ದೇವೇಗೌಡರ ಕುಟುಂಬವನ್ನು ಅತಿಆಸೆ ಗತಿಗೆಡಿಸುತ್ತದೆ: ಸಿ ಟಿ ರವಿ

ತುಮಕೂರು

      ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಪ್ರಣಾಳಿಕೆಯಲ್ಲಿ ದೇಶದ ಸುಸ್ಥಿರತೆ, ಸಮಗ್ರತೆಗೆ ಧಕ್ಕೆ ತರುವ ಅಪಾಯಕಾರಿ ಅಂಶಗಳು ಸೇರಿವೆ, ದೇಶದ್ರೋಹ ಕಾನೂನು ಐಪಿಎಲ್ 124 ರದ್ದುಪಡಿಸುವ ಪ್ರಸ್ತಾವನೆಯನ್ನು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಲಾಗಿದೆ. ದೇಶವನ್ನು ತುಂಡರಿಸುವ ರಾಷ್ಟ್ರ ವಿರೋಧಿ ಶಕ್ತಿಗಳಿಗೆ ಕಾಂಗ್ರೆಸ್ ಪಕ್ಷ ಪ್ರೋತ್ಸಾಹದಾಯಕವಾಗಿ ನಿಲ್ಲುವುದು ಪ್ರಣಾಳಿಕೆಯಲ್ಲಿ ಸ್ಪಷ್ಟ ಆಗಿದೆ ಎಂದು ಮಾಜಿ ಸಚಿವ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಆಪಾದಿಸಿದರು.

      ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿ ಆಸೆ ಗತಿಗೇಡು ಎಂಬ ಗಾದೆ ದೇವೇಗೌಡರ ಕುಟುಂಬಕ್ಕೆ ಈ ಚುನಾವಣೆ ಸತ್ಯ ಮಾಡುತ್ತದೆ. ಜನನಾಯಕರಾಗಿ ಬೆಳೆದು ಗಳಿಸಿದ್ದನ್ನು ದೇವೇಗೌಡರು ಮಕ್ಕಳಿಗೆ ಹಸ್ತಾಂತರಿಸಿ, ನಂತರ ಸೊಸೆಯರಿಗೆ ವಿಸ್ತರಿಸಿ, ಈಗ ಮೊಮ್ಮಕ್ಕಳಿಗೆ ಕೊಡಲು ಹೊರಟಿದ್ದಾರೆ. ಒಂದೊಂದೇ ಜಿಲ್ಲೆಯನ್ನು ಕುಟುಂಬ ರಾಜಕಾರಣಕ್ಕೆ ಬಳಸಿಕೊಳ್ಳಬೇಕೆಂಬ ಅವರ ದುರಾಸೆಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

       ಮುಖ್ಯ ಮಂತ್ರಿ ಕುಮಾರಸ್ವಾಮಿಯವರೇ, ತಮ್ಮ 10 ತಿಂಗಳ ಸರ್ಕಾರದ 10 ಸಾಧನೆಗಳನ್ನು ಹೇಳಬಲ್ಲಿರಾ? ಎಂದು ಪ್ರಶ್ನಿಸಿದ ಸಿ ಟಿ ರವಿ, ಹೇಳುವಂತಹ ಸಾಧನೆ ಇದ್ದಿದ್ದರೆ, ಚುನಾವಣಾ ಪ್ರಚಾರದಲ್ಲಿ ಹತಾಶರಾಗಿ ತೀರಾ ಕೆಳಮಟ್ಟಕ್ಕೆ ಹೋಗಿ ಎದುರಾಳಿಗಳನ್ನು ಅವಹೇಳನ ಮಾಡಿ ಟೀಕಿಸುವ ದುಸ್ಥಿತಿ ಬರುತ್ತಿರಲಿಲ್ಲ ಎಂದರು.

      ಲೋಕೋಪಯೋಗಿ ಇಲಾಖೆಯಲ್ಲಿ ನಾಲ್ಕು ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇ ಅದರ ಬಿಲ್ಲಿನ 1344 ಕೋಟಿ ರೂ ಹಣ ಸಂದಾಯ ಮಾಡಲಾಗಿದೆ. ಲೋÀಕೋಪಯೋಗಿ, ಇಂಧನ ಇಲಾಖೆಯಲ್ಲಿ ಚುನಾವಣಾ ನಿಧಿಗಾಗಿ ಕಳ್ಳ ಬಿಲ್ಲು, ಸುಳ್ಳು ಲೆಕ್ಕ ಸೃಷ್ಟಿಸಲಾಗಿದೆ, ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು. ಹಾಸನದ ಅಧಿಕಾರಿಗಳು, ಗುತ್ತಿಗೆದಾರರ ಮೇಲೆ ಆದಾಯ ತೆರಿಗೆ ದಾಳಿ ನಡೆದಾಗ ಕುಮಾರಸ್ವಾಮಿ ಜೊತೆ ಕಾಂಗ್ರೆಸ್, ಜೆಡಿಎಸ್ ನಾಯಕರು ಬೀದಿಗಿಳಿದರು. ಐಟಿ ದಾಳಿಯನ್ನು ಭಯೋತ್ಪಾದಕ ದಾಳಿ ಎನ್ನುವಂತೆ ಬಿಂಬಿಸಿಕೊಂಡರು ಎಂದು ಸಿ ಟಿ ರವಿ ವ್ಯಂಗ್ಯವಾಡಿದರು.

      ಕಾಂಗ್ರೆಸ್ ನಾಯಕ ಕಪಿಲ್ ಸಿಬಾಲ್ ಹೇಳಿರುವಂತೆ ದೇಶದ ಶೇಕಡ 70ರಷ್ಟು ಜನ ಬಡತನರೇಖೆಯಿಂದ ಕೆಳಗಿದ್ದಾರೆ. ನೆಹರೂ ಬಡತನ ನಿವಾರಣೆ ಮಾಡುವುದಾಗಿ ಹೇಳಿದ್ದರು, ಇಂದಿರಾಗಾಂದಿ ಗರೀಬೀ ಹಠಾವೋ ಎಂದಿದ್ದರು. ರಾಜೀವ್ ಗಾಂಧಿ, ಸೊನಿಯಾಗಾಂಧಿ ಬಡತನ ನಿರ್ಮೂಲನೆ ಮಾಡುವುದಾಗಿ ಹೇಳಿದ್ದರು.

     ಯಾಕೆ ಬಡತನ ನಿವಾರಣೆಯಾಗಲಿಲ್ಲ ಎಂದು ಕಾಂಗ್ರೆಸ್‍ನವರನ್ನು ಪ್ರಶ್ನಿಸಿದರು.ಹಿಂದೆ ರಾಜೀವ್ ಗಾಂಧಿ ಪ್ರತಿನಿಧಿಸುತ್ತಿದ್ದ, ಈಗ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ಅಮೇಥಿಯಲ್ಲೇ ಹೆಚ್ಚು ಬಡವರಿದ್ದಾರೆ. ಕಾಂಗ್ರೆಸ್ ಪಕ್ಷದವರು ಬಡವರನ್ನು ಬಡವರಾಗೇ ಉಳಿಸಿ ಓಟ್ ಬ್ಯಾಂಕ್ ಮಾಡಿಕೊಳ್ಳುತ್ತಿದ್ದಾರೆ. ಮುಸ್ಲೀಮರು ಕಾಂಗ್ರೆಸ್‍ನ ರಾಜಕೀಯ ಗುಲಾಮಗಿರಿಯಿಂದ ಹೊರಬಂದು ಮತ ಚಲಾಯಿಸಿ, ಮುಸ್ಲೀಮರು ಮುಖ್ಯವಾಹಿನಿಗೆ ಬರದಂತೆ ಕೇವಲ ಓಟ್ ಬ್ಯಾಂಕ್ ಮಾಡಿಕೊಂಡಿದೆ. ಆದರೆ, ಎಲ್ಲರನ್ನೂ ಎಲ್ಲಾ ಕಾಲದಲ್ಲೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

      ವಿವಿಧ ಪಕ್ಷಗಳೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿರುವ ಘಟಬಂಧನ್ ಮುರಿಯುತ್ತಿದೆ. ಕೇರಳದಲ್ಲಿ ಎಡ ಪಕ್ಷದ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಗಳನ್ನು ನಿಲ್ಲಿಸಿದೆ. ಎಸ್‍ಪಿ, ಬಿಎಸ್‍ಪಿ ಪಕ್ಷಗಳು ಕಾಂಗ್ರೆಸ್ ಜೊತೆ ಸಂಬಂಧವೇ ಇಲ್ಲ ಎಂದು ಹೇಳಿವೆ, ರಾಹುಲ್ ಬಚ್ಚಾ ಎಂದು ಮಮತಾ ಬ್ಯಾನಜಿ ಟಿಕಿಸಿದ್ದಾರೆ ಇನ್ನೆಲ್ಲಿ ಘಟಬಂಧನ್ ಎಂದರು.ಶಾಸಕ ಜಿ ಬಿ ಜ್ಯೋತಿಗಣೇಶ್, ಮುಖಂಡರಾದ ವೈ ಹೆಚ್ ಹುಚ್ಚಯ್ಯ, ಶಿವಪ್ರಸಾದ್, ರಾಮಾಂಜನಯ್ಯ, ರವೀಶಯ್ಯ, ಚಂದ್ರಾನಾಯ್ಕ, ಪೆಟ್ಟಿರಾಜು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link