ಲಂಡನ್ ಪ್ರವಾಸದಿಂದ ಮಾಜಿ ಪ್ರಧಾನಿ ದೇವೇಗೌಡ ವಾಪಸ್ಸ್

ಬೆಂಗಳೂರು

     ನವೆಂಬರ್ 3ರರಂದು ನಡೆಯಲಿರುವ ಮೂರು ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರದ ಕಾವು ದಿನೇ ದಿನೇ ಬಿರುಸುಗೊಳ್ಳುತ್ತಿದೆ. ಆದರೆ ಮೈತ್ರಿ ಪಕ್ಷಗಳ ಕಾರ್ಯಕರ್ತರಲ್ಲಿ ತಳಮಟ್ಟದ ಗೊಂದಲಗಳು ಇನ್ನೂ ಮುಂದುವರೆಯುತ್ತಿವೆ.

      ಲಂಡನ್ ಪ್ರವಾಸದಿಂದ ಮಾಜಿ ಪ್ರಧಾನಿ ದೇವೇಗೌಡ ವಾಪಸ್ಸಾಗಿದ್ದು, ಸಕ್ರಿಯ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಸೋಮವಾರ ಬಳ್ಳಾರಿಗೆ ತೆರಳಿ ತಮ್ಮ ಮಾಜಿ ಶಿಷ್ಯ, ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರ ಪರವಾಗಿ ಕೂಡ್ಲಿಗಿಯಲ್ಲಿ ಪ್ರಚಾರ ಮಾಡಲಿದ್ದಾರೆ. ಲೋಕಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ದೇವೇಗೌಡರೊಂದಿಗೆ ಜಂಟಿ ಪ್ರಚಾದಲ್ಲಿ ತೊಡಗಿಕೊಳ್ಳಲಿದ್ದಾರೆ.

     ಮಂಗಳವಾರ ಶಿವಮೊಗ್ಗದಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಜೊತೆ ಸಭೆ ನಡೆಸಲಿರುವ ದೇವೇಗೌಡರು, ತರುವಾಯ ಶಿವಮೊಗ್ಗದಲ್ಲಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರ ನಡೆಸಲಿದ್ದಾರೆ. ಈ ಸಭೆಯಲ್ಲಿ ಕಾಂಗ್ರೆಸ್ ಮುಖಂಡರು ಸಹ ಭಾಗಿಯಾಗಲಿದ್ದಾರೆ.

      ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಪರ ಮತಯಾಚಿಸಿದರು.

      ಈ ನಡುವೆ ದೋಸ್ತಿ ಪಕ್ಷಗಳ ನಾಯಕರ ನಡುವೆ ಒಮ್ಮತ ಮೂಡುತ್ತಿದ್ದರೂ ಕಾರ್ಯಕರ್ತರ ಮಟ್ಟದಲ್ಲಿ ಅಷ್ಟೇನು ರಣೋತ್ಸಾಹ ಕಂಡು ಬಂದಿಲ್ಲ. ಪ್ರಮುಖವಾಗಿ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮುನಿಸಿಕೊಂಡಿದ್ದಾರೆ. ಸ್ಥಳೀಯವಾಗಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಯಾವತ್ತೂ ಹೊಂದಾಣಿಕೆ ಇರಲಿಲ್ಲ. ಸರ್ಕಾರ ರಚನೆಯಾದ ನಂತರ ಎಲ್ಲೆಡೆ ಜೆಡಿಎಸ್ ಕಾರ್ಯಕರ್ತರದ್ದೇ ಕಾರುಬಾರು. ನಮ್ಮನ್ನು ಕಡೆಗಣಿಸಲಾಗುತ್ತದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ತಮ್ಮ ನಾಯಕರ ಸಮ್ಮುಖದಲ್ಲಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಕಾರ್ಯಕರ್ತರನ್ನು ಸಂತೈಸುವುದು ನಾಯಕರಿಗೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

      ಮಂಡ್ಯ, ಶಿವಮೊಗ್ಗ, ರಾಮನಗರ ವಿಧಾನಸಭಾ ಕ್ಷೇತ್ರಗಳಲ್ಲಿ ನಾಯಕರ ಮಾತಿಗೆ ಮಣಿದು ಪ್ರಚಾರಕ್ಕೆ ಹೋದರೂ ಸಹ ಕಾಂಗ್ರೆಸ್ ಕಾರ್ಯಕರ್ತರಿಗೆ ಮನ್ನಣೆ ಸಿಗುತ್ತಿಲ್ಲ ಎನ್ನುವ ಅಸಮಾಧಾನ ವ್ಯಕ್ತವಾಗಿದೆ.

      ಜಮಖಂಡಿ ಕ್ಷೇತ್ರದಲ್ಲಿ ಜೆಡಿಎಸ್ ಕಾರ್ಯಕರ್ತರು ಯಾವುದಕ್ಕೂ ಹೋಗುತ್ತಿಲ್ಲ. ಕಾಂಗ್ರೆಸ್ ನಾಯಕರು ಅವರನ್ನು ಕರೆಯುತ್ತಿಲ್ಲ. ಜಂಟಿಯಾಗಿ ಪ್ರಚಾರ ಮಾಡುತ್ತೇವೆ ಎಂದು ಹೇಳಿದ ನಾಯಕರೂ ಸಹ ಹೇಳಿ ಮರೆತುಬಿಟ್ಟಿದ್ದಾರೆ. ಕಾರ್ಯಕರ್ತರನ್ನು ಒಂದುಗೂಡಿಸುವ ತಂಟೆಗೂ ಹೋಗುತ್ತಿಲ್ಲ. ಇದರ ಲಾಭ ಪಡೆಯಬೇಕು ಎಂದು ಬಿಜೆಪಿ ಹವಣಿಸುತ್ತಿದೆ.

       ಏತನ್ಮಧ್ಯೆ ಮುಧೋಳದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ರಾಜ್ಯ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷಗಳ ಅವಧಿಯನ್ನು ಪೂರ್ಣಮಾಡಲಿದೆ ಸರ್ಕಾರ ಪತನವಾಗಲಿದೆ ಎಂಬುದು ಕೇವಲ ಬಿಜೆಪಿ ನಾಯಕರ ಭ್ರಮೆ ಎಂದರು.

      ಈ ನಡುವೆ, ಬಳ್ಳಾರಿಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ, ಸರ್ಕಾರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹೆಚ್ಚಿನ ಒತ್ತು ಕೊಟ್ಟಿದೆ, ಪ್ರಸಕ್ತ ವರ್ಷ ಶಾಲಾ-ಕಾಲೇಜುಗಳ ಕಟ್ಟಡಗಳ ನಿರ್ಮಾಣಕ್ಕಾಗಿ ಒಂದು ಸಾವಿರದ 450 ಕೋಟಿ ರೂಪಾಯಿ ವಿನಿಯೋಗ ಮಾಡುತ್ತಿದೆ ಎಂದು ಅವರು ಹೇಳಿದರು.

     ಮಂಡ್ಯದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್, ಜೆಡಿಎಸ್ ಅಭ್ಯರ್ಥಿ ಎಲ್.ಆರ್. ಶಿವರಾಮೇಗೌಡ ಪರ ಪ್ರಚಾರಕಾರ್ಯ ಕೈಗೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆರ್ಥಿಕ ನೀತಿಯಿಂದಾಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಜನಸಾಮಾನ್ಯರು ತತ್ತರಗೊಂಡಿದ್ದಾರೆ ಎಂದರು.

    ರಾಜ್ಯದಲ್ಲಿ ಬಿಜೆಪಿ ಅತಿಹೆಚ್ಚು ಶಾಸಕರನ್ನು ಹೊಂದಿದ್ದರೂ, ಕೇಂದ್ರ ಸರ್ಕಾರದಿಂದ ಅಗತ್ಯ ಹಣಕಾಸು ನೆರವು ಕೊಡಿಸುವ ಕಡೆಗೆ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮತ್ತು ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯ ನಡೆಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link