ಹುಳಿಯಾರು
ತುಮಕೂರು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುವ ಸದುದ್ದೇಶದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕಣದಲ್ಲಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಉಪ್ಪಾರ ಸಮುದಾಯ ಬೆಂಬಲಿಸಲು ತೀರ್ಮಾನಿಸಿರುವುದಾಗಿ ರಾಜ್ಯ ಉಪ್ಪಾರ ಸಮಾಜದ ಉಪಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ಕಲ್ಲೇಶ್ ಹೇಳಿಕೆ ನೀಡಿದ್ದಾರೆ.
ಹುಳಿಯಾರಿನ ಉಪ್ಪಾರ ಸಮುದಾಯ ಭವನದಲ್ಲಿ ತಾಲ್ಲೂಕು ಉಪ್ಪಾರ ಸಮಾಜದ ವತಿಯಿಂದ ಲೋಕಸಭಾ ಚುನಾವಣೆಯ ಪ್ರಯುಕ್ತ ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಹುಳಿಯಾರಿನಲ್ಲಿ ನಿರ್ಮಾಣ ಹಂತದಲ್ಲಿದ್ದ ಉಪ್ಪಾರ ಸಮುದಾಯ ಭವನ ಕಟ್ಟಡಕ್ಕೆ ಸಂಸದ ಮುದ್ದಹನುಮೇಗೌಡರು 8 ಲಕ್ಷ ರೂ. ನೆರವು ನೀಡಿದ್ದರು. ಅಲ್ಲದೆ ಉಪ್ಪಾರ ಸಮಾಜ ಸೇರಿದಂತೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಅವರು ಶ್ರಮಿಸುತ್ತಿದ್ದರು. ಹೀಗಾಗಿ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿರುವ ಜೆಡಿಎಸ್‍ನ ದೇವೇಗೌಡರಿಗೆ ಈ ಚುನಾವಣೆಯಲ್ಲಿ ಬೆಂಬಲ ಸೂಚಿಸುವುದಾಗಿ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ಹನುಮಂತಪ್ಪ ಮಾತನಾಡಿ ಉಪ್ಪಾರ ಸಮುದಾಯವನ್ನು ರಾಜಕೀಯವಾಗಿ ಬೆಳಸಲು ದೃಷ್ಠಿಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪುಟ್ಟರಂಗಶೆಟ್ಟಿಯನ್ನು ಸಚಿವರನ್ನಾಗಿ ಮಾಡಿದರಲ್ಲದೆ, ಭಗೀರಥ ಜಯಂತಿಯನ್ನು ಘೋಷಿಸಿದ್ದು ಮರೆಯುಂತಹುದಲ್ಲ, ಆದ್ದರಿಂದ ನಾವುಗಳು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಕಾಂಗ್ರೆಸ್ ಮೈತ್ರಿಯೊಂದಿಗೆ ಜೆ.ಡಿ.ಎಸ್ ಅಭ್ಯರ್ಥಿಯನ್ನು ಬೆಂಬಲಿಸಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಉಪ್ಪಾರ ಸಮುದಾಯದ ಕಾರ್ಯದರ್ಶಿ ಜಗದೀಶ್, ತಿಮಲಾಪುರ ಗ್ರಾ.ಪಂ.ಉಪಾಧ್ಯಕ್ಷ ಮೋಹನ್, ದೊಡ್ಡಬಿದರೆ ಗ್ರಾ.ಪಂ.ಉಪಾಧ್ಯಕ್ಷ ಮೋಹನ್, ಸದಸ್ಯ ಕುಮಾರ್, ದಯಾನಂದ, ಹೊಸಹಳ್ಳಿ, ಸುರೇಶ್, ಸರೋಜಮ್ಮ ಉಮೆಶ್, ರಾಮದಾಸ್, ಸ್ವಾಮಿ, ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
