ದೇವೇಗೌಡರ ನಿರ್ಧಾರ ಇಂದು ಬಹಿರಂಗ

ತುಮಕೂರು:

       ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ತೀರ್ಮಾನವನ್ನು ಬಹುತೇಕ ಇಂದು ಸಂಜೆಯೊಳಗೆ ದೇವೇಗೌಡರು ಬಹಿರಂಗಪಡಿಸುವ ಸಾಧ್ಯತೆಗಳಿವೆ.ರಾಜ್ಯದಲ್ಲಿ 8 ಕ್ಷೇತ್ರಗಳನ್ನು ಗಿಟ್ಟಿಸಿಕೊಂಡಿರುವ ಜೆಡಿಎಸ್ ಎಲ್ಲಾ ಕಡೆಗಳಲ್ಲಿಯೂ ಸ್ಪರ್ಧಿಸಿ ಸೀಟು ಹೆಚ್ಚಳ ಮಾಡಿಕೊಳ್ಳುವ ತವಕದಲ್ಲಿದೆ. ಹೀಗಾಗಿಯೇ ತುಮಕೂರು ಕ್ಷೇತ್ರವನ್ನು ಮರಳಿ ಕಾಂಗ್ರೆಸ್‍ಗೆ ಒಪ್ಪಿಸಲು ಸುತಾರಾಂ ಇಷ್ಟವಿಲ್ಲ. ದೇವೇಗೌಡರಾದಿಯಾಗಿ ಜೆಡಿಎಸ್ ವರಿಷ್ಠರ ಮುಂದೆ ಮಾಡಿದ ಮನವಿಗಳೆಲ್ಲವೂ ವಿಫಲವಾಗಿವೆ. ಮೊಮ್ಮಕ್ಕಳಿಗೆ ಕ್ಷೇತ್ರಗಳನ್ನು ಹಂಚಿದ ನಂತರ ಮುಂದೇನು ಎಂಬ ಪ್ರಶ್ನೆಗೆ ಈಗ ಉಳಿದಿರುವ ಮಾರ್ಗ ತುಮಕೂರು ಹಾಗೂ ಬೆಂಗಳೂರು ಉತ್ತರ.

       ಆರಂಭದಲ್ಲಿ ಬೆಂಗಳೂರು ಉತ್ತರದ ಕಡೆಗೆ ದೇವೇಗೌಡರು ಮನಸ್ಸು ಮಾಡಿದ್ದಾರಾದರೂ ನಂತರದ ದಿನಗಳಲ್ಲಿ ತುಮಕೂರು ಕ್ಷೇತ್ರದತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಆದರೂ ತುಮಕೂರು ಕ್ಷೇತ್ರ ಸದ್ಯದ ಪರಿಸ್ಥಿತಿಯಲ್ಲಿ ಹಾದಿ ಸುಗಮವಲ್ಲ ಎಂಬುದು ಅವರಿಗೆ ಗೊತ್ತಿದೆ. ಇದೇ ಕಾರಣಕ್ಕಾಗಿ ದಿನಗಳನ್ನು ತಳ್ಳುತ್ತಾ ಬಂದರು. ಪರಿಸ್ಥಿತಿಯನ್ನು ಅವಲೋಕಿಸಿದ ನಂತರವಷ್ಟೇ ತೀರ್ಮಾನ ಪ್ರಕಟಿಸುವ ಹಂತಕ್ಕೆ ಗೌಡರು ಬಂದರು.

       ಬೆಂಗಳೂರು ಉತ್ತರಕ್ಕಿಂತ ತುಮಕೂರು ಕ್ಷೇತ್ರವೇ ಸರಿಯಾದ ಮಾರ್ಗ ಎಂಬುದನ್ನು ಅಳೆದೂ ತೂಗಿ ನೋಡಿರುವ ಗೌಡರು ಈ ವಿಷಯದ ಬಗ್ಗೆ ಸುದೀರ್ಘ ಚರ್ಚೆಯನ್ನೂ ನಡೆಸಿದ್ದಾರೆ. ತುಮಕೂರು ಕ್ಷೇತ್ರದಲ್ಲಿ ಸ್ಪರ್ಧಿಸಿದರೆ ಎದುರಾಗುವ ಅಡ್ಡಿ ಆತಂಕಗಳನ್ನು ನಿವಾರಿಸುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

       ತುಮಕೂರು ಕ್ಷೇತ್ರದಿಂದ ಎಸ್.ಪಿ.ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಲಿ ಎಂಬ ಪ್ರತಿಭಟನೆಗಳು ನಡೆದವು. ಇವೆಲ್ಲವೂ ತಣ್ಣಗಾಗಲಿ ನೋಡೋಣ ಎಂದುಕೊಂಡಿದ್ದ ದೇವೇಗೌಡರು, ಇದೀಗ ಅಖಾಡ ಸಜ್ಜುಗೊಳಿಸುತ್ತಿದ್ದಾರೆ. ಬುಧವಾರದಂದು ಜಿಲ್ಲೆಯ ಕೆಲವು ಜೆಡಿಎಸ್ ನಾಯಕರು ದೇವೇಗೌಡರ ಮನೆಗೆ ತೆರಳಿ ಚರ್ಚಿಸಿರುವುದು, ಸಚಿವ ಜಮೀರ್ ಅಹಮದ್ ದೇವೇಗೌಡರನ್ನು ಭೇಟಿ ಮಾಡಿ ಬೆಂಗಳೂರು ಉತ್ತರದಿಂದ ಸ್ಪರ್ಧಿಸಿದರೆ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ನಮ್ಮದು ಎಂದು ಹೇಳಿಕೆ ನೀಡಿರುವುದು ಇವೆಲ್ಲವೂ ಈಗ ರಾಜಕೀಯ ವಲಯದಲ್ಲಿ ಬಿರುಸಿನ ಚರ್ಚೆಗೆ ಒಳಗಾಗುತ್ತಿವೆ.

       ಮತ್ತೊಂದು ಕಡೆ ತುಮಕೂರು ಜಿಲ್ಲೆಯ ಜೆಡಿಎಸ್ ವಲಯದಲ್ಲಿ ಪಕ್ಷದ ಕೆಲವು ಮುಖಂಡರು, ಕಾರ್ಯಕರ್ತರು ತಮ್ಮ ಫೇಸ್‍ಬುಕ್‍ಗಳಲ್ಲಿ ತುಮಕೂರಿಗೆ ಆಗಮಿಸುತ್ತಿರುವ ದೇವೇಗೌಡರಿಗೆ ಹಾರ್ದಿಕ ಸುಸ್ವಾಗತ ಎಂಬ ಪೋಸ್ಟ್‍ಗಳನ್ನು ಹರಿಬಿಟ್ಟಿದ್ದಾರೆ. ಇವೆಲ್ಲವೂ ದೇವೇಗೌಡರು ತುಮಕೂರು ಕ್ಷೇತ್ರಕ್ಕೆ ಪಾದಾರ್ಪಣೆ ಮಾಡುತ್ತಿರುವ ಮುನ್ಸೂಚನೆಗಳಂತೆ ಕಾಣುತ್ತಿವೆ.

      ಜೆಡಿಎಸ್ ವಕ್ತಾರ ರಮೇಶ್‍ಬಾಬು ತುಮಕೂರಿಗೆ ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಗುರುವಾರ ಸಂಜೆಯೊಳಗೆ ದೇವೇಗೌಡರು ತಮ್ಮ ನಿಲುವು ಪ್ರಕಟಿಸಲಿದ್ದಾರೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಇದರ ಜೊತೆಯಲ್ಲೇ ಇಂದು ಇಲ್ಲಿನ ಜೆಡಿಎಸ್ ಮುಖಂಡರೊಂದಿಗೆ ಚರ್ಚೆ ನಡೆಸಲಿರುವ ದೇವೇಗೌಡರು ಅಂತಿಮವಾಗಿ ತಮ್ಮ ನಿರ್ಧಾರ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ಸುಸೂತ್ರವಾಗಿ ನಡೆದರೆ ಮಾರ್ಚ್ 25ರ ಸೋಮವಾರ ದೇವೇಗೌಡರು ತುಮಕೂರು ಕ್ಷೇತ್ರದಿಂದ ನಾಮಪತ್ರ ಸಲ್ಲಿಸುವ ಸಾಧ್ಯತೆಗಳು ಇವೆ.

       ತುಮಕೂರು ಕ್ಷೇತ್ರ ಜೆಡಿಎಸ್ ಪಾಲಾಗುತ್ತಿದ್ದಂತೆ ಅಸಮಾಧಾನಗೊಂಡ ಡಾ.ಜಿ.ಪರಮೇಶ್ವರ್ ಅವರನ್ನು ಸಮಾಧಾನಪಡಿಸಿದ ನಂತರವೇ ಗೌಡರು ಅಖಾಡಕ್ಕಿಳಿಯುವುದು ನಿಶ್ಚಿತ. ಮಂಗಳವಾರ ಬೆಂಗಳೂರಿನಲ್ಲಿ ನಡೆದ ದೋಸ್ತಿಗಳ ಸಭೆಯಲ್ಲಿ ಪರಮೇಶ್ವರ್ ಗೈರು ಕಾಣುತ್ತಿತ್ತು. ಪರಮೇಶ್ವರ್ ಸೇರಿದಂತೆ ಕಾಂಗ್ರೆಸ್ ಮುಖಂಡರನ್ನು ಮನವೊಲಿಸಿ ತಮ್ಮ ಹಾದಿ ಸುಗಮಗೊಳಿಸಿಕೊಳ್ಳುವುದು ದೇವೇಗೌಡರ ಮುಂದಿರುವ ಮೊದಲ ಆದ್ಯತೆ. ಇವೆಲ್ಲವನ್ನೂ ಸರಿಪಡಿಸಿಕೊಂಡೇ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಗೌಡರು ವೇದಿಕೆ ಸಿದ್ಧಪಡಿಸಿ ಕೊಳ್ಳುತ್ತಿದ್ದಾರೆ .

       ಈವರೆಗಿನ ಬೆಳವಣಿಗೆಗಳನ್ನು ಗಮನಿಸಿದರೆ ತುಮಕೂರು ಕ್ಷೇತ್ರಕ್ಕೆ ದೇವೇಗೌಡರು ಬರುವುದು ನಿಶ್ಚಿತ ಎಂದೇ ಹೇಳಲಾಗುತ್ತಿದೆ. ಇವೆಲ್ಲವೂ ಇಂದು ಸಂಜೆಯೊಳಗೆ ಬಹಿರಂಗವಾಗಲಿದೆ. ದೇವೇಗೌಡರು ತಮ್ಮ ನಿರ್ಧಾರ ಪ್ರಕಟಿಸುವತ್ತ ಎಲ್ಲರ ಗಮನ ಕೇಂದ್ರೀಕೃತವಾಗಿದೆ. ಆನಂತರವಷ್ಟೇ ತುಮಕೂರು ಚಿತ್ರಣದ ರಾಜಕೀಯ ವಿಶೇಷ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap