ಸ್ವಯಂ ಪ್ರೇರಿತರಾಗಿ ದೇವದಾಸಿ ಪದ್ಧತಿ ತೊರೆಯಿರಿ..!!

ದಾವಣಗೆರೆ:

     ಸ್ವಯಂ ಪ್ರೇರಿತರಾಗಿ ಅನಿಷ್ಠ ದೇವದಾಸಿ ಪದ್ಧತಿಯಿಂದ ನೀವಾಗಿಯೇ ಹೊರ ಬಂದು, ಇದಕ್ಕೆ ಇತಿಶ್ರೀ ಹಾಡಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ್ ಕರೆ ನೀಡಿದರು.

      ನಗರದ ರೋಟರಿ ಬಾಲ ಭವನದಲ್ಲಿ ಬುಧವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ದೇವದಾಸಿ ಪುನರ್ವಸತಿ ಯೋಜನೆ, ಜಿಲ್ಲಾ ವಕೀಲರ ಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ದೇವದಾಸಿ ಮಹಿಳೆಯರಿಗಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

      ಈ ಸಮಾಜದಿಂದ ದೇವದಾಸಿ ಪದ್ದತಿಯನ್ನು ತೊಲಗಿಸಲು ಯಾವುದೇ ಅಧಿಕಾರಿಗಳಿಂದ ಸಾಧ್ಯವಿಲ್ಲ. ಆದರೆ, ದೇವದಾಸಿಯರೇ ಈ ಪದ್ದತಿಯ ಆಚರಣೆಯನ್ನು ನಿಲ್ಲಿಸಿದಾಗ ಮಾತ್ರ ಇದರ ನಿರ್ಮೂಲನೆ ಸಾಧ್ಯವಾಗಲಿದೆ. ಅಲ್ಲದೇ, ಮುಂದೆ ಯಾರೂ ಸಹ ನಿಮ್ಮ ಮಕ್ಕಳನ್ನು ಈ ಅನಿಷ್ಟ ಪದ್ಧತಿಗೆ ದೂಡದೇ, ದೇವದಾಸಿ ಮಹಿಳೆಯರು ಯಾರಿಗೂ ದಾಸರಾಗದೇ ಈ ಪದ್ದತಿಯಿಂದ ಹೊರ ಬಂದು ಸಮಾಜದಲ್ಲಿ ಎಲ್ಲರಂತೆ ಸ್ವಾಭಿಮಾನಿಗಳಾಗಿ ಬದುಕಬೇಕೆಂದು ಕಿವಿಮಾತು ಹೇಳಿದರು.

     ದೇವದಾಸಿ ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಕಾನೂನಿನ ಬಗ್ಗೆ ಮಾಹಿತಿ ಪಡೆದು ಹೋದರೆ ಯಾವುದೇ ಪ್ರಯೋಜನ ವಾಗುವುದಿಲ್ಲ. ಬದಲಾಗಿ ನೀವು ನಿಮ್ಮ ಸಮಸ್ಯೆಗಳ ಕುರಿತು ಕಾನೂನಾತ್ಮಕವಾಗಿ ನಮ್ಮೊಂದಿಗೆ ಚರ್ಚಿಸಿ ಪರಿಹಾರಗಳನ್ನು ಕಂಡುಕೊಳ್ಳಬೇಕು. ಕಾನೂನು ಸೇವಾ ಪ್ರಾಧಿಕಾರದಿಂದ ಎಲ್ಲಾ ವರ್ಗದ ಮಹಿಳೆಯರಿಗೆ ಉಚಿತವಾಗಿ ಕಾನೂನು ಸೇವೆ ನೀಡಲಾಗುತ್ತಿದೆ. ಹೀಗಾಗಿ ಎಲ್ಲರೂ ಇದರ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.

       ದೇವದಾಸಿ ಮಹಿಳೆಯರು ಸರ್ಕಾರದ ಯೋಜನೆಗಳ ಸೇವೆಯನ್ನು ಪಡೆಯಲು ಅರ್ಜಿ ಸಲ್ಲಿಸಿದಲ್ಲಿ ಸಮಸ್ಯೆಗಳಾದರೆ ನಾವು ಅಧಿಕಾರಿಗಳೊಂದಿಗೆ ಕಾನೂನಾತ್ಮಾಕವಾಗಿ ಚರ್ಚಿಸಿ ನ್ಯಾಯಾ ಒದಗಿಸಿಕೊಡುತ್ತೇವೆ. ನಿಮಗೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕದ್ದಮ್ಮೆ ಹೂಡುವ ಮೊದಲು ನಮ್ಮೊಂದಿಗೆ ಮುಕ್ತವಾಗಿ ನಿಮ್ಮ ವಿಚಾರಗಳನ್ನು ಹಂಚಿಕೊಂಡರೆ ಕಾನೂನು ಪ್ರಾಧಿಕಾರದಿಂದ ಸೂಕ್ತ ಸಲಹೆ ಸೂಚನೆಗಳನ್ನು ನೀಡಲಾಗುವುದು ಎಂದರು.

       ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರಾದ ಎಲ್.ಎಚ್.ಅರುಣ್‍ಕುಮಾರ್ ಮಾತನಾಡಿ, ಹಿಂದಿನಿಂದಲೂ ಸಮಾಜವನ್ನು ಕಟ್ಟುವಂತಹ ಕೆಲಸದಲ್ಲಿ ಪುರುಷರಿಗಿಂತ ಮಹಿಳೆಯರ ಪಾತ್ರವೇ ದೊಡ್ದದಾಗಿದೆ. ಮಹಿಳೆಯರು ಇಂತಹ ದೇವದಾಸಿ ಅನಿಷ್ಠ ಆಚರಣೆಗಳಿಗೆ ಅನಿವಾರ್ಯವಾಗಿ ಒಳಗಾಗುತ್ತಿದ್ದಾರೆಯೇ ಹೊರತು ಯಾರೂ ಸ್ವಯಂ ಪ್ರೇರಿತರಾಗಿ ಬಂದಿರುವುದಿಲ್ಲ. ಇಂತಹವರಿಗೆ ಸಮಾಜದಲ್ಲಿ ಸೂಕ್ತ ಸ್ಥಾನಮಾನ ದೊರೆತರೆ ಇವರೂ ಸಹ ಸ್ವಯಂ ಪ್ರೇರಿತರಾಗಿ ಈ ಆಚರಣೆಯನ್ನು ನಿಲ್ಲಿಸುತ್ತಾರೆ ಎಂದರು.

       ಪ್ರಸ್ತುತ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ಬೆಳವಣಿಗೆ ಸಾಧಿಸಿದ್ದರೂ ಸಹ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ದೇವದಾಸಿ ಪದ್ಧತಿಗಳಂತಹ ಅನಿಷ್ಠ ಪದ್ಧತಿಗಳು ಜೀವಂತವಾಗಿವೆ. ಇಂತಹ ಅನಿಷ್ಠ ಪದ್ದತಿಗಳಿಗೆ ತುತ್ತಾದವರಲ್ಲಿ ಬಡ ಮಹಿಳೆಯರೇ ಹೆಚ್ಚಾಗಿದ್ದಾರೆ. ಅಂಬೇಡ್ಕರ್ ಅವರು ಇಂತಹ ಪದ್ದತಿಗಳನ್ನು ತೊಡೆದು ಹಾಕಲು ಶಿಕ್ಷಣ ಅಗತ್ಯ ಎಂದಿದ್ದರು. ಈ ನಿಟ್ಟಿನಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಸಲಾಗುತ್ತಿದೆ. ಕಾನೂನಿನ ಅರಿವಿನ ಮೂಲಕ ದೇವದಾಸಿ ಪದ್ದತಿ ಸಮಮಾಜದಿಂದ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕು ಎಂದು ಹೇಳಿದರು.

       ಕರ್ನಾಟಕ ರಾಜ್ಯ ದೇವದಾಸಿ ಮಹಿಳಾ ವಿಮೋಚನಾ ಸಂಘದ ಗೌರವಾಧ್ಯಕ್ಷ ಕೆ.ಎಲ್.ಭಟ್ ಮಾತನಾಡಿ, ಜಿಲ್ಲೆಯ ದೇವದಾಸಿ ಮಹಿಳೆಯರಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವೈಜ್ಞಾನಿಕ ಚಿಂತನೆಗಳಿಂದ ಇಂತಹ ಪದ್ದತಿಗಳನ್ನು ತೊಡೆದು ಹಾಕಲು ಸಾಧ್ಯವಾಗುತ್ತದೆ. ಆದ್ದರಿಂದ ಮಹಿಳೆಯರು ಇಂತಹ ವೈಜ್ಞಾನಿಕ ಚಿಂತನೆಯಿಂದ ಈ ಪೀಳಿಗೆಗೆ ದೇವದಾಸಿ ಪದ್ದತಿಯನ್ನು ಕೊನೆಗಾಣಿಸಬೇಕು. ದೇವದಾಸಿ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಕನಿಷ್ಠ ರೂ. 3000 ಗಳವರೆಗೆ ಮಾಸಾಶನವನ್ನು ಹೆಚ್ಚಿಸಬೇಕು ಎಂದರು.

      ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲ ದಯಾನಂದ ಮಾತನಾಡಿ, ಕ್ರಿ.ಪೂ 3ನೇ ಶತಮಾನದಿಂದಲೂ ನಮ್ಮ ಸಮಾಜದಲ್ಲಿ ಈ ಪದ್ದತಿ ಜೀವಂತವಾಗಿದ್ದು, ಅಂದಿನಿಂದಲೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಈ ಪದ್ದತಿಯು ಸಮಾಜದಲ್ಲಿ ಒಂದು ಕೆಟ್ಟ ಆಚರಣೆಯಾಗಿದೆ. ಅಭಿವೃದ್ಧಿ ಹೊಂದಿದ ಭಾರತದಲಿಯೂ ಈ ಪದ್ದತಿ ಜೀವಂತವಾಗಿರುವುದು ವಿಷಾಧನೀಯ. ಸರ್ಕಾರ ಈ ಪದ್ದತಿಯನ್ನು ಹೋಗಲಾಡಿಸಲು ದೇವದಾಸಿಯರಿಗೂ ಸಹ ಸಮಾಜದಲ್ಲಿ ಉತ್ತಮ ಸ್ಥಾನಮಾನ ಕಲ್ಪಿಸಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ ಮಂಜುನಾಥ್, ದೇವದಾಸಿ ಪುನರ್ವಸತಿ ಯೋಜನೆಯ ಯೋಜನಾಧಿಕಾರಿ ಗಳಾದ ಜೆ. ಮೋಕ್ಷ ಪತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂರಕ್ಷಣಾಧಿಕಾರಿ ಪೂರ್ಣಿಮಾ, ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಪ್ರಜ್ಞಾ ಜಯರಾಜ್ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap