ದೇವೇಗೌಡರಿಗೆ ಕುಟ್ಟಿ ಹದಮಾಡುವ ಅಭ್ಯಾಸವಿದೆ: ಸತೀಶ ಜಾರಕಿಹೊಳಿ

ಬಳ್ಳಾರಿ

     ‘ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಎಲ್ಲ ರೀತಿಯಿಂದ ಕುಟ್ಟಿ ಹದಮಾಡುವ ಅಭ್ಯಾಸವಿದೆ. ಎಲ್ಲವನ್ನೂ ರೌಂಡ್‌ ಮಾಡಿ, ಚೌಕ ಮಾಡಿ ನೋಡುತ್ತಾರೆ. ಅದನ್ನು ಅವರು ಎಲ್ಲ ಕೋನಗಳಿಂದ ಮಾಡುತ್ತಿರುತ್ತಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ . ಅವರ ಆಶೀರ್ವಾದ ನಮ್ಮ ಮೇಲಿದೆ. ಹೀಗಾಗಿ ಮೈತ್ರಿ ಸರ್ಕಾರಕ್ಕೆ ಯಾವುದೇ ಅಪಾಯವಿಲ್ಲ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

     ತಾಲ್ಲೂಕಿನ ಕಮಲಾಪುರ ಸಮೀಪದ ಅಟಲ್‌ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನದಲ್ಲಿ ಶುಕ್ರವಾರ ಸಂಜೆ ಹುಲಿ ಮತ್ತು ಸಿಂಹ ಸಫಾರಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಪ್ರತಿಕ್ರಿಯಿಸಿದರು.

     ‘ದೇವೇಗೌಡರು ಹಿರಿಯರಿದ್ದಾರೆ. ಅವರು ಎಲ್ಲ ತರಹದಿಂದ ಆಡುತ್ತಾರೆ. ಮಧ್ಯಂತರ ಚುನಾವಣೆ ನಡೆಯಬಹುದು ಎಂದು ಅವರು ನೀಡಿರುವ ಹೇಳಿಕೆಯನ್ನು ಒಂದೇ ದೃಷ್ಟಿಕೋನದಿಂದ ನೋಡಬೇಕಿಲ್ಲ. ಅವರ ಆಶೀರ್ವಾದ ಇದೆ. ಸರ್ಕಾರ ನಡೆಯುತ್ತದೆ. ಕಾಂಗ್ರೆಸ್‌ ಪಕ್ಷದ ಸಂಖ್ಯಾಬಲ ಕಡಿಮೆ ಇದೆ. ಸ್ವಲ್ಪ ಹೆಚ್ಚು ಕಡಿಮೆಯಾಗುತ್ತದೆ. ಸಿದ್ದರಾಮಯ್ಯನವರ ಸರ್ಕಾರವಿದ್ದಾಗ ಎಲ್ಲ ಟೈಟ್‌ ಇತ್ತು’ ಎಂದರು.

      ‘ಜಿಂದಾಲ್‌ಗೆ ಭೂ ಪರಭಾರೆ ಮಾಡಬೇಕೇ ಅಥವಾ ಮಾಡಬಾರದೇ ಎನ್ನುವುದರ ಕುರಿತು ಸರ್ಕಾರ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ. ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯವಿದೆ. ಸರ್ಕಾರ ಈಗಾಗಲೇ ಉಪಸಮಿತಿ ರಚಿಸಿದೆ. ಅದು ಕೊಡುವ ವರದಿ ಆಧರಿಸಿ ಸಂಪುಟ ಸಭೆಯಲ್ಲಿ ನಿರ್ಧಾರಕ್ಕೆ ಬರಲಾಗುತ್ತದೆ. ಸ್ಥಳೀಯರಿಗೆ ನೌಕರಿ ಸಿಗಬೇಕು. ರೈತರಿಗೆ ಪರಿಹಾರ ಸಿಗಬೇಕು ಎಂದು ಶಾಸಕ ಆನಂದ್‌ ಸಿಂಗ್‌ ಹೇಳುತ್ತಿದ್ದಾರೆ ಹೊರತು ಸರ್ಕಾರದ ತೀರ್ಮಾನವನ್ನು ಅವರು ವಿರೋಧಿಸಿಲ್ಲ’ ಎಂದು ಹೇಳಿದರು.

       ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ, ‘ಒಂದು ಮನೆ ಅಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಇರುತ್ತವೆ. ಎಲ್ಲರೂ ಕುಳಿತುಕೊಂಡು ಸಮಸ್ಯೆ ಬಗೆಹರಿಸಿಕೊಂಡು ಹೋಗುತ್ತೇವೆ’ ಎಂದು ಜಿಂದಾಲ್‌ ಭೂ ಪರಭಾರೆಗೆ ಸ್ವಪಕ್ಷೀಯರಿಂದ ವಿರೋಧ ವ್ಯಕ್ತವಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap