ಮೈತ್ರಿಯಿಂದಲೇ ದೇವೇಗೌಡರು ಸೋಲು ಕಂಡಿದ್ದಾರೆ:ಗೌರಿಶಂಕರ್

ತುಮಕೂರು

       ಮೇ 23ರಂದು ಹೊರ ಬಂದ ಫಲಿತಾಂಶದಲ್ಲಿ ಕೇವಲ 13ಸಾವಿರ ಮತಗಳ ಅಂತರದಿಂದ ದೇವೇಗೌಡರು ಸೋಲನ್ನು ಅನುಭವಿಸಬೇಕಾಯಿತು. ಇದಕ್ಕೆ ಮೂಲ ಕಾರಣ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವುದೇ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಆರೋಪಿಸಿದರು.

       ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಆತ್ಮಾವಲೋಕನ ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ದೇವೇಗೌಡರು ಮಾಜಿ ಪ್ರಧಾನಿಗಳಾಗಿದ್ದು, ನಮ್ಮಂತಹ ಯುವ ಪೀಳಿಗೆಗೆ ಶಕ್ತಿ ಹಾಗೂ ಸ್ಪೂರ್ತಿಯಾಗಿದ್ದವರು. ಸಂಸತ್‍ನಲ್ಲಿ ನಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡಬಲ್ಲ ಶಕ್ತಿಯಿದ್ದಂತ ಮಾಣಿಕ್ಯ ಅವರು. ಅಂತಹವರನ್ನು ನಮ್ಮ ಜನ ಸೋಲಿಸಿದ್ದು, ಇದಕ್ಕೆ ಮೂಲ ಕಾರಣ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವುದೇ ಎಂದು ಆರೋಪ ಮಾಡಿದ್ದಾರೆ.

        ಮೈತ್ರಿ ಹೆಸರಿನಲ್ಲಿ ದಿನ ಬೆಳಗಾದರೆ ಆ ನಾಯಕರನ್ನು ಭೇಟಿ ಮಾಡಬೇಕು. ಈ ನಾಯಕನನ್ನು ಭೇಟಿ ಮಾಡಬೇಕು ಎಂಬುದೇ ಆಯಿತು. ಇದರಿಂದ ಯಾರಿಗೆ ಲಾಭವಾಯಿತು. ಒಬ್ಬ ನಾಯಕನ ಮೇಲೆ ಇನ್ನೊಬ್ಬ ನಾಯನಕ ಮುನಿಸುನಿಂದ ದೇವೇಗೌಡರು ಸೋಲಬೇಕಾಯಿತು. ರಾಜ್ಯದ ನಾಯಕರಲ್ಲಿ ಆದ ಮೈತ್ರಿ ಸ್ಥಳೀಯ ಕಾರ್ಯಕರ್ತರಲ್ಲಿ ಮೈತ್ರಿ ಆಗಲಿಲ್ಲ.

       ಕೇವಲ ರಾಜ್ಯದಲ್ಲಿ ಮೈತ್ರಿ ಮಾಡುವುದರ ಬದಲಾಗಿ ಸ್ಥಳೀಯವಾಗಿ ತಾಲ್ಲೂಕು ಮಟ್ಟ ಹಾಗೂ ಬೂತ್ ಮಟ್ಟದ ಕಾರ್ಯಕರ್ತರಲ್ಲಿ ಮೈತ್ರಿ ಸಂಬಂಧ ಮೂಡಿಸಬೇಕಿತ್ತು. ಇದು ಆಗದೇ ಇದ್ದುದರಿಂದ ಇಂದು ಜೆಡಿಎಸ್‍ನ ಕೋಟೆಯಾದ ತುಮಕೂರಿನಲ್ಲಿ ದೇವೇಗೌಡು ಸೋಲನ್ನು ಅನುಭವಿಸಿದರು ಎಂದರು.

       ಕೆ.ಎನ್.ರಾಜಣ್ಣ ಅವರ ಬಗ್ಗೆ ಮಾತನಾಡಿ, ಮೈತ್ರಿ ಅಭ್ಯರ್ಥಿಗೆ ಬೆಂಬಲ ನೀಡದೆ ಹಿಂಭಾಗಿಲ ರಾಜಕಾರಣ ಮಾಡುತ್ತಾ, ಮಧುಗಿರಿಯಲ್ಲಿ ಕುಂಚಿಟಗರು ಮತ ನೀಡುವುದಿಲ್ಲ ಎಂಬ ಭಯಕ್ಕೆ ನಿಖಿಲ್ ಬಗ್ಗೆ ಕುಂಚಿಟಿಗ ಸಮಾಜದ ಬಗ್ಗೆ ಮಾತನಾಡುತ್ತೀರಿ. ನಿಜವಾಗಿಯೂ ಬಿಜೆಪಿಗೆ ಬೆಂಬಲ ನೀಡಿದ್ದರೆ ನೇರವಾಗಿ ಹೇಳಲಿ ಆದರೆ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಏನೋ ಮಾಡಿದ್ದಾರೋ ಏನೋ. ಮತ ಹಾಕಿದ್ದಾರೋ ಏನೋ ಎಂದು ಮಾತನಾಡಿದರೆ ಯಾರು ಏನು ಮಾಡಲು ಸಾಧ್ಯವಿಲ್ಲ.

ಯುವಕರಲ್ಲಿ ಹುರುಪು ತುಂಬುವ ದೇವೇಗೌಡರು

        87ರ ಇಳಿವಯಸ್ಸಿನಲ್ಲಿ ದೇವೇಗೌಡರು ನಮಗೆ ಕರೆ ಮಾಡಿ ಸೋತಿದ್ದು ನಾನು ಅದಕ್ಕೆ ನೀವ್ಯಾಕೆ ಬೇಸರ ಪಡುತ್ತೀರಾ, ನಾಳೆಯಿಂದ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ನನ್ನೊಂದಿಗೆ ಬಾ ಎಂದು ಹೇಳುವ ಮೂಲಕ ನಮ್ಮಲ್ಲಿ ಹುರುಪ ತರುತ್ತಿದ್ದಾರೆ. ನಮ್ಮ ರಾಜ್ಯದ ಜನರು, ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸಿ ಅವರ ಸಮಸ್ಯೆ ಪರಿಸಲು ಮುಂದಾಗಬೇಕು. ಸೋಲು ಗೆಲುವು ಎಂಬುದು ರಾಜಕಾರಣದಲ್ಲಿ ಸಾಮಾನ್ಯ ಎಂದು ಹೇಳುವ ಮೂಲಕ ನಮ್ಮೆಲ್ಲರಿಗೆ ಸ್ಪೂರ್ತಿಯಾಗಿದ್ದಾರೆ.

        ಯಾವ ಸಮುದಾಯಗಳ ಮೇಲೆ ದೂರು ಹೇಳಲಾಗುವುದಿಲ್ಲ. ಮೋದಿಯ ಅಲೆಯಿಂದ ನಮಗೆ ಸೋಲಲು ಒಂದು ಕಾರಣವಾಗಿರಬಹುದು. ಈಗ ಕೆಲ ಕಾರ್ಯಕರ್ತರು ಹೇಳಿದಂತೆ ಇವಿಎಂ ಮಷಿನ್‍ಗಳು ಹ್ಯಾಕ್ ಆಗಿರಬಹುದು ಎಂಬ ಸಂಶಯ ನಮಗೂ ಬರುತ್ತಿದೆ. ಇವಿಎಂ ಹ್ಯಾಕ್ ಎಂಬ ವಿಚಾರದಲ್ಲಿ ಮಂಡ್ಯದ ಮಾಜಿ ಸಂಸದ ಶಿವರಾಮೇಗೌಡರು ಹೇಳಿದಾಗೆ ಕೆಲವೊಂದು ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಅದರ ಬಗ್ಗೆ ನನ್ನ ಸಹಮತ ಇದೆ ಎಂದರು.

       ಗ್ರಾಮಾಂತರದಲ್ಲಿ ಹಿನ್ನಡೆಯಾಗಲು ಬಸವರಾಜುರೊಂದಿಗೆ ಶಿವಣ್ಣ, ಸುರೇಶ್‍ಗೌಡ, ಮಾಜಿ ಸಂಸದ ಮುದ್ದಹನುಮೆಗೌಡರು ಒಂದಾಗಿ ಚುನಾವಣೆ ಮಾಡಿದ್ದಾರೆ. ಆದರೂ ನನ್ನ ಕ್ಷೇತ್ರದಲ್ಲಿ ಹೆಚ್ಚಿನ ಮತಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಇದು ಜೆಡಿಎಸ್‍ನ ಭದ್ರಕೋಟೆಯಾಗಿದೆ. ಜೆಲ್ಲೆಯ ಜೆಡಿಎಸ್ ನಾಯಕರು ಸೂಕ್ತವಾಗಿ ಪ್ರಚಾರ ಕಾರ್ಯಗಳಲ್ಲಿ ತೊಡಗಿ ಉತ್ತಮವಾಗಿ ಪಕ್ಷ ಸಂಘಟನೆಗೆ ಶ್ರಮಿಸಿದ್ದಾರೆ.

        ಆದರೆ ಈ ಕುತಂತ್ರ ರಾಜಕಾರಣದಿಂದ ದೇವೇಗೌಡರ ಸೋಲು ಕಾಣಬೇಕಾಯಿತು. ಮುದ್ದಹನುಮೇಗೌಡರಿಗೆ ನಾನೇ ಖುದ್ದಾಗಿ ಕರೆ ಮಾಡಿದ್ದೇನೆ. ಆದರೆ ಎಲ್ಲಿಯೂ ಯಾವೊಂದು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿಲ್ಲ.

ಆತ್ಮಾವಲೋಕನಾ ಸಭೆ :

        ಪತ್ರಿಕಾಗೋಷ್ಠಿಗೂ ಮುನ್ನ ಆತ್ಮಾವಲೋಕನ ಸಭೆ ನಡೆಸಿದ್ದು, ಕೆಲ ಕಾರ್ಯಕರ್ತರು ಜೆಡಿಎಸ್ ಸೋಲಲು ಕಾರಣಗಳೇನು ಎಂಬುದರ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಮಾತನಾಡಿದ ಗೌರಿಶಂಕರ್, ಸೋಲಲು ಕಾರಣ ಏನು ಎಂಬುದು ನನಗೆ ಗೊತ್ತಿದೆ. ಅದಕ್ಕೆ ಪೂರಕವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇನೆ. ಮುಂದೆ ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರ ಬರುತ್ತಿದ್ದು, ಅದಕ್ಕೆ ಸಿದ್ದರಾಗಿ. ಎಲ್ಲಾ ಗ್ರಾಮಗಳಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿ ಕೊಡಿ. ಅದರ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು. ಅಲ್ಲದೆ ಸಾಮಾಜಿಕ ಜಾಲತಾಣದ ತಂಡಕ್ಕೆ ಯಾವುದೇ ಪೋಸ್ಟ್ ಮಾಡುವಾಗ ಹಾಗೂ ಕಾಮೆಂಟ್ ಮಾಡುವಾಗ ಗಮನಹರಿಸಿ ಎಂದು ಆದೇಶ ನೀಡಿದರು.

       ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಅಧ್ಯಕ್ಷರಾದ ಹಾಲನೂರು ಅನಂತಕುಮಾರ್, ಎಸ್.ಸಿ.ಘಟಕದ ಜಿಲ್ಲಾ ಪ್ರಧಾನಕಾರ್ಯದರ್ಶಿ ಬೆಳಗುಂಬವೆಂಕಟೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಕೆಎನ್‍ಆರ್ ವಿರುದ್ಧ ಗೌರಿ ಶಂಕರ್ ವಾಗ್ದಾಳಿ

         ಮಧುಗಿರಿಯಲ್ಲಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಅಲ್ಲಿ ಬಿಜೆಪಿ ಪಕ್ಷದ ಚಿಹ್ನೆಯೇ ಗೊತ್ತಿಲ್ಲ. ಅಂತಹ ಕ್ಷೇತ್ರದಲ್ಲಿ ಇಂದು ಬಿಜೆಪಿ ಅತಿ ಹೆಚ್ಚಿನ ಮತಗಳು ಪಡೆದಿವೆ ಎಂದರೆ ಅದಕ್ಕೆ ಕಾರಣ ಯಾರು? ಒಕ್ಕಲಿಗ ದೇವೇಗೌಡರು ಗೌಡರು ಆದರೆ ಮುದ್ದಹನುಮೇಗೌಡರು ದಕ್ಲರೋನಾ ಎಂದು ಹೇಳಿಕೆ ನೀಡುತ್ತಿರಾ.. ಅವರೇನು ನಿಮ್ಮ ಮನೆ ಕೂಲಿಕಾರರಾ? ಮಧುಗಿರಿಯಲ್ಲಿ ವೀರಭದ್ರಯ್ಯ ಗೆದ್ದರೆ ಅವರ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತೇನೆ ಎಂದು ಹೇಳಿದ್ರಿ ಮೊದ್ಲು ಆ ಕೆಲಸ ಮಾಡಿ.

         ಮನುಷ್ಯನಿಗೆ ಅಹಂಕಾರ ಇರಬೇಕು ಆದರೆ ದುರಂಹಕಾರ ಇರಬಾರದು. ಮಾತನಾಡುವಾಗ ನಾಲಗೆ ಮೇಲೆ ಹಿಡಿತವಿಟ್ಟುಕೊಂಡು ಮಾತನಾಡಿ. ಕುಮಾರಸ್ವಾಮಿ ಅವರ ಕುಟುಂಬಕ್ಕೆ ದೈವಭಕ್ತಿ ಇದೆ. ಹಾಗಾಗಿ ಅವರು ದೇವಸ್ಥಾನಗಳಿಗೆ ತೆರಳಿ ಪೂಜೆ ಮಾಡಿಸುವುದು ಸಾಮಾನ್ಯ. ಆದರೆ ಅವರು ಜನರ ದುಡ್ಡನ್ನು ಬಳಸಿ ದೇವಸ್ಥಾನದಲ್ಲಿ ಪೂಜೆ ಮಾಡಿಲ್ಲ. ನೀವು ಏನಿದ್ದರೂ ನೇರವಾಗಿ ಬಂದು ಯುದ್ಧ ಮಾಡಿ. ಹಿಂದೆ ನಿಂತು ಮಾಡುವುದಲ್ಲ. ಈಗ ಏನಾದರೂ ಚುನಾವಣೆ ನಿಗದಿ ಮಾಡಿದರೆ ನೀವು ಎಲ್ಲಿ ಸ್ಪರ್ಧೆ ಮಾಡುತ್ತೀರೋ ಅಲ್ಲಿ ನಿಮ್ಮ ವಿರುದ್ಧ ಗೆದ್ದು ತೋರಿಸ್ಥೀವಿ ಎಂದು ವಾಗ್ದಾಳಿ ನಡೆಸಿದರು.


ಪರಮೇಶ್ವರ್ ಪರ ಗೌರಿಶಂಕರ್ ಬ್ಯಾಟಿಂಗ್

ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಸೋಲು ಕಾಣುತ್ತಿದ್ದಂತೆ ಶುಕ್ರವಾರ ರಾತ್ರಿ ಕೆಲವರು ಪರಮೇಶ್ವರ್ ಹಠವೋ, ಕಾಂಗ್ರೆಸ್ ಬಚಾವೋ ಇಂತಿ ನೊಂದ ಕಾರ್ಯಕರ್ತರು ಎಂದು ಪೋಸ್ಟರ್‍ಗಳನ್ನು ಹಾಕಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಗೌರಿಶಂಕರ್, ಪರಮೇಶ್ವರ್ ಅವರು ನಿಷ್ಠಾವಂತ ರಾಜಕಾರಣಿ. ಅವರು ತಮ್ಮ ಕೈಲಾದಷ್ಟು ಕಾರ್ಯ ಮಾಡಿದ್ದಾರೆ. ಅಲ್ಲದೆ ಚುನಾವಣೆಗೆ ಎಷ್ಟು ಶ್ರಮ ಹಾಕಬೇಕೋ ಅಷ್ಟೂ ಶ್ರಮ ಹಾಕಿದ್ದಾರೆ. ಅವರು ಜೆಂಟಿಲ್‍ಮ್ಯಾನ್. ಅವರಿಗೆ ಬೆಂಬಲವಾಗಿ ನಾನಿದ್ದೇನೆ ಎಂದರು.


ಐಎಎಸ್ ಮಾಡಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒಯವರು, ಸೇರಿದಂತೆ ಇನ್ನಿತರ ಅಧಿಕಾರಿಗಳು ಕೇವಲ ಎಸಿ ರೂಂಗಳಲ್ಲಿ ಕೆಲಸ ಮಾಡುವುದಲ್ಲ. ಪ್ರತಿ ತಿಂಗಳು ರೈತರೊಂದಿಗೆ ಸಂಪರ್ಕ ಮಾಡಬೇಕು. ಸಾರ್ವಜನಿಕರಿಂದಿಗೆ ಚರ್ಚೆ ಮಾಡಬೇಕು. ಸಮಸ್ಯೆಗಳ ಬಗ್ಗೆ ಅರಿತು ಸಮಸ್ಯೆ ಪರಿಹಾರ ಮಾಡಬೇಕು. ಇಲ್ಲವಾದಲ್ಲಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಲು ಸಿದ್ದರಿದ್ದೇವೆ.

ಗೌರಿಶಂಕರ್, ಗ್ರಾಮಾಂತರ ಶಾಸಕ


ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link