ನಾರಾಯಣ ಗೌಡ ವಿರುದ್ಧ ಸಿಎಂಗೆ ಗೌಡರ ಪತ್ರ..!

ಬೆಂಗಳೂರು

    ತೋಟಗಾರಿಕಾ ಇಲಾಖೆ ನೋಡಿಕೊಳ್ಳುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ರಾಜಕೀಯ ದ್ವೇಷ, ವೈರತ್ವ, ಹಗೆತನ ಮತ್ತು ದುರುದ್ದೇಶದಿಂದ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ಕಿರುಕುಳ , ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಹೆಚ್.ಡಿ.ದೇವೇಗೌಡ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.

    ಕಿರುಕುಳ ನಿಲ್ಲಿಸದೇ ಹೋದಲ್ಲಿ ಇದೇ 29 ರಂದು ಮುಖ್ಯಮಂತ್ರಿ ನಿವಾಸದ ಮುಂದೆ ಧರಣಿ ನಡೆಸುವುದಾಗಿ ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.

   ನಾರಾಯಣಗೌಡ ಅವರು ಅಧಿಕಾರಿಗಳಿಗೆ ಚಿತಾವಣೆ ಮಾಡಿ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದವರನ್ನು ತುಳಿಯುವ ಹುನ್ನಾರದಲ್ಲಿ ತೊಡಗಿಕೊಂಡಿದ್ದಾರೆ. ಅಧಿಕಾರಿಗಳು, ಪೆÇಲೀಸರು ಜಿಲ್ಲಾ ಸಚಿವರ ಕೈಗೊಂಬೆಯಾಗಿ ಮತ್ತು ಅವರೊಂದಿಗೆ ಶಾಮೀಲಾಗಿದ್ದಾರೆ. ಕಾನೂನುಬಾಹಿರವಾಗಿ ನೀಡುವ ಸೂಚನೆ ಮತ್ತು ಆದೇಶದಂತೆ ವರ್ತಿಸಿ ಜಿಲ್ಲೆಯ ಜನಸಾಮಾನ್ಯರಿಗೆ ಕಿರುಕುಳ ನೀಡುತ್ತಿದ್ದು, ಇದನ್ನು ತಡೆಹಿಡಿಯುವಂತೆ ಮನವಿ ಮಾಡಿದ್ದಾರೆ.

   ರಾಜ್ಯದಲ್ಲಿ ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆ ಮತ್ತು ರಾಜ್ಯ ವಿಧಾನ ಸಭೆಗೆ ಅನರ್ಹಗೊಂಡ ಶಾಸಕರ ವಿಧಾನ ಸಭಾ ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಗಳ ನಂತರ, ರಾಜ್ಯದ ರಾಜಕೀಯ ವಿದ್ಯಮಾನಗಳಲ್ಲಿ ಏರು – ಪೇರು ಉಂಟಾಗಿದೆ. ಚುನಾವಣೆಗಳ ಫಲಿತಾಂಶದ ನಂತರ, ಮಂಡ್ಯ ಜಿಲ್ಲೆಯಲ್ಲಿ ರಾಜಕೀಯ ವಿದ್ಯಮಾನಗಳು ದ್ವೇಷ, ವೈರತ್ವ ಹಾಗೂ ಹಗೆತನಕ್ಕೆ ತಿರುಗಿವೆ. ಇಂತಹ ಪರಿಸ್ಥಿತಿಗೆ ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಕೆ.ಸಿ, ನಾರಾಯಣಗೌಡ ಕಾರಣ ಎಂದು ದೂರಿದ್ದಾರೆ.

    ನಾರಾಯಣಗೌಡ ಅವರನ್ನು ಉಪ ಚುನಾವಣೆಯಲ್ಲಿ ಬೆಂಬಲಿಸಲಿಲ್ಲ ಎನ್ನುವ ಕಾರಣದಿಂದ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡಲಾಗುತ್ತಿದೆ. ಮಂಡ್ಯದಲ್ಲಿ ವೈಷಮ್ಯದ ರಾಜಕಾರಣ ನಡೆಯುತ್ತಿದೆ . ತಮ್ಮ ಸುದೀರ್ಘ 60 ವರ್ಷಗಳ ರಾಜಕಾರಣದಲ್ಲಿ ಎಂದು ಕಂಡಿಲ್ಲದ ಕೆಟ್ಟ ವಾತಾವರಣ ಕೆ,ಆರ್. ಪೇಟೆಯಲ್ಲಿದೆ. ಜೆಡಿಎಸ್ ನ ಒಬ್ಬ ಸಾಮಾನ್ಯ ಕಾರ್ಯಕರ್ತರ ಹೆಚ್.ಟಿ.ಮಂಜು ಎಂಬುವರ ಮೇಲೆ ಚುನಾವಣೆಯ ಸೇಡು ತೀರಿಸಿಕೊಳ್ಳುತ್ತಿದ್ದಾರೆ .

    ಮಂಜು ಸ್ಟೋನ್ ಕ್ರಷರ್ ಮತ್ತು ಕ್ವಾರಿ ಮೈನಿಂಗ್ ಮಾಡಲು ಸರ್ಕಾರದ ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಅನುಮತಿ ಪಡೆದುಕೊಂಡಿದ್ದರೂ ಸಹ ಸ್ಥಳೀಯ ರಾಜಕಾರಣದಿಂದ ಅವರಿಗೆ ವ್ಯವಹಾರ ಮಾಡಲು ಬಿಡುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಸಚಿವರಿಗೆ ಪ್ರತ್ಯೇಕ ಪತ್ರಗಳನ್ನು ಸಹ ಬರೆದಿದ್ದೇನೆ. ಕಾನೂನು ಬದ್ಧವಾಗಿ ಹೆಚ್.ಟಿ.ಮಂಜುಗೆ ವ್ಯವಹಾರ ನಡೆಸಲು ಸಂಬಂಧ ಪಟ್ಟವರಿಗೆ ಸೂಚನೆ ನೀಡಬೇಕು. ಸರ್ಕಾರ ಈ ಬಗ್ಗೆ ಪಾರದರ್ಶಕತೆಯಿಂದ ವರ್ತಿಸದೇ ಹೋದಲ್ಲಿ ಇದೇ ತಿಂಗಳ 29 ರಂದು ಮುಖ್ಯ ಮಂತ್ರಿಗಳ ನಿವಾಸದ ಮುಂದೆ ಧರಣಿ ಸತ್ಯಾಗ್ರಹ ಕೂರುವುದಾಗಿ ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap