ಚಳ್ಳಕೆರೆ
ತಾಲ್ಲೂಕಿನ ನನ್ನಿವಾಳದ ಬೊಮ್ಮದೇವರಹಟ್ಟಿಯ ದೇವರ ಎತ್ತುಗಳಿಗೆ ಈಗಾಗಲೇ ಜಿಲ್ಲಾಡಳಿತ ಉಚಿತ ಮೇವನ್ನು ಪೂರೈಸಿದ್ದು, ಅವುಗಳ ಸಂರಕ್ಷಣೆಗೆ ಮುಂದಾಗಿದೆ. ಜೊತೆಯಲ್ಲಿ ಬೂಸ ಮತ್ತು ಹಿಂಡಿ, ರಾಸುಗಳಿಗೆ ಅಗತ್ಯ ಚಿಕಿತ್ಸೆ ಮೂಲಕ ಇವುಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಹಶೀಲ್ದಾರ್ ತುಷಾರ್ ಬಿ.ಹೊಸೂರ್ ತಿಳಿಸಿದರು.
ಅವರು, ಮಂಗಳವಾರ ತಾಲ್ಲೂಕು ಆಡಳಿತದ ವತಿಯಿಂದ ಬೊಮ್ಮದೇವರಹಟ್ಟಿಯ ದೇವರ ಎತ್ತುಗಳಿಗೆ ಬೂಸ ಮತ್ತು ಹಿಂಡಿಯನ್ನು ವಿತರಿಸಿ ಮಾತನಾಡಿದರು. ಈಗಾಗಲೇ ತಾಲ್ಲೂಕು ಆಡಳಿತ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳ ಇಲ್ಲಿನ ಪರಿಸ್ಥಿತಿಯ ಬಗ್ಗೆ ಸುಧೀರ್ಘವಾದ ವರದಿಯನ್ನು ನೀಡಲಾಗಿದೆ. ಜಿಲ್ಲಾಧಿಕಾರಿಗಳು ಸಹ ದೇವರ ಎತ್ತುಗಳ ರಕ್ಷಣೆಗೆ ಮುಂದಾಗಿದ್ದು, ಯಾವುದೇ ಸಂದರ್ಭದಲ್ಲೂ ಈ ರಾಸುಗಳಿಗೆ ಅಪಾಯ ಉಂಟಾಗದಂತೆ ಜಾಗೃತೆ ವಹಿಸಲು ಸೂಚನೆ ನೀಡಿದ್ಧಾರೆ. ಅಗತ್ಯವಿರುವ ಮೇವಿನ ಜೊತೆಗೆ ಇನ್ನಿತರ ಪೌಷ್ಠೀಕಾಂಶದ ಆಹಾರವನ್ನು ತಾಲ್ಲೂಕು ಆಡಳಿತ ನೀಡಲಿದೆ. ಇಲ್ಲಿನ ಕಿಲಾರಿಗಳು ತಾಲ್ಲೂಕು ಆಡಳಿತದೊಂದಿಗೆ ಸಹಕರಿಸಿ ಯಾವುದೇ ಸಮಸ್ಯೆ ಎದುರಾದಲ್ಲಿ ಸಂಪರ್ಕಿಸುವಂತೆ ಮನವಿ ಮಾಡಿದರು.
ಪಶುವೈದ್ಯಾಧಿಕಾರಿ ಡಾ.ಹನುಮಪ್ಪ ಮಾತನಾಡಿ, ನಿಶಕ್ತವಾದ ಮತ್ತು ರೋಗಪೀಡಿತ ಯಾವುದಾದರೂ ಜಾನುವಾರುಗಳಿದ್ದಲ್ಲಿ ಬೇರೆ ಜಾನುವಾರುಗಳ ಹಿತದೃಷ್ಠಿಯಿಂದ ಅವುಗಳನ್ನು ಸ್ಥಳಾಂತರಿಸಿ ಚಿಕಿತ್ಸೆ ನೀಡಲು ಕಿಲಾರಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ಜಾನುವಾರುಗಳ ರಕ್ಷಣೆಯ ಬಗ್ಗೆ ಪಶುವೈದ್ಯ ಇಲಾಖೆ ಹೆಚ್ಚು ಗಮನಹರಿಸಲಿದ್ದು, ನಿರಂತರವಾಗಿ ಇಲ್ಲಿಗೆ ಭೇಟಿ ನೀಡುವ ಮೂಲಕ ಜಾನುವಾರುಗಳ ಆರೋಗ್ಯ ಸುಧಾರಣೆಗಳ ಬಗ್ಗೆ ನಿಗಾವಹಿಸಲಾಗುವುದು ಎಂದರು.
ರಾಮಕೃಷ್ಣ ಆಶ್ರಮದ ಜಪಾನಂದ ಸ್ವಾಮೀಜಿ ಮಾತನಾಡಿ, ಪ್ರಸ್ತುತ ಜಾನುವಾರುಗಳ ಸ್ಥಿತಿಯಲ್ಲಿ ಸುಧಾರಣೆ ಕಂಡಿದ್ದು, ಜಿಲ್ಲಾ ಹಾಗೂ ತಾಲ್ಲೂಕು ಆಡಳಿಯ ಸೂಕ್ತ ಸಮಯದಲ್ಲಿ ಸ್ಪಂದಿಸುವ ಮೂಲಕ ಜಾನುವಾರುಗಳ ರಕ್ಷಣೆಯಲ್ಲಿ ವಿಶೇಷ ಜವಾಬ್ದಾರಿಯನ್ನು ವಹಿಸಿದೆ. ಜಿಲ್ಲಾಡಳಿತದ ಸಕಾಲಿನ ಕ್ರಮವನ್ನು ಸ್ವಾಗತಿಸಿ, ಜಾನುವಾರುಗಳ ಚಿಕಿತ್ಸೆಗೆ ನೆರವಾದ ಎಲ್ಲಾ ಅಧಿಕಾರಿಗಳನ್ನು ಅಭಿನಂದಿಸುವುದಾಗಿ ತಿಳಿಸಿದರು.
ಪ್ರಸ್ತುತ ಈ ಭಾಗದಲ್ಲಿ ಮಳೆ ಬಾರದೇ ಇದ್ದು, ಮಳೆ ಬರುವ ತನಕ ಜಾನುವಾರುಗಳ ರಕ್ಷಣೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗದಂತೆ ತಾವೇ ಜಾಗೃತಿವಹಿಸಿವುದಾಗಿ ತಿಳಿಸಿದರಲ್ಲದೆ. ನಿರಂತರವಾಗಿ ಇಲ್ಲಿಗೆ ಭೇಟಿ ನೀಡಿ ಕಿಲಾರಿಗಳು ಮತ್ತು ತಾಲ್ಲೂಕು ಆಡಳಿತದೊಂದಿಗೆ ಚರ್ಚಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ಮೂಕವೇದನೆ ಅನುಭವಿಸಿ ಜಾನುವಾರುಗಳು ಸಾವನ್ನಪ್ಪದೆ ಆರೋಗ್ಯವಾಗಿ ಚೇತರಿಕೆಯಿಂದ ಇಲ್ಲಿ ಇರುವಂತೆ ನೋಡಿಕೊಳ್ಳಲಾಗುವುದು. ಸರ್ಕಾರ ಪೂರೈಸುವ ಮೇವಿನ ಎಲ್ಲಾ ವೆಚ್ಚವನ್ನು ಇನ್ಪೋಸಿಸ್ ಸಹಕಾರದೆಂದಿಗೆ ನಮ್ಮ ಆಶ್ರಮ ಬರಿಸಲಿದೆ ಎಂದರು.