ತಿಪಟೂರು
ನಗರದ ಹ್ಲದಯ ಭಾಗ ಶಂಕರಪ್ಪ ಲೇಔಟ್ ಜನರಿಗೆ ಮರುಭೂಮಿಯಲ್ಲಿ ಓಯಸಿಸ್‍ನಂತೆ ಖಾಸಗಿ ಶುದ್ದ ಕುಡಿವ ನೀರಿನ ಘಟಕವಿದ್ದು, ಗೋವಿನಪುರ, ಕೆ.ಅರ್ ಬಡಾವಣೆ, ಶಂಕರಪ್ಪ ಲೇಔಟ್ ಸುತ್ತಮುತ್ತಲಿನ ಜನರಿಗೆ ಶುದ್ದನೀರನ್ನು ಒದಗಿಸುತ್ತಿರುವ ಘಟಕವನ್ನು ಯಾವುದೋ ಮುಲಾಜಿಗೆ ಬಿದ್ದಂತೆ ಶನಿವಾರ ತೆರವುಗೊಳಿಸಲು ಬಂದಿದ್ದ ನಗರಸಭೆ ಸಿಬ್ಬಂದಿಯನ್ನು ಸಾರ್ವಜನಿಕರು ಪ್ರತಿಭಟನೆ ನಡೆಸಿ ಹಿಮ್ಮೆಟ್ಟಿಸಿದ್ದಾರೆ.
ಸ್ಥಳೀಯರು ಇದನ್ನು ತೆಗೆಸುವುದಕ್ಕೆ ಮೊದಲು ಇಲ್ಲಿಗೆ ಸೂಕ್ತವಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿ, ಇಲ್ಲಿ ದೇವರು ಕೊಟ್ಟರೂ ಪ್ರಜಾರಿ ಕೊಡ ಎಂಬಂತಾಗಿದೆ ಎಂದು ನಗರಸಭೆಯ ವಿರುದ್ದ ಜನತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರಸಭೆ ಜಾಗದಲ್ಲಿ ತಿಮ್ಮಪ್ಪ ಚಾರಿಟಬಲ್ ಟ್ರಸ್ಟ್‍ನಿಂದ ಗಂಗಾ ಭವಾನಿ ಎಂಬುವರು ಶುದ್ಧ ಕುಡಿವ ನೀರಿನ ಘಟಕ ನಡೆಸುತ್ತಿದ್ದರು. ಕೆ.ಆರ್. ಬಡಾವಣೆ, ಶಂಕರಪ್ಪ ಲೇಔಟ್, ಗೋವಿನಪುರ ಸೇರಿದಂತೆ ಸುತ್ತಮತ್ತಲಿನ ನಾಗರಿಕರು ಈ ಘಟಕದಿಂದ ನೀರು ಕೊಂಡೊಯ್ಯುತ್ತಿದ್ದರು. ಆದರೆ ನಗರಸಭೆ ಜಾಗದಲ್ಲಿ ಅನಧಿಕೃತವಾಗಿ ಶುದ್ಧ ನೀರಿನ ಘಟಕ ನಿರ್ಮಿಸಲಾಗಿದೆ ಎಂಬ ಸಾರ್ವಜನಿಕರೊಬ್ಬರ ದೂರು ಲೋಕಾಯುಕ್ತದ ಮೆಟ್ಟಿಲೇರಿತ್ತು.
ಈ ಹಿನ್ನೆಲೆಯಲ್ಲಿ ನಗರಸಭೆ ಪೌರಾಯುಕ್ತರು ಘಟಕದ ಮಾಲೀಕರಿಗೆ ಕೆಲ ತಿಂಗಳ ಹಿಂದೆ ನೋಟಿಸ್ ನೀಡಿ ತೆರವುಗೊಳಿಸಲು ಸೂಚಿಸಿದ್ದರು. ಕಳೆದ ವಾರ ಜೆಸಿಬಿ ಕಳುಹಿಸಿ ತೆರವುಗೊಳಿಸುವ ಪ್ರಯತ್ನವೂ ನಡೆದಿತ್ತು. ಸ್ಥಳೀಯ ನಾಗರಿಕರು ವಿರೋಧಿಸಿದ್ದರಿಂದ ಸುತ್ತಲೂ ಟ್ರಂಚ್ ತೆಗೆದು ಹೋಗಿದ್ದರು. ಈ ವೇಳೆ ಘಟಕದ ಮಾಲೀಕರು ನ್ಯಾಯಾಲಯದ ಮೊರೆ ಹೋಗಿದ್ದರು. ತಿಪಟೂರಿನ ನ್ಯಾಯಾಲಯ ಯಥಾಸ್ಥಿತಿ ಕಾಯ್ದುಕೊಳ್ಳಲು ಆದೇಶ ನೀಡಿ ಮುಂದಿನ ವಿಚಾರಣೆಯನ್ನು ಆ.8ಕ್ಕೆ ನಿಗದಿ ಪಡಿಸಿತ್ತು. ಈ ಆಧಾರದ ಮೇಲೆ ಮಾಲೀಕರು ಘಟಕವನ್ನು ಮುನ್ನಡೆಸಿದ್ದರು.
ಆದರೆ ಶನಿವಾರ ಟ್ರ್ಯಾಕ್ಟರ್ ಮತ್ತು ಜೆಸಿಬಿಯೊಂದಿಗೆ ಬಂದ ನಗರಸಭೆ ಸಿಬ್ಬಂದಿ ಘಟಕದ ತೆರವಿಗೆ ಮುಂದಾದರು. ಸ್ಟೇ ಆದೇಶ ತೋರಿಸಿದರೂ ಅದಕ್ಕೆ ಅವರು ಬೆಲೆ ಕೊಡಲಿಲ್ಲ. ವಿಷಯ ತಿಳಿದ ನಾಗರಿಕರು ನಗರಸಭೆ ನಿರ್ಧಾರದ ಬಗ್ಗೆ ಪ್ರತಿಭಟನೆ ನಡೆಸಿ ಸಿಬ್ಬಂದಿಯನ್ನು ಹಿಮ್ಮೆಟ್ಟಿಸಿದರು. ನಗರಸಭೆ ಸದಸ್ಯ ಯೋಗೀಶ್ ಮಾತನಾಡಿ, ಸುತ್ತಲಿನ ಬಡಾವಣೆಗಳಿಗೆ ಈ ಘಟಕದಿಂದ ಅನುಕೂಲವಿದೆ. ಅದನ್ನು ತೆರವುಗೊಳಿಸದೆ ಕಾನೂನಾತ್ಮಕ ಅನುಮತಿ ನೀಡಲು ನಗರಸಭೆ ಮುಂದಾಗಬೇಕು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
