ಮಧ್ಯಂತರ ಚುನಾವಣೆಗೆ ಸಜ್ಜಾಗಲು ಕಾರ್ಯಕರ್ತರಿಗೆ ಕರೆ ನೀಡಿದ ದೇವೇಗೌಡರು..!!

ಬೆಂಗಳೂರು

   ಯಡಿಯೂರಪ್ಪ ಮೂರು ತಿಂಗಳು ಮುಖ್ಯಮಂತ್ರಿಯಾಗಿರುತ್ತಾರೋ,ಆರು ತಿಂಗಳು ಮುಖ್ಯಮಂತ್ರಿಯಾಗಿರುತ್ತಾರೋ ಗೊತ್ತಿಲ್ಲ ಎಂದು ಶಂಕೆ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ,ವಿಧಾನಸಭೆಗೆ ಯಾವ ಕ್ಷಣದಲ್ಲಾದರೂ ಎದುರಾಗಬಹುದಾದ ಮಧ್ಯಂತರ ಚುನಾವಣೆಗೆ ಸಜ್ಜಾಗಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

    ನಗರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರು ಯಾವಾಗ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ತಿಳಿದಿಲ್ಲ. ಹಾಗಾಗಿ ಚುನಾವಣೆ ಯಾವಾಗ ಬೇಕಾದರೂ ಎದುರಾಗಬಹುದು. ಅದಕ್ಕೆ ಪಕ್ಷ ಸಿದ್ದವಾಗಿರಬೇಕು ಎಂದರು.

    ಪ್ರಧಾನಿ ನರೇಂದ್ರಮೋದಿ ಹಾಗೂ ಅಮಿತ್ ಷಾ ಅವರು ಯಾವ ಸಂದರ್ಭದಲ್ಲಿ ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ?ಹೇಳಲು ಸಾಧ್ಯವಿಲ್ಲ.ಹೀಗಾಗಿ ಯಾವುದೇ ಸನ್ನಿವೇಶ ಎದುರಾದರೂ ಅದನ್ನು ಎದುರಿಸಲು ಸಿದ್ಧರಾಗಿರಿ ಎಂದು ಅವರು ಹೇಳಿದರು.ಜೆಡಿಎಸ್ ಪಕ್ಷ ಬಹಳ ಬಿಕ್ಕಟ್ಟಿನಲ್ಲಿದೆ.ಆದರೆ ಪಕ್ಷವನ್ನು ಹೇಗೆ ಕಟ್ಟಬೇಕು ಎಂಬುದು ನಿಮಗೆ ಗೊತ್ತಿದೆ.ಹೀಗಾಗಿ ನಾನು ನಿಮ್ಮ ಬಳಿ ಬಂದಿದ್ದೇನೆ.ನೀವೇ ಕೈ ಹಿಡಿದು ಪಕ್ಷವನ್ನು ಮೇಲೆತ್ತಬೇಕು ಎಂದು ಮನವಿ ಮಾಡಿಕೊಂಡರು.

    ಇವತ್ತು ಪಕ್ಷದಲ್ಲಿ ಯಾರು ಉಳಿದಿದ್ದಾರೆ?ಯಾರು ಹೋಗಿದ್ದಾರೆ?ಎಂಬ ಕುರಿತು ನಾನು ಮಾತನಾಡುವುದಿಲ್ಲ.ಪಕ್ಷ ತೊರೆದು ಹೋದ ಮೂವರು ಶಾಸಕರ ಬಗ್ಗೆಯೂ ಏನೂ ಹೇಳುವುದಿಲ್ಲ.ಅವರ ಬಗ್ಗೆ ಮಹಾಜನರೇ ತೀರ್ಮಾನ ಮಾಡುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಪ್ರವಾಹದ ಪರಿಸ್ಥಿತಿ ಇದೆ.ಆದರೆ ಪರಿಹಾರ ಕಾರ್ಯ ಮಾಡಬೇಕಾದವರು ಏನು ಮಾಡುತ್ತಿದ್ದಾರೆ ಎಂಬುದು ನಿಮಗೆ ಗೊತ್ತಿದೆ ಎಂದ ಅವರು,ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ತುಮಕೂರಿನಲ್ಲಿ ಸೋಲಿಸಿದ ಪುಣ್ಯಾತ್ಮರಿಗೆ ಒಳ್ಳೆಯದಾಗಲಿ.

      ಅವರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಕಹಿ ಕಾರಿದರು.ಈ ದೇಶದಲ್ಲಿ ಹೆಣ್ಣು ಮಕ್ಕಳಿಗೆ ಮೀಸಲಾತಿ ಅಂತ ಯಾರಾದರೂ ಕೊಟ್ಟಿದ್ದರೆ ಅದು ದೇವೇಗೌಡ ಎಂಬುದು ನೆನಪಿನಲ್ಲಿರಲಿ ಎಂದ ಅವರು,ಇತಿಹಾಸ ಗೊತ್ತಿಲ್ಲದವರು ಬಾಯಿಗೆ ಬಂದಂತೆ ಮಾತನಾಡಬಹುದು.ಆದರೆ ಅದರ ಬಗ್ಗೆ ಚಿಂತಿಸುವುದು ನನ್ನ ಸ್ವಭಾವವಲ್ಲ ಎಂದರು.ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಮ್ಮಿಶ್ರ ಸರ್ಕಾರ ಬೀಳಲು ಯಾರು ಕಾರಣ ಎಂದು ಮಾತನಾಡಲು ನಾನು ಹೋಗುವುದಿಲ್ಲ.ಬದಲಿಗೆ ಅದರ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಅವರು ಹೇಳಿದರು.

     ಈ ತಿಂಗಳ ಅಂತ್ಯಕ್ಕೆ ಮಹಿಳಾ ಸಮಾವೇಶ ನಡೆಸಿ ಮಹಿಳಾ ಮೀಸಲಾತಿಗೆ ಒತ್ತಾಯಿಸಲಾಗುವುದು. ಮುಂದಿನ ತಿಂಗಳು ಹಿಂದುಳಿದ ವರ್ಗ, ಎಸ್ಸಿ-ಎಸ್ಟಿ ಸಮಾವೇಶವನ್ನು ಉತ್ತರ ಕರ್ನಾಟಕದಲ್ಲಿ ಆಯೋಜಿಸಲಾಗುವುದು. ಪಕ್ಷ ಉಳಿಸಲು ನಿಷ್ಠಾವಂತ ಕಾರ್ಯಕರ್ತರನ್ನುಒಗ್ಗೂಡಿಸುವ ಕೆಲಸ ನಡೆಯಲಿದೆ. ಪಕ್ಷ ಕಟ್ಟುವ ಕೆಲಸಕ್ಕೆ ಎಲ್ಲರೂ ಮುಂದಾಗಿ ಎಂದು ಕರೆ ನೀಡಿದರು.

      ಮಳೆಯ ನಡುವೆಯೂ ಇಷ್ಟೊಂದು ಮಂದಿ ಸಮಾವೇಶದಲ್ಲಿ ಪಾಲ್ಗೊಂಡಿರುವುದು ತಮಗೆ ಮತ್ತಷ್ಟು ಆತ್ಮವಿಶ್ವಾಸ ಹೆಚ್ಚಿಸಿದೆ. ನಾರಾಯಣಗೌಡ,ಗೋಪಾಲಯ್ಯ ಹಾಗೂ ಎಚ್.ವಿಶ್ವನಾಥ್ ಅವರ ಕ್ಷೇತ್ರಗಳಿಗೆ ಆಯಾ ಕ್ಷೇತ್ರದವರನ್ನೇ ಕಣಕ್ಕಿಳಿಸಲಾಗುವುದು ಎಂದು ತಿಳಿಸಿದರು.

     ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಮಾತನಾಡಿ:ಅಧಿಕಾರ ಹಿಡಿದಾಗ ಜನರಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ.ಈ ವಿಷಯದಲ್ಲಿ ನನಗೆ ತೃಪ್ತಿಯಿದೆ.ಆದರೂ ನಾವು ಕಷ್ಟ ಕಾಲ ಎದುರಿಸಬೇಕಿದೆ.ನೀವೆಲ್ಲ ಇರುವುದರಿಂದ ಆ ಕಾಲವನ್ನೂ ಧೈರ್ಯವಾಗಿ ಎದುರಿಸುತ್ತೇವೆ ಎಂದರು.

    ಸಮ್ಮಿಶ್ರ ಸರ್ಕಾರದಲ್ಲಿ ನಾನು ನೆಪ ಮಾತ್ರಕ್ಕೆ ಮುಖ್ಯಮಂತ್ರಿಯಾಗಿದ್ದೆ.ಇನ್ಯಾರದೋ ಮುಲಾಜಿಗೆ ಕೆಲಸ ಮಾಡುತ್ತಿದೆ ಎಂದ ಅವರು,ನನ್ನ ಸ್ಥಿತಿಯ ಬಗ್ಗೆ ನನಗೇ ಮರುಕವಾಗಿ ಪಕ್ಷದ ಕಛೇರಿಯಲ್ಲಿ ಕಣ್ಣೀರು ಹಾಕಿದ್ದೆ. ಯಾಕೆಂದರೆ ಮುಖ್ಯಮಂತ್ರಿಯಾದರೂ ಪಕ್ಷದ ನಿಷ್ಟಾವಂತರಿಗೆ ಅಧಿಕಾರ ಕೊಡಲು ಸಾಧ್ಯವಾಗುತ್ತಿಲ್ಲ ಎಂಬ ನೋವು ನನಗಿತ್ತು ಎಂದು ತಮ್ಮ ಅಂತರಾಳ ತೋಡಿಕೊಂಡರು.ಲೋಕಸಭಾ ಚುನಾವಣೆಯಲ್ಲಿ ನಮ್ಮನ್ನು ಸೋಲಿಸಲೆಂದೇ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ವ್ಯಂಗೋಕ್ತಿಗಳ ಸುರಿಮಳೆಗೈಯ್ಯಲಾಯಿತು.ನಿಖಿಲ್ ಎಲ್ಲಿದೀಯಪ್ಪಾ?ಎಂದು ಟ್ರೋಲ್ ಮೇಲೆ ಟ್ರೋಲ್ ಮಾಡಿದರು.

     ಆದರೆ ರಾಜ್ಯದಲ್ಲಿ ಅತಿವೃಷ್ಟಿಯಿಂದ ಬಹುತೇಕ ಜಿಲ್ಲೆಗಳು ಕಂಗಾಲಾಗಿ ಹೋಗಿವೆ.ಜನ ಪರದಾಡುತ್ತಿದ್ದಾರೆ.ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ದೆಹಲಿಗೆ ಹೋಗಿ ಕುಳಿತಿದ್ದಾರೆ,ಟ್ರೋಲ್ ಮಾಡುವವರಿಗೆ ಯಡಿಯೂರಪ್ಪ ಎಲ್ಲಿದೀಯಪ್ಪಾ?ಎಂದು ಕೇಳಲು ಆಗುತ್ತಿಲ್ಲವೇಕೆ?ಎಂದು ಪ್ರಶ್ನಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ಹೆಚ್.ಕೆ.ಕುಮಾರಸ್ವಾಮಿ ಅವರು,ಸಂಕಷ್ಟದಲ್ಲಿದ್ದರೂ ಸಿಎಂ ಆಗಿದ್ದ ಕಾಲದಲ್ಲಿ ಕುಮಾರಸ್ವಾಮಿಯವರು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ.ಮುಂದಿನ ದಿನಗಳಲ್ಲಿ ಅವು ಪರಿಣಾಮಕಾರಿ ಯಾಗಿ ಅನುಷ್ಟಾನವಾಗುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.ರೈತರ ಸಾಲ ಮನ್ನಾ,ಋಣ ವಿಮೋಚನಾ ಕಾಯ್ದೆ,ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಸೇರಿದಂತೆ ಹಲವು ಮಹತ್ವದ ಯೋಜನೆಗಳನ್ನು ಕುಮಾರಸ್ವಾಮಿ ಅವರು ಜಾರಿಗೆ ತಂದಿದ್ದಾರೆ ಎಂದು ಅವರು ವಿವರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap