ದೇವೇಗೌಡರಿಗೆ ಓಟು ಕೇಳುವ ನೈತಿಕತೆ ಇಲ್ಲ : ಜ್ಯೋತಿಗಣೇಶ್

ತುಮಕೂರು

        “ತುಮಕೂರು ಜಿಲ್ಲೆಗೆ ನೀರು ಪೂರೈಸುವ ಹೇಮಾವತಿ ಯೋಜನೆ ಸಿದ್ಧಗೊಂಡ ದಿನಗಳಿಂದಲೂ ಅದನ್ನು ವಿರೋಧಿಸುತ್ತ ಬಂದಿರುವ ಮಾಜಿ ಪ್ರಧಾನಿ ಹಾಗೂ ಹಾಲಿ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಚ್.ಡಿ. 

          ದೇವೇಗೌಡರಿಗೆ ತುಮಕೂರು ಕ್ಷೇತ್ರದ ಜನರ ಬಳಿ ಓಟು ಕೇಳುವ ನೈತಿಕತೆ ಇಲ್ಲ” ಎಂದು ತುಮಕೂರು ನಗರ ಕ್ಷೇತ್ರದ ಶಾಸಕ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

         ಅವರು ಶನಿವಾರ ಬೆಳಗ್ಗೆ ತುಮಕೂರು ನಗರದ ಶಿರಾಗೇಟ್ ರಸ್ತೆಯಲ್ಲಿರುವ ಬಾವಿಕಟ್ಟೆ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವತಿಯಿಂದ ಏರ್ಪಟ್ಟಿದ್ದ ಬೋವಿ ಸಮುದಾಯದ ಸಭೆಯಲ್ಲಿ ಅತಿಥಿಗಳಾಗಿ ಮಾತನಾಡುತ್ತಿದ್ದರು.

        “ಹೇಮಾವತಿ ನೀರಿನ ವಿಷಯದಲ್ಲಿ ದೇವೇಗೌಡರು ಮೊದಲಿನಿಂದಲೂ ಮಲತಾಯಿ ಧೋರಣೆ ಮಾಡುತ್ತಲೇ ಬಂದಿದ್ದಾರೆ. ಇದೀಗ ಹಾಸನದಿಂದ ತುಮಕೂರಿಗೆ ವಲಸೆ ಬಂದಿದ್ದಾರೆ. ಇಂಥವರಿಗೆ ಜನರು ಏಕೆ ಓಟು ಹಾಕಬೇಕು?” ಎಂದು ಪ್ರಶ್ನಿಸಿದರು.

          “ಪ್ರಧಾನಿ ನರೇಂದ್ರ ಮೋದಿ ಕಳೆದ ಐದು ವರ್ಷಗಳಿಂದ ಈ ದೇಶಕ್ಕಾಗಿ ಶ್ರಮಿಸಿದ್ದಾರೆ. ದೇಶ ಹಾಗೂ ಜನರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಾರೆ. ಇಂತಹ ಬದ್ಧತೆಯುಳ್ಳ ನೇತಾರ ಮತ್ತೊಮ್ಮೆ ಪ್ರಧಾನಿ ಆಗಬೇಕು. ಆದ್ದರಿಂದ ಬಿಜೆಪಿಗೆ ಆಶೀರ್ವದಿಸಿ” ಎಂದು ಜ್ಯೋತಿಗಣೇಶ್ ಮನವಿ ಮಾಡಿದರು.

        ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಜ್ಯೋತಿ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿ, ಬಿಜೆಪಿಗೆ ಬೆಂಬಲ ಯಾಚಿಸಿದರು. ಸಭೆಯಲ್ಲಿ ಬೋವಿ ಸಮಾಜದ ಮುಖಂಡ ಮಾಕಳಿ ರವಿ, ರುಕ್ಮಿಣಿ ವೆಂಕಟೇಶ್, ಮಂಜುನಾಥ್, ಮೊದಲಾದವರಿದ್ದರು. ಬಿಜೆಪಿ ಮುಖಂಡ ಓಂಕಾರ್ ಸ್ವಾಗತಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap