ತುಮಕೂರು
ಮಾಜಿ ಪ್ರಧಾನಿ ದೇವೆಗೌಡರು ತುಮಕೂರಿಗೆ ಕೊಟ್ಟ ಕೊಡುಗೆ ಏನು ಎಂದು ಕೇಳುವವರು, ಅವರು ರಾಜ್ಯಕ್ಕೆ ನೀಡಿದ ಕೊಡುಗೆ ನೆನಪಿಸಿಕೊಳ್ಳಲಿ. ದೇಶದ ಪ್ರಭಾವಿ ನಾಯಕರಾದ ದೇವೆಗೌಡರು ಜಯ ಗಳಿಸಿದರೆ ತುಮಕೂರಿನ ಸಮಗ್ರ ಅಭಿವೃದ್ಧಿಯಾಗಲಿದೆ ಎಂದು ಮಾಜಿ ಸಚಿವೆ ರಾಣಿ ಸತೀಶ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದ ಹಲವು ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಲು ದೇವೆಗೌಡರು ಕಾರಣಕರ್ತರಾಗಿದ್ದಾರೆ. ಅವರಿಂದಾಗಿ ಇನ್ನೂ ಹಲವು ಅಭಿವೃದ್ಧಿ ಕೆಲಸಗಳು ನಾಡಿಗೆ ಆಗಬೇಕಾಗಿವೆ ಎಂದರು.
ತುಮಕೂರು ಕ್ಷೇತ್ರದ ಮತದಾರರು ದೇವೆಗೌಡರನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿದರೆ, ಒಬ್ಬ ಅನುಭವಿ, ಜನಪರ ಕಾಳಜಿಯ ಸಂಸತ್‍ಪಟುವನ್ನು ಕೊಟ್ಟಂತಾಗುತ್ತದೆ. ಅವರಿಂದ ತುಮಕೂರು ಜಿಲ್ಲೆಗೆ ದೊಡ್ಡ ಯೋಜನೆಗಳು ಬರುತ್ತವೆ, ಹಾಸನ ರೀತಿ ತುಮಕೂರು ಕೂಡ ಅಭಿವೃದ್ಧಿಯಾಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ ಎಂದು ಹೇಳಿದರು.ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಮಹಿಳಾ ಮುಖಂಡರೊಂದಿಗೆ ರಾಣಿ ಸತೀಶ್ ದೇವೆಗೌಡರ ಪರ ಪ್ರಚಾರ ನಡೆಸಿದರು.ದೇವೆಗೌಡರ ಸೊಸೆ ಡಾ. ಸೌಮ್ಯ ರಮೇಶ್, ಗೀತಾ ರುದ್ರೇಶ್, ಲಕ್ಷ್ಮಮ್ಮ ಮೊದಲಾದವರು ಹಾಜರಿದ್ದರು.