನಕ್ಕೆ ನಮ್ಮ ಸೈನ್ಯ ದಿಟ್ಟ ಉತ್ತರ ನೀಡಿದೆ. ಪಾಕಿಸ್ತಾನದ ಗಡಿಯೊಳಗೆ ನುಗ್ಗಿ, ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡುವ ಜೊತೆಗೆ 90ಕ್ಕೂ ಅಧಿಕ ಉಗ್ರರನ್ನು ಹತ್ಯೆ ಮಾಡಿದ್ದು ನಮ್ಮ ಸೇನೆಯ ಪೌರುಷಕ್ಕೆ ಸಾಕ್ಷಿಯಾಗಿದೆ. ಸರ್ಜಿಕಲ್ ಸ್ಟ್ರೈಕ್‍ನಿಂದಾಗಿ ಇಡೀ ಜಗತ್ತಿನಲ್ಲೇ ಹಿಂದೂಗಳು ಅತ್ಯಂತ ಶಕ್ತಿಶಾಲಿಗಳು, ತಮ್ಮನ್ನು ಕೆಣಕುವವರಿಗೆ ತಕ್ಕ ಉತ್ತರ ನೀಡಬಲ್ಲವರು ಎಂಬುದು ಸಾಬೀತಾಗಿದೆ. ನಾವು ಶಕ್ತಿ ಆರಾಧಕರು. ಪಾರ್ವತಿಯನ್ನು ನವದುರ್ಗೆಯರ ರೂಪದಲ್ಲಿ ಆರಾಧಿಸುವವರು. ಜಗತ್ತಿನಲ್ಲಿ ಶಕ್ತಿಗೆ ಮಾತ್ರವೇ ಬೆಲೆ. ಆದರೆ ಅದು ರಾಕ್ಷಸೀ, ದುಷ್ಟ ಶಕ್ತಿಯಾಗಬಾರದು. ಸಜ್ಜನರನ್ನು ಕಾಪಾಡುವ ಶಕ್ತಿಯಾಗಬೇಕು ಎಂದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಂಬುಛೇದನ ಮಾಡಿದ ನಂತರ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ವಹಿಸಿದ್ದರು. ಸಮಿತಿ ಅಧ್ಯಕ್ಷ ದೇವರಮನಿ ಶಿವಕುಮಾರ, ಸಂಚಾಲಕ ರಾಜಶೇಖರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ