ತುಮಕೂರು
ಮಾಜಿ ಪ್ರಧಾನಿ ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಬರುವ ಅಗತ್ಯವಿರಲಿಲ್ಲ, ಸುಮ್ಮನೆ ಬಂದು ಸೋತು ಮರ್ಯಾದೆ ಕಳೆದುಕೊಂಡು ಹೋಗುತ್ತಾರೆ, ಈಗಲೂ ಕಾಲ ಮಿಂಚಿಲ್ಲ ಮುದ್ದಹನುಮೇಗೌಡರಿಗೆ ಸೀಟು ಬಿಟ್ಟುಕೊಟ್ಟು ವಾಪಸ್ ಹೋಗಲಿ ಎಂದು ಮಾಜಿ ಸಚಿವ, ಬಿಜೆಪಿ ಜಿಲ್ಲಾ ಉಸ್ತುವಾರಿ ವಿ. ಸೋಮಣ್ಣ ಹೇಳಿದರು
ತುಮಕೂರು ಲೋಕಸಭೆಗೆ ಜಿ ಎಸ್ ಬಸವರಾಜು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ದೇವೇಗೌಡರನ್ನು ಮಣಿಸುವ ಶಕ್ತಿ ಬಿಜೆಪಿಗಿದೆ ಎಂದರು.
ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಜಿಲ್ಲೆಯ ಎಲ್ಲಾ ಮುಖಂಡರು ಅಸಮಧಾನ ಬದಿಗಿಟ್ಟು ದೇಶದ ಹಿತ ಕಾಪಾಡಲು, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ದೇವೇಗೌಡರು ತುಮಕೂರಿಗೆ ಬರುವ ಅಗತ್ಯವಿರಲಿಲ್ಲ ಎಂದು ಹೇಳಿದರು.
ಶಾಸಕ ಜೆ ಸಿ ಮಾಧುಸ್ವಾಮಿ ಮಾತನಾಡಿ, ನೀರಾವರಿ ವಿಚಾರವೊಂದೇ ಅಲ್ಲ, ದೇವೇಗೌಡರ ವಿರುದ್ಧ ಹೋರಾಟ ಮಾಡಲು ನಮಗೆ ಹಲವು ವಿಚಾರಗಳಿವೆ, ಎಲ್ಲವನ್ನೂ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿ ದೇವೇಗೌಡರನ್ನು ಸೋಲಿಸುತ್ತೇವೆ ಎಂದರು.
ಬೇರೆ ಜಿಲ್ಲೆಯವರು ಇಲ್ಲಿ ಬಂದು ರಾಜಕಾರಣ ಮಾಡುವುದು ಸುಲಭವಲ್ಲ, ಇಲ್ಲಿನ ಜನ ಅದಕ್ಕೆ ಅವಕಾಶ ನೀಡುವುದಿಲ್ಲ ಈ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡುತ್ತಾರೆ, ನಾವು ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.ಮಾಜಿ ಶಾಸಕ ಸುರೇಶ್ ಗೌಡರು, ದೇವೇಗೌಡರ ದೃತರಾಷ್ಟ್ರ ಪ್ರೇಮ ಮಕ್ಕಳಿಂದ ಮೊಮ್ಮಕ್ಕಳವರೆಗೆ ಮುಂದುವರೆದಿದೆ ಎಂದು ವ್ಯಂಗ್ಯವಾಡಿದರು.
ನಾಲ್ಕು ಕ್ಷೇತ್ರಗಳನ್ನು ಉಳಿಸಿಕೊಳ್ಳಲು ದೇವೇಗೌಡರು ಪರದಾಡುತ್ತಿದ್ದಾರೆ, ಅಂತಹ ಪರಿಸ್ಥಿತಿಯಲ್ಲಿ ರಾಷ್ಟ್ರವನ್ನು ಬಿಜೆಪಿ ಮುಕ್ತ ಮಾಡುತ್ತೇನೆ ಎಂದು ಹೇಳುತ್ತಾರೆ, ನೀವು ನಮ್ಮ ಪಕ್ಷದ ವಿಷಯಕ್ಕೆ ಬರಬೇಡಿ ಎಂದು ಹೇಳಿದರು