ಬೆಂಗಳೂರು
ಬಿಡದಿ ಬಳಿಯ ಈಗಲ್ಟನ್ ರೆಸಾಟ್ಸ್ ನಲ್ಲಿ ಬಳ್ಳಾರಿಯ ಕಾಂಗ್ರೆಸ್ ಶಾಸಕರಾದ ಕಂಪ್ಲಿಯ ಜಿ.ಎನ್. ಗಣೇಶ್ ಮತ್ತು ವಿಜಯನಗರದ ಆನಂದ್ ಸಿಂಗ್ ನಡುವೆ ಪರಸ್ಪರ ಕಿತ್ತಾಟ ನಡೆದ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಒತ್ತಾಯಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಆನಂದ್ ಸಿಂಗ್ ಅವರ ತಲೆಗೆ ಹಲ್ಲೆ ಮಾಡಿದ್ದು, ಹೊಟ್ಟೆಗೆ ಇರಿಯಲಾಗಿದೆ ಎನ್ನುವ ಮಾಹಿತಿ ಇದೆ. ಈ ಪ್ರಕರಣವನ್ನು ಕಾಂಗ್ರೆಸ್ ನವರು ಮುಚ್ಚಿ ಹಾಕುವ ಪ್ರಯತ್ನ ನಡೆಸಿದ್ದಾರೆ. ಶಾಸಕರ ಜೀವದ ಪ್ರಶ್ನೆ ಇದಾಗಿದ್ದು, ಜನ ಪ್ರತಿನಿಧಿಗಳಿಗೆ ರಕ್ಷಣೆ ಇಲ್ಲವಾಗಿದ್ದು, ಇನ್ನು ಜನ ಸಾಮಾನ್ಯರ ಪಾಡೇನು ಎಂದು ಪ್ರಶ್ನಿಸಿದರು.
ಎದೆ ನೋವು ಬಂದ ಕಾರಣ ಆನಂದ್ ಸಿಂಗ್ ಆಸ್ಪತ್ರಗೆ ದಾಖಲಾಗಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ನೀಡಿದ ಹೇಳಿಕೆಯನ್ನು ಟೀಕಿಸಿದ ಅಶೋಕ್, ಆಸ್ಪತ್ರೆ ವೈದ್ಯರಿಂದಲೇ ಹೇಳಿಕೆ ಕೊಡಿಸಬೇಕು. ಆನಂದಸಿಂಗ್ ಪ್ರಕರಣ ಬಗ್ಗೆ ಅಪೆÇೀಲೋ ಆಸ್ಪತ್ರೆ ವೈದ್ಯಕೀಯ ವರದಿಯನ್ನು ಶೀಘ್ರ ಬಿಡುಗಡೆ ಮಾಡಬೇಕು. ಈ ಮೈತ್ರಿ ಸರ್ಕಾರ ಇಡೀ ಶಾಸಕರ ಮಾನ – ಮರ್ಯಾದೆಯನ್ನು ಬೀದಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆನಂದಸಿಂಗ್ ಅವರು ಆಸ್ಪತ್ರೆಗೆ ದಾಖಲಾಗಿಲ್ಲ. ಮದುವೆಗೆ ಹೋಗಿದ್ದಾರೆ ಎಂಬ ಸಚಿವ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಆರ್. ಅಶೋಕ್, ಆಸ್ಪತ್ರೆಯಲ್ಲಿ ಮದುವೆ ಬ್ಯಾಂಡ್ ಬಾರಿಸಲು ಹೇಗೆ ಸಾಧ್ಯ. ಕಾಂಗ್ರೆಸ್ ನಲ್ಲಿ ಗೂಂಡಾ ಸಂಸ್ಕೃತಿ ಇದ್ದು, ಇದರ ಪರಿಣಾಮ ರಾಜ್ಯದ ಎಲ್ಲಾ 224 ಶಾಸಕರು ತಲೆ ತಗ್ಗಿಸುವಂತಾಗಿದೆ. ಗುಂಡಾ ಸಂಸ್ಕೃತಿಗೆ ಕಾಂಗ್ರೆಸ್ ಹೆಸರುವಾಸಿ ಎಂದರು.
ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಒತ್ತಡ ಕೇಳಿ ಬಂದಿದ್ದು, ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ. ಈ ಪ್ರಕರಣವನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ