ಮೋದಿ ವಿರುದ್ಧ ದೇವೇಗೌಡರು ದೊಡ್ಡ ಶಕ್ತಿ

ತುಮಕೂರು

         ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದ ವಿರುದ್ಧ ದೇಶದಾದ್ಯಂತ ದೊಡ್ಡ ಶಕ್ತಿ ರೂಪುಗೊಳ್ಳಲು ದೇವೇಗೌಡರ ಪಾತ್ರ ಪ್ರಮುಖವಾದದ್ದು. ಇತರೆ ರಾಜ್ಯಗಳ ಪ್ರಾದೇಶಿಕ ಪಕ್ಷಗಳನ್ನು ಬಿಜೆಪಿ ವಿರುದ್ಧ ಸಂಘಟಿಸುವಲ್ಲಿ ಪ್ರಮುಖ ದೇವೇಗೌಡರು ಕಾರಣಕರ್ತರಾಗಿದ್ದಾರೆ ಎಂದು ಸಂಸದ ಎಸ್ ಪಿ ಮುದ್ದಹನುಮೇಗೌಡರು ಹೇಳಿದರು.

        ನಗರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಕಾನೂನು ಮತ್ತು ಮಾನವಹಕ್ಕುಗಳ ವಿಭಾಗ ಏರ್ಪಡಿಸಿದ್ದ ತುಮಕೂರು ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವ ವಕೀಲರ ಸಮಾವೇಶದಲ್ಲಿ ಮಾತನಾಡಿದ ಮುದ್ದಹನುಮೇಗೌಡರು, ಇಡೀದೇಶದಲ್ಲಿ ಆಡಳಿತ ಪಕ್ಷದ ವಿರುದ್ದ ವಿವಿಧ ಪಕ್ಷಗಳ ಸಂಘಟಿಸುವ ಕಾರ್ಯದಲ್ಲಿ ದೇವೇಗೌಡರು ಮುಂಚೂಣಿಯಲ್ಲಿರುವ ಕಾರಣ, ಇವರು ಸ್ಪರ್ಧಿಸಿರುವ ತುಮಕೂರು ಕ್ಷೇತ್ರದ ಚುನಾವಣೆ ಮಹತ್ವ ಪಡೆದಿದ್ದು ದೇವೇಗೌಡರನ್ನು ಗೆಲ್ಲಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

        ತಮ್ಮ ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ ತಾವು ಕ್ಷೇತ್ರವನ್ನು ದೇವೇಗೌಡರಿಗೆ ಬಿಟ್ಟುಕೊಡಬೇಕಾಯಿತು. ರಾಹುಲ್ ಗಾಂಧಿ, ಕೆ ಸಿ ವೇಣುಗೋಪಾಲ್ ಅವರು ತಮಗೆ ದೂರವಾಣಿ ಕರೆ ಮಾಡಿ, ಮೈತ್ರಿ ಧರ್ಮ ಪಾಲನೆ ಸಲುವಾಗಿ ದೇವೇಗೌಡರಿಗಾಗಿ ಕ್ಷೇತ್ರ ಬಿಡಲು ಕೇಳಿಕೊಂಡರು. ಪಕ್ಷದ ಮೇಲೆ ನಂಬಿಕೆ ಇಟ್ಟು, ಪಕ್ಷದ ವಿರುದ್ಧವಾಗಿ ನಡೆದುಕೊಳ್ಳಬಾರದು ಎಂದು ತಾವು ಸಲ್ಲಿಸಿದ್ದ ನಾಮಪತ್ರ ವಾಪಾಸ್ ಪಡೆದುದ್ದಾಗಿ ಮುದ್ದಹನುಮೇಗೌಡರು ಹೇಳಿದರು.

          ದೇವೇಗೌಡರ ಪರವಾಗಿ ಪ್ರಚಾರ ಮಾಡಲು ಸಾಧ್ಯವಾದಷ್ಟು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ ಮುದ್ದಹನುಮೇಗೌಡರು, ಸಣ್ಣ ಹಳ್ಳಿಯಲ್ಲಿ ಹುಟ್ಟಿ ದೇಶದ ಉನ್ನತ ಸ್ಥಾನ ಗೌರವ ಪಡೆದ ದೇವೇಗೌಡರ ಘನತೆ, ಸಂಸತ್ತಿನಲ್ಲಿ ಇವರ ಅಗತ್ಯದ ಕಾರಣಕ್ಕೆ ಇವರ ಗೆಲುವಿಗೆ ಎಲ್ಲರೂ ಪ್ರಾಮಾಣಿಕವಾಗಿ ಪ್ರಯತ್ನ ಮಾಡಬೇಕು ಎಂದು ಹೇಳಿದರು.

       50 ವರ್ಷದ ಹಿಂದಿನ ರಾಜಕಾರಣದ ಘನತೆಗೂ ಈಗಿನ ರಾಜಕಾರಣಕ್ಕೂ ತುಂಬಾ ವ್ಯತ್ಯಾಸವಾಗಿದೆ. ರಾಜಕೀಯದಲ್ಲಿ ಅನೈತಿಕ, ಅನಾಚಾರ ಹೆಚ್ಚುತ್ತಲೇ ಇದೆ. ಇಂತಹ ವ್ಯವಸ್ಥೆ ಬದಲಾಗಬೇಕು ಸ್ವಚ್ಚ ರಾಜಕಾರಣ ಕಾಣಬೇಕು ಎಂಬ ಆಶಯ ವ್ಯಕ್ತಪಡಿಸಿದ ಮುದ್ದಹನುಮೇಗೌಡರು, ಅಂತಹ ಬದಲಾವಣೆಗೆ ವಿಶೇಷವಾಗಿ ವಕೀಲರು ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

        ವಿಧಾನ ಪರಿಷತ್ ಮುಖ್ಯ ಸಚೇತಕ ಚೌಡರೆಡ್ಡಿ ಮಾತನಾಡಿ, ದೇಶದ ಹಿತ ದೃಷ್ಟಿಯಿಂದ ದೇವೇಗೌಡರ ಗೆಲುವು ಅಗತ್ಯವಾಗಿದೆ. ಗೌಡರು ತುಮಕೂರು ಕ್ಷೇತ್ರದಿಂದ ಹೆಚ್ಚಿನ ಮತಗಳ ಅಂತರದಿಂದ ಜಯ ಪಡೆಯುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋವಿಂದರಾಜು ಮಾತನಾಡಿ, ಅಭಿವೃದ್ಧಿ, ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ದೇವೇಗೌಡರನ್ನು ತುಮಕೂರು ಕ್ಷೇತ್ರದ ಮತದಾರರು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

        ಮಾಜಿ ಶಾಸಕರಾದ ಹೆಚ್ ನಿಂಗಪ್ಪ, ರಮೇಶ್ ಬಾಬು, ಜೆಡಿಎಸ್ ಕಾನೂನು ಘಟಕದ ರಾಜ್ಯಾಧ್ಯಕ್ಷ ಎ ಪಿ ರಂಗನಾಥ್, ಹಿರಿಯ ವಕೀಲರಾದ ಪ್ರೊ. ರವಿವರ್ಮಕುಮಾರ್, ಹರಿಕುಮಾರ್, ಟಿ ಆರ್ ಚಿಕ್ಕರಂಗಣ್ಣ, ಟಿ ಎಸ್ ನಿರಂಜನ್, ಕೆ ಎನ್ ಬಸವರಾಜು, ಗಂಗಾಧರಯ್ಯ, ಮರಿಚೆನ್ನಮ್ಮ, ಅಭಿನಯ್ ಮೊದಲಾದವರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link