ಮಹಿಳೆಯರ ಬಗ್ಗೆ ಗೌರವ ಭಾವನೆ ಬೆಳೆಸಿಕೊಳ್ಳಬೇಕು

ಚಿತ್ರದುರ್ಗ:

      ಶೀಲ, ಮರ್ಯಾದೆ ಹೆಣ್ಣಿಗಷ್ಟೆ ಇರುವುದು ಎಂದು ತಿಳಿದುಕೊಂಡರೆ ಅದು ತಪ್ಪು. ಹೆಣ್ಣಿನಂತೆ ಗಂಡಿಗೂ ಶೀಲ ಮರ್ಯಾದೆ ಇದೆ ಎನ್ನುವುದನ್ನು ಪುರುಷ ಪ್ರಧಾನ ಸಮಾಜದಲ್ಲಿ ಎಲ್ಲರೂ ಅರ್ಥಮಾಡಿಕೊಂಡು ಒಂದು ಹೆಣ್ಣನ್ನು ಅಕ್ಕ-ತಂಗಿ, ತಾಯಿಯಂತೆ ಕಂಡು ಗೌರವಿಸಿದರೆ ಸಮಾಜದಲ್ಲಿ ಮಹಿಳೆಯ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರವನ್ನು ನಿಯಂತ್ರಿಸಬಹುದು ಎಂದು ಜನದನಿ ರಾಷ್ಟ್ರೀಯ ಸಂಸ್ಥೆ ಮುಖ್ಯಸ್ಥೆ ಜಯಲಕ್ಷ್ಮಿಪಾಟೀಲ್ ಹೇಳಿದರು.

         ರೋಟರಿ ಕ್ಲಬ್ ಚಿತ್ರದುರ್ಗ ಫೋರ್ಟ್, ಇನ್ನರ್‍ವೀಲ್ ಕ್ಲಬ್ ಚಿತ್ರದುರ್ಗ ಫೋರ್ಟ್, ರೋಟರಿ ಕ್ಲಬ್ ಚಿತ್ರದುರ್ಗ ವಿಂಡ್‍ಮಿಲ್ ಸಿಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ರಾಷ್ಟ್ರೀಯ ಜನದನಿ ಸಂಸ್ಥೆಯ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಮಕ್ಕಳ ಮೇಲೆ ನಡೆಯುವ ದೌರ್ಜನ್ಯ ಹಾಗೂ ಅತ್ಯಾಚಾರ ತಡೆ ಕುರಿತು ಏರ್ಪಡಿಸಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿ ಮಾತನಾಡಿದರು.

         ಗಂಡಸರು ನೀಡುವ ಎಲ್ಲಾ ಕಿರುಕುಳವನ್ನು ಸಹಿಸಿಕೊಂಡು ಸೈಲೆಂಟ್ ಆಗಿರುವುದೇ ನಿಮ್ಮ ಮೇಲೆ ದಿನದಿಂದ ದಿನೆ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳು ಹೆಚ್ಚಲು ಕಾರಣ ಎನ್ನುವುದನ್ನು ಸ್ಲೈಡ್‍ಗಳ ಮೂಲಕ ಕೆಲವು ಸಾಂದರ್ಭಿಕ ಘಟನಾವಳಿಗಳನ್ನು ಪ್ರದರ್ಶಿಸಿ ದೌರ್ಜನ್ಯ ಮತ್ತು ಅತ್ಯಾಚಾರಗಳ ವಿರುದ್ದ ಜಾಗೃತರಾಗಿರುವಂತೆ ಬಾಲಕಿಯರಲ್ಲಿ ಅರಿವು ಮೂಡಿಸಿದರು.

        ಸಮಾಜಕ್ಕೆ ಹೆಣ್ಣು-ಗಂಡು ಎರಡು ಮುಖ್ಯ. ಮಕ್ಕಳಿಗೆ ಅಪ್ಪ ಅಮ್ಮಂದಿರು, ಒಡಹುಟ್ಟಿದವರು ಇರಬೇಕು. ಹೆಣ್ಣು ಮಕ್ಕಳಿರುವುದೇ ಅನ್ನಿಸಿಕೊಳ್ಳುವುದಕ್ಕೆ ಏನು ಕಿರುಕುಳ ನೀಡಿದರೂ ಸಹಿಸಿಕೊಳ್ಳುವುದಕ್ಕೆ ಎನ್ನುವ ತಪ್ಪು ಕಲ್ಪನೆಯನ್ನು ಮನಸ್ಸಿನಿಂದ ತೆಗೆದು ಹಾಕಿ. ಗಂಡಿಗಿರುವಷ್ಟೆ ಹೆಣ್ಣಿಗೂ ಗೌರವವಿದೆ. ಹೆಣ್ಣನ್ನು ಚುಡಾಯಿಸಿ ಅವಮಾನ ಮಾಡಿ ನಿಮ್ಮ ಗೌರವವನ್ನು ನೀವೇ ಹಾಳುಮಾಡಿಕೊಳ್ಳಬೇಡಿ. ನಿಮ್ಮಿಂದ ಮತ್ತೊಬ್ಬರಿಗೆ ನೋವಾಗುವಂತೆ, ಬೇಜಾರಾಗುವಂತೆ ನಡೆದುಕೊಳ್ಳದಿದ್ದರೆ ಅದೇ ನಿಜವಾದ ಸಂಸ್ಕಾರ ಸಂಸ್ಕøತಿ ಎಂದು ಬಾಲಕರಿಗೆ ತಿಳಿಸಿದರು.

       ನೋಡಲು ಸುಂದರವಾಗಿರುವವನು ನಿಜವಾದ ಹೀರೋ ಅಲ್ಲ. ಮತ್ತೊಬ್ಬರ ಕಷ್ಟಕ್ಕೆ ನೆರವಾಗುವವನು, ಹೆಣ್ಣಿನ ಮೇಲೆ ನಡೆಯುವ ದೌರ್ಜನ್ಯ, ಅತ್ಯಾಚಾರವನ್ನು ತಡೆಗಟ್ಟುವವನೆ ಸಮಾಜದ ನಿಜ ಹೀರೋ. ಗಾಂಧಿ, ಸುಭಾಷ್‍ಚಂದ್ರಬೋಸ್, ಭಗತ್‍ಸಿಂಗ್, ಚಂದ್ರಶೇಖರ್ ಆಜಾದ್, ವೀರಸಾರ್ವಕರ್ ಇವರುಗಳನ್ನು ನಿಮ್ಮ ಜೀವನದ ಹೀರೋಗಳನ್ನಾಗಿಸಿಕೊಂಡು ದೇಶಭಕ್ತಿ ಬೆಳೆಸಿಕೊಂಡು ಹೆಣ್ಣನ್ನು ಗೌರವಿಸುವುದನ್ನು ಕಲಿಯಿರಿ ಎಂದು ಬಾಲಕರಿಗೆ ಬುದ್ದಿಮಾತು ಹೇಳಿದ ಜಯಲಕ್ಷ್ಮಿ ಪಾಟೀಲ್ ಹೆಣ್ಣು ಕೂಡ ಸಮಾಜದಲ್ಲಿ ಗೌರವದಿಂದ ನಡೆದುಕೊಳ್ಳಬೇಕು ಎಂದು ಬಾಲಕಿಯರಿಗೆ ಕಿವಿಮಾತು ಹೇಳಿದರು.

        ಹೊರಗೆ ಒಂದು ಹೆಣ್ಣನ್ನು ಚುಡಾಯಿಸಿ ಅವಮಾನ ಮಾಡಿದರೆ ನಿಮ್ಮ ಮನೆಯ ಹೆಣ್ಣನ್ನು ಅವಮಾನ ಮಾಡಿದಂತೆ. ಯಾವುದೇ ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ಕೆಟ್ಟ ಮನಸ್ಸಿನಿಂದ ನೋಡಬಾರದು. ಹೆಣ್ಣಿನ ಬಟ್ಟೆ, ಮೈ ನೋಡಿ. ಕೆಲವೊಮ್ಮೆ ನಗು ನಗುತ್ತಾ ಮಾತನಾಡುವುದನ್ನೆ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಸ್ವಾತಂತ್ರವೆಂಬುದು ಎಲ್ಲರಿಗೂ ಸಮಾನವಾಗಿದೆ. ನಿಮ್ಮ ಮರ್ಯಾದೆ ಹಾಳಾಗಬಾರದೆಂದರೆ ಮತ್ತೊಬ್ಬರ ಮರ್ಯಾದೆಯನ್ನು ತೆಗೆಯುವ ಕೆಲಸ ಮಾಡಬೇಡಿ ಎಂದು ಪ್ರೌಢಶಾಲಾ ಮಕ್ಕಳನ್ನು ಜಾಗೃತಿಗೊಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ