ಹಿರಿಯೂರು:
ತಾಯಿಂದಿರರು ಮಕ್ಕಳಿಗೆ ಮಾನವೀಯ ಮೌಲ್ಯಗಳ ಗುಣಗಳನ್ನು ಬೆಳೆಸುವ ಮೂಲಕ ಭವಿಷ್ಯದ ಜೀವನ ರೂಪಿಸುವ ಮೂಲಕ ಉತ್ತಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಚಿತ್ರದುರ್ಗ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಆರ್.ದಿಂಡಲಕೊಪ್ಪ ಹೇಳಿದರು.
ನಗರದ ಗುರುಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಡಳಿತ, ಆರೋಗ್ಯ ಮತ್ತು ಕುಂಟುಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ತಾಲೂಕು ವಕೀಲರ ಸಂಘದ ವತಿಯಿಂದ ವಿಧವಾ ಕೋಶ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಒಬವ್ವ ಪಡೆ ಹಾಗೂ ಆತ್ಮಹತ್ಯೆ ತಡೆ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 75ಸಾವಿರ ವಿಧವೆಯರನ್ನು ಹೊಂದಿದ್ದು, ವಿಧವಾ ವೇತನ ಹಾಗೂ ಇತರ ಸೌಲಭ್ಯ ವಂಚಿತರನ್ನು ಗುರುತಿಸಿ ಅವರಿಗೆ ಸಿಗುವ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಉತ್ತಮ ಜೀವನ ನಡೆಸಲು ಅವಕಾಶ ಕಲ್ಪಿಸುವ ಉದ್ದೇಶವನ್ನು ವಿಧವಾ ಕೋಶ ಹೊಂದಿದ್ದು, ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸಾಮಾಜಿಕ ಪಿಡುಗಾಗಿರುವ ಬಾಲ್ಯ ವಿವಾಹ ಬಗ್ಗೆ ಸ್ವಾತಂತ್ರ್ಯ ಪೂರ್ವದಿಂದಲೂ ಹೋರಾಟ ನಡೆಸುತ್ತಾ ಬಂದಿದ್ದು, ಇದನ್ನು ನಿಯಂತ್ರಿಸಲು ಕೇಂದ್ರ ಸರಕಾರವು ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದು, ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾರ್ವಜನಿಕರು ಸಹಕರಿಸಬೇಕು. ಬಾಲ್ಯ ವಿವಾಹದಿಂದ ತಾಯಂದಿರ ಮರಣ, ಶಿಶು ಮರಣ, ಅಪೌಷ್ಠಿಕತೆ ಹಾಗೂ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ತೊಡಾಗುವ ಮೂಲಕ ಹೆಣ್ಣು ಮಕ್ಕಳಿಗೆ ಹೆಚ್ಚು ತೊಂದರೆಯಾಗುತ್ತಿದೆ ಎಂದರು.
ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಯಾವುದಾರೂ ಜಗಳ, ಘರ್ಷಣೆ ಮುಂತಾದ ಸಮಸ್ಯೆಗಳು ಇದ್ದರೆ ರಾಜಿ ಸಂಧಾನದ ಮೂಲಕ ಪ್ರಾಧಿಕಾರವು ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದರು.
ಹಿರಿಯ ಸಿವಿಲ್ ನ್ಯಾಯಧೀಶ ಸಂತೋಷ್.ಎಸ್.ಪಲ್ಲೇದ್ ಮಾತನಾಡಿ ಹಿಂದಿನ ಕಾಲದಲ್ಲಿ ವಿಧವೆಯರ ಸ್ಥಿತಿಗತಿಗಳು ಹೇಳತೀರದು. ಅದಕ್ಕೆ ಹೋಲಿಸಿದರೆ ಇಂದು ಸ್ವಲ್ಪ ಮಟ್ಟಿಗಾದರೂ ಬದಲಾವಣೆಯಾಗಿದೆ. ಇಂದು ಚಿಕ್ಕ ವಯಸ್ಸಿನಲ್ಲೇ ಹೆಣ್ಣು ಮಕ್ಕಳಿಗೆ ವಿವಾಹ ಮಾಡುವುದರಿಂದ ಕೌಂಟುಬಿಕ ವ್ಯಾಜ್ಯಗಳೇ ಹೆಚ್ಚಾಗುತ್ತಿವೆ. ಆದ್ದರಿಂದ ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಿ ಅವರು ಒಂದು ಉನ್ನತ ಸ್ಥಾನಕ್ಕೆ ತಲುಪಿದ ನಂತರ ವಿವಾಹ ಮಾಡಿದರೆ ಅವರು ಉತ್ತಮ ಜೀವನ ರೂಪಿಸಿಕೊಳ್ಳಬಹುದು.
ಮಹಿಳೆಯರು ಯಾರನ್ನು ಅವಲಂಬಿಸದೆ ಆತ್ಮ ರಕ್ಷಣೆಗೆ ಬೇಕಾದ ಎಲ್ಲಾ ರೀತಿಯ ಕ್ರಮಗಳನ್ನು ತಿಳಿದುಕೊಂಡಿರಬೇಕು. ಸಮಸ್ಯೆಗಳಿದ್ದರೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ತಾಲೂಕು ಪ್ರಾಧಿಕಾರದಿಂದಲೂ ಅತ್ಯಚಾರ, ಬಾಲ್ಯ ವಿವಾಹ ಮುಂತಾದ ಸಮಸ್ಯೆಗಳಿಗೆ ಒಳಾಗಾದವರಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದರು.
ಸಿವಿಲ್ ನ್ಯಾಯಾಧೀಶ ಬಿ.ಸಿ.ದೀಪು ಮಾತನಾಡಿ ಬಡತನ, ಅನಕ್ಷರತೆ, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ಇಂದು ಮಹಿಳೆಯರು ವೇಶ್ಯಾವಟಿಕೆಯಂತಹ ಕೃತ್ಯಗಳಿಗೆ ಬಲಿಯಾಗುತ್ತಿದ್ದು, ಪೋಷಕರು ಎಚ್ಚರ ವಹಿಸಿಬೇಕು. ಇಂದು ಕಾನೂನುಗಳು ಬಲಿಷ್ಠವಾಗಿದ್ದು, ತಪ್ಪಿಸ್ಥರಿಗೆ ಶಿಕ್ಷೆ ತಪ್ಪುವುದಿಲ್ಲ.
ಆದ್ದರಿಂದ ಮಹಿಳೆಯರು ಹೆಚ್ಚು ಶೋಷಣೆಗೆ ಒಳಾಗುತ್ತರುವುದನ್ನು ತಡೆಗಟ್ಟಬೇಕು ಎಂದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ಅಚ್ಚಪ್ಪ ದೊಡ್ಡಬಸವರಾಜ್, ವಕೀಲ ಸಂಘದ ಅಧ್ಯಕ್ಷ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಎನ್.ಬಿ.ಶೇಖ್, ಅಪರ ಸಿವಿಲ್ ನ್ಯಾಯಾಧೀಶ ಬಿ.ವೈ.ಮನುಪಟೇಲ್, ಉಪನಿರ್ದೇಶಕ ಕೆ.ಎಸ್.ರಾಜಾನಾಯಕ್, ಮನೋ ವೈದ್ಯ ಡಾ.ಮಂಜುನಾಥ್, ಬಿಇಒ ನಟರಾಜ್ ಹಾಗೂ ಒಬವ್ವ ಪಡೆಯ ಸದಸ್ಯರು, ವಕೀಲರು ಉಪಸ್ಥಿತರಿದ್ದರು.
