ದಾವಣಗೆರೆ:
ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರ ಹುಟ್ಟು ಹಬ್ಬವನ್ನು ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಶನಿವಾರ ಆಚರಿಸಿದರು.ದೇವೇಗೌಡರಿಗೆ ಉತ್ತಮ ಆರೋಗ್ಯ, ಆಯುಷ್ಯ ಪ್ರಾಪ್ತಿಯಾಗಲಿ ಎಂಬುದಾಗಿ ಹಾರೈಸಿ, ಪಕ್ಷದ ಕಾರ್ಯಕರ್ತರು ನಗರದ ಪಿ.ಜೆ.ಬಡಾವಣೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ನಂತರ ಪಕ್ಷದ ಜಿಲ್ಲಾ ಕಚೇರಿಗೆ ತೆರಳಿ ಕೇಕ್ ಕತ್ತರಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹರಿಹರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಹುಟ್ಟು ಹೋರಾಟಗಾರರಾದ ದೇವೇಗೌಡರು ನಾಡು ಕಂಡು ಧೀಮಂತ ನಾಯಕ. ರೈತರು ಹಾಗೂ ದಲಿತರ ಏಳಿಗೆಗಾಗಿ ದುಡಿಯುತ್ತಿದ್ದಾರೆ ಎಂದು ಹೇಳಿದರು.
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ ಮಾತನಾಡಿ, ಹೆಚ್.ಡಿ.ದೇವೇಗೌಡರು ರಾಜ್ಯಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಏಕೈಕ ಕನ್ನಡಿಗ ಪ್ರಧಾನಿಯಾಗಿದ್ದಾರೆ. ಅತ್ಯಂತ ಜಟಿಲವಾದಂತ ಅನೇಕ ಸಮಸ್ಯೆಗಳನ್ನು ಅವರು ಸರಳವಾಗಿ ಪರಿಹರಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಟಿ. ಗಣೇಶ್ ದಾಸಕರಿಯಪ್ಪ ಮಾತನಾಡಿ, ದೇವೇಗೌಡರು ನಾಡಿನ ನೆಲ-ಜಲ ಸಮಸ್ಯೆಯ ಪರಿಹಾರಕ್ಕಾಗಿ, ಕಾವೇರಿ ನೀರಿಗಾಗಿ ಹೋರಾಟ ಮಾಡಿದ ಧೀಮಂತನಾಯಕರಾಗಿದ್ದಾರೆ. ರೈತರ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಅವರು ರೈತರಿಗೆ ಅನ್ಯಾಯವಾದ ಎಲ್ಲ ಸಂದರ್ಭದಲ್ಲೂ ಹೋರಾಡಿ, ನ್ಯಾಯ ಕೊಡಿಸಿರುವ ದಿಟ್ಟ ನಾಯಕರಾಗಿದ್ದಾರೆ ಎಂದರು.
ಪಕ್ಷದ ದಕ್ಷಿಣ ವಲಯ ಅಧ್ಯಕ್ಷ ಜೆ. ಅಮಾನುಲ್ಲಾಖಾನ್ ಮಾತನಾಡಿ,ಹುಬ್ಬಳ್ಳಿಯ ಈದ್ಗಾ ಮೈದಾನ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವ ಮೂಲಕ ಹಿಂದೂ-ಮುಸ್ಲಿಂ ಸಮುದಾಯಗಳ ಮಧ್ಯೆ ಭಾವೈಕ್ಯತೆ ಮೂಡಿಸಿದ ಜಾತ್ಯತೀತ ನಾಯಕ ದೇವೇಗೌಡರಾಗಿದ್ದಾರೆ. ವಾಲ್ಮೀಕಿ ನಾಯಕ ಜನಾಂಗಕ್ಕೆ ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಮೂಲಕ ಮೀಸಲಾತಿ ಕಲ್ಪಿಸಿ, ಸಾಮಾಜಿಕ ನ್ಯಾಯ ಕಲ್ಪಿಸಿಕೊಟ್ಟಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಿ. ಅಂಜಿನಪ್ಪ ಕಡತಿ, ಎ.ಕೆ. ನಾಗಪ್ಪ, ಶಿವಣ್ಣ ಬೆಳಲಗೆರೆ, ಎ.ವೈ. ಕೃಷ್ಣಮೂರ್ತಿ, ಕುರ್ಕಿ ವಿರೂಪಾಕ್ಷಪ್ಪ, ಕುರ್ಕಿ ವೀರೇಶ್, ಬಾತಿ ಶಂಕರ್, ಎಂ.ಆನಂದ್, ಖಾದರ್ ಭಾಷಾ, ಸೈಯದ್ ಫಕೃದ್ದೀನ್, ಶ್ರೀನಿವಾಸ್.ಎ, ನರಸಿಂಹಮೂರ್ತಿ, ಜಿ.ಎಂ.ಭಾಷಾ, ತಾಯಪ್ಪ ಹೆಬ್ಬಾಳ್, ಬಿ.ಎಲ್.ಬಸವರಾಜಪ್ಪ ಮಾಯಕೊಂಡ, ಫಾರೂಕ್ ಖಾನ್ ಸೇರಿದಂತೆ ಹಲವರು ಹಾಜರಿದ್ದರು.