ಚಿತ್ರದುರ್ಗ:
ಪಕ್ಷಕ್ಕಾಗಿ ನಿಷ್ಟೆ, ಪ್ರಾಮಾಣಿಕತೆಯಿಂದ ದುಡಿದ ಕಾರ್ಯಕರ್ತರ ನೋವಿಗೆ ಸ್ಪಂದಿಸದಿದ್ದರೆ ಯಾವ ಪಕ್ಷವೂ ಉದ್ದಾರವಾಗುವುದಿಲ್ಲ ಎಂದು ಜೆಡಿಎಸ್.ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತ ಬೇಸರ ವ್ಯಕ್ತಪಡಿಸಿ ಇನ್ನು ಮುಂದೆ ಕಾರ್ಯಕರ್ತರಿಗೆ ಪಕ್ಷದಿಂದ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದರು.ನಗರದಲ್ಲಿ ನವೀಕರಣಗೊಂಡಿರುವ ಜಾತ್ಯಾತೀತ ಜನತಾದಳ ಕಚೇರಿ ಹೆಚ್.ಡಿ.ದೇವೇಗೌಡ ಭವನದವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ನಲವತ್ತು ವರ್ಷಗಳಿಂದಲೂ ನಾನು ಜನತಾದಳದಲ್ಲಿ ದುಡಿಯುತ್ತಿದ್ದೇನೆ. ಉದಾಸೀನತೆ, ಅಲಕ್ಷೆಯಿಂದ ರಾಜ್ಯದಲ್ಲಿ ಅನೇಕ ಕಡೆ ಪಕ್ಷದ ಕಚೇರಿಗಳನ್ನು ಕಳೆದುಕೊಂಡಿದ್ದೇವೆ. ಚಿತ್ರದುರ್ಗದಲ್ಲಿಯೂ ಕಳೆದುಕೊಂಡಿದ್ದ ಪಕ್ಷದ ಆಸ್ತಿಯನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಎಲ್ಲಾ ಕಾರ್ಯಕರ್ತರ ಹಾಗೂ ಮುಖಂಡರುಗಳ ಸಹಕಾರದಿಂದ ಮರಳಿ ಪಡೆದು ನವೀಕರಣಗೊಳಿಸಿರುವುದು ಅತ್ಯಂತ ಸಂತೋಷಕರ ಸಂಗತಿ ಎಂದು ಶ್ಲಾಘಿಸಿದರು.
ನಾನು ಹೆಚ್.ಎಸ್.ಶಿವಶಂಕರ್ ಇಬ್ಬರು ಚುನಾವಣೆಯಲ್ಲಿ ಸೋತಿದ್ದೇವೆ. ಅದಕ್ಕಾಗಿ ಬೇಸರಗೊಂಡು ಪಕ್ಷದಿಂದ ಹಿಂದೆ ಸರಿದಿಲ್ಲ. ಈಗಲೂ ಪಕ್ಷವನ್ನು ಕಟ್ಟಿ ಬೆಳೆಸುತ್ತಿದ್ದೇವೆ. ಕಾರ್ಯಕರ್ತರುಗಳೆ ಪಕ್ಷಕ್ಕೆ ನಿಜವಾದ ಆಸ್ತಿ. ಹೇಳಿದಂತೆ, ಆಸೆಪಟ್ಟಂತೆ, ಕನಸುಕಂಡಂತೆ ಕೆಲವೊಮ್ಮೆ ಆಗುವುದಿಲ್ಲ. ರಾಜಕಾರಣವೇ ಒಂದು ರೀತಿ ವಿಚಿತ್ರ. ಸೈದ್ದಾಂತಿಕ ಬದ್ದತೆ, ನಿಷ್ಟೆ ಪಕ್ಷದಲ್ಲಿ ಇರಬೇಕು. ಕೆಲವು ಸಂದರ್ಭದಲ್ಲಿ ತಪ್ಪು ಮಾಡಿದ್ದೇವೆ.
ಚುನಾವಣೆಯಲ್ಲಿ ಸೋಲಲಿ ಗೆಲ್ಲಲಿ ಪಕ್ಷ ನಿಷ್ಟಾವಂತರಿಗೆ ಸ್ಪರ್ಧಿಸಲು ಟಿಕೇಟ್ ನೀಡಬೇಕು. ಇಲ್ಲದಿದ್ದರೆ ಗೊಂದಲ, ಭಿನ್ನಾಭಿಪ್ರಾಯಗಳು ಮೂಡುತ್ತದೆ. ಕೆಲವೊಮ್ಮೆ ಹಣಕ್ಕಾಗಿ ಆದ್ಯತೆ ನೀಡುವುದುಂಟು. ಮುಂದೆ ಕಷ್ಟವೋ ಸುಖವೋ, ಸೋಲೋ ಗೆಲುವೋ ನೀಯತ್ತಿನಿಂದ ದುಡಿಯುತ್ತಿರುವವರನ್ನು ಗುರುತಿಸಿ ಟಿಕೇಟ್ ನೀಡಬೇಕು ಎಂಬುದನ್ನು ಮುಂದಿನ ಚುನಾವಣೆಯಲ್ಲಿ ಪಕ್ಷದ ವರಿಷ್ಟರ ಗಮನಕ್ಕೆ ತರುತ್ತೇನೆ ಎಂದು ಆಶ್ವಾಸನೆ ನೀಡಿದರು.
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆಯಿತು. ಇನ್ನು ನಿಗಮ ಮಂಡಳಿಗಳಿಗೆ ನೇಮಕ ಮಾಡಿಲ್ಲ. ಒಂದೊಂದು ಕ್ಷೇತ್ರದಲ್ಲಿ ತೊಂಬತ್ತು ಕಾರ್ಯಕರ್ತರನ್ನು ನೇಮಕ ಮಾಡುವ ಅವಕಾಶವಿದೆ. ನಾನಂತು ಕಾರ್ಯಕರ್ತರ ಪರವಾಗಿದ್ದೇನೆ. ಎಲ್ಲಿಯೂ ಕಾರ್ಯಕರ್ತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಇನ್ನು ಕಾಲ ಮಿಂಚಿಲ್ಲ ಒಂದೊಂದು ವಿಧಾನಸಭಾ ಕ್ಷೇತ್ರದಿಂದಲೂ ಪಟ್ಟಿ ಮಾಡಿ ಕಳಿಸಿ ನನಗೂ ಒಂದು ಪ್ರತಿ ಕೊಡಿ.
ಲೋಕಸಭೆ ಚುನಾವಣೆ ಸಮೀಪದಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್.ಸಮ್ಮಿಶ್ರ ಅನಿವಾರ್ಯವಾಗಿದೆ. ಕೇಂದ್ರದ ಮೋದಿ ಸರ್ಕಾರ ಜನವಿರೋಧಿಯಾಗಿದೆ. ತುರ್ತು ಪರಿಸ್ಥಿತಿಗಿಂತ ಕೆಟ್ಟದಾಗಿದೆ. ಪ್ರಧಾನಿ ಮೋದಿರವರು ಆರ್.ಬಿ.ಐ., ಸುಪ್ರೀಂಕೋರ್ಟ್, ಚುನಾವಣಾ ಆಯೋಗ, ಸಿ.ಬಿ.ಐ. ಇವಿಷ್ಟನ್ನು ದುರ್ಬಲಗೊಳಿಸಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿಕೊಂಡಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತರು ಭಯದ ವಾತಾವರಣದಲ್ಲಿದ್ದಾರೆ. ಮೋದಿ ಯಾವ ಮೋಡಿ ಮಾಡಲಿಲ್ಲ. ರಾಡಿ ಮಾಡಿದ್ದಾರೆ. ಜಾತ್ಯಾತೀತ ಶಕ್ತಿಗಳು ಹೊಂದಾಣಿಕೆ ಮಾಡಿಕೊಂಡು ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೋಮುವಾದಿಯನ್ನು ಸೋಲಿಸಲೇಬೇಕು ಕಾರ್ಯಕರ್ತರು ಅದಕ್ಕಾಗಿ ಸಜ್ಜಾಗಿ ಎಂದು ಕರೆ ನೀಡಿದರು.
ಹರಿಹರ ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಮಾತನಾಡುತ್ತ ಚಿತ್ರದುರ್ಗದಲ್ಲಿ ಸುಸಜ್ಜಿತವಾದ ಕಟ್ಟವನ್ನು ಪಕ್ಷಕ್ಕೆ ಆಸ್ತಿಯನ್ನಾಗಿ ಮಾಡಿಕೊಟ್ಟ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಪಕ್ಷದಲ್ಲಿ ತಿಕ್ಕಾಟವಿದ್ದರೆ ಮಾತ್ರ ಹೊಸ ನಾಯಕರು ಬೆಳೆಯಲು ಸಾಧ್ಯ.ಪಕ್ಷ ನಮಗೇನು ಕೊಟ್ಟಿದೆ ಎನ್ನುವ ಬದಲು ಪಕ್ಷಕ್ಕಾಗಿ ನಾವೇನು ಕೊಟ್ಟಿದ್ದೇವೆ ಎಂದು ಪ್ರತಿಯೊಬ್ಬರು ಅರ್ಥಮಾಡಿಕೊಂಡಾಗ ಮಾತ್ರ ಪಕ್ಷ ಗಟ್ಟಿಯಾಗಿ ಬೆಳೆಯುತ್ತದೆ ಎಂದು ಹೇಳಿದರು.
ಜೆಡಿಎಸ್.ನಲ್ಲಿ ಹೋರಾಟ, ತತ್ವ, ಸಿದ್ದಾಂತವಿದೆ. ಪಕ್ಷ ಎಂದರೆ ಒಂದು ಮನೆ ಇದ್ದಂತೆ. ಆದ್ದರಿಂದ ಎಲ್ಲರೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಂದಾಗಿರುವಂತೆ ಸಲಹೆ ನೀಡಿದರು.ಜೆ.ಡಿ.ಎಸ್.ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡಿ ವೈ.ಎಸ್.ವಿ.ದತ್ತರವರು ಹಳೆ ಕಾರ್ಯಕರ್ತರಲ್ಲಿ ಸಂಚಲನ ಮೂಡಿಸಿದ್ದಾರೆ. ಈಗ ಉದ್ಘಾಟನೆಗೊಂಡಿರುವ ಜೆಡಿಎಸ್.ಕಚೇರಿ ಮೇಲೆ ಅನೇಕ ಸಮಸ್ಯೆಗಳಿವೆ. ಕಾನೂನಾತ್ಮಕವಾಗಿ ಹೋರಾಟ ಮಾಡುವ ಮೂಲಕ ಕಟ್ಟಡವನ್ನು ವಶಪಡಿಸಿಕೊಂಡು ನವೀಕರಣಗೊಳಿಸಲು ಬಿ.ಕಾಂತರಾಜ್ರವರ ಕೊಡುಗೆ ಅಪಾರ ಎಂದು ಗುಣಗಾನ ಮಾಡಿದರು.
ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿದ್ದೇವೆ. ಪಕ್ಷ ರಾಜ್ಯದಲ್ಲಿ ಸಂಕಷ್ಟದಲ್ಲಿದ್ದಾಗ ದತ್ತ ದಿಕ್ಕು ತೋರಿಸಿದರು. ಚಿಕ್ಕಪುಟ್ಟ ಸಮಸ್ಯೆಗಳನ್ನು ದೊಡ್ಡದು ಮಾಡಿ ಮುಖಂಡುಗಳಿಗೆ ತಪ್ಪು ಸಂದೇಶ ಕಳಿಸಬೇಡಿ. ಸಮಸ್ಯೆಗಳಿಗೆ ಪರಿಹಾರ ಕೊಡಲಿಕ್ಕಾಗಿಯೇ ವರಿಷ್ಟರುಗಳಿದ್ದಾರೆ ಅವರುಗಳ ಬಳಿ ಚರ್ಚಿಸಿ ಬಗೆಹರಿಸಿಕೊಳ್ಳಿ. ಚಿತ್ರದುರ್ಗ ಜಿಲ್ಲೆಯಲ್ಲಿ ಪಕ್ಷದ ಶಾಸಕರಿಲ್ಲ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್.ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸುವಂತೆ ಹೈಕಮಾಂಡ್ಗೆ ಮನವಿ ಮಾಡಿದ್ದೇವೆ. ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವುದರಿಂದ ನಾವು ಕೇಳಿದಂತೆ ಎಲ್ಲಾ ಆಗುವುದು ಕಷ್ಟ.
ಕಾರ್ಯಕರ್ತರು ಹಾಗೂ ಮುಖಂಡರುಗಳು ಸಮರ್ಪಣಾ ಮನೋಭಾವದಿಂದ ಪಕ್ಷಕ್ಕಾಗಿ ದುಡಿಯಿರಿ. ಹಗಲಿರುಳು ದುಡಿಯುತ್ತಿರುವ ಕಾರ್ಯಕರ್ತರಿಗೆ ಪಕ್ಷದಲ್ಲಿ ಮನ್ನಣೆ ಕೊಡಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ಹೆಸರಿಗೆ ಎಲ್ಲಿಯೂ ಕಳಂಕ ತರಬೇಡಿ. ಪಕ್ಷ ದೇವಾಲಯವಿದ್ದಂತೆ ಎಂದು ಕಾರ್ಯಕರ್ತರಿಗೆ ಹೇಳಿದರು.
ಜೆಡಿಎಸ್.ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್ ಮಾತನಾಡುತ್ತ ಇನ್ನು ಮುಂದೆ ಜೆಡಿಎಸ್. ಕಚೇರಿ ಎಲ್ಲಿಯೂ ಕೈತಪ್ಪಿ ಹೋಗುವುದಿಲ್ಲ. ಕೆಲವು ವಿಚಾರಗಳಲ್ಲಿ ನಾವು ತಪ್ಪು ಮಾಡಿದ್ದೇವೆ. ಸಂಘಟನೆ, ಬೆಳವಣಿಗೆಗೆ ಆದ್ಯತೆ ನೀಡಿ. ಸಮಸ್ಯೆಗಳಿಗೆ ಬಹಿರಂಗ ಚರ್ಚೆಯಾಗಲಿ ನನ್ನ ಮೇಲೆ ಯಾರೋ ಹೇಳುವ ಚಾಡಿ ಮಾತನ್ನು ನಂಬಬೇಡಿ ಎಂದು ವೈ.ಎಸ್.ವಿ.ದತ್ತರವರಲ್ಲಿ ಮನವಿ ಮಾಡಿದರು.
ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಚಿತ್ರದುರ್ಗಕ್ಕೆ ಬೇಕಾದರೆ ನಿಯೋಗ ಬನ್ನಿ. ಈಗ ಜಿಲ್ಲೆಯಲ್ಲಿ ಹೊಸ ಜೆಡಿಎಸ್.ಆಗಿದೆ. ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದರು.
ಇಬ್ಬರು ಬೇರೆ ಪಕ್ಷದವರನ್ನು ನಾಮಿನೇಟ್ ಮಾಡಲಾಗಿದೆ. ಹಾಗಾದರೆ ಪ್ರಾಮಾಣಿಕ ಕಾರ್ಯಕರ್ತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಬಿ.ಕಾಂತರಾಜ್ ಪಕ್ಷ ದುಸ್ಥಿತಿಗೆ ಹೋಗಲು ಅವಕಾಶ ಕೊಡಬೇಡಿ ಎಂದು ಕೋರಿದರು. ಜಿ.ಪಂ.ಮಾಜಿ ಅಧ್ಯಕ್ಷ ಜಯಣ್ಣ, ಜಿ.ಬಿ.ಶೇಖರ್, ಮೀನಾಕ್ಷಿ ನಂದೀಶ್, ಯತ್ನಟ್ಟಿಗೌಡ, ಸಿ.ಟಿ.ಕೃಷ್ಣಮೂರ್ತಿ ಹಾಗೂ ತಾಲೂಕು ಅಧ್ಯಕ್ಷರುಗಳು ಮಾತನಾಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಸುನೀಲ್ಕುಮಾರ್, ಎಂ.ಕೆ.ಹಟ್ಟಿ ವೀರಣ್ಣ, ಕಾಶಮಯ್ಯ, ಜೆಡಿಎಸ್.ಜಿಲ್ಲಾ ವಕ್ತಾರ ಡಿ.ಗೋಪಾಲಸ್ವಾಮಿ ನಾಯಕ, ಗುರುಸಿದ್ದಣ್ಣ, ಪರಾಜಿತ ಅಭ್ಯರ್ಥಿಗಳಾದ ರವೀಶ್, ಶ್ರೀನಿವಾಸ್ ಗದ್ದಿಗೆ, ತಿಪ್ಪೇಸ್ವಾಮಿ, ಶಶಿಕುಮಾರ್, ತಾಲೂಕು ಅಧ್ಯಕ್ಷ ಸಣ್ಣತಿಮ್ಮಪ್ಪ, ಶಿವಪ್ರಸಾದ್ಗೌಡ, ಪಿ.ತಿಪ್ಪೇಸ್ವಾಮಿ, ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.