ಚಿತ್ರದುರ್ಗ
ವಿದ್ಯಾರ್ಥಿಗಳು ವಿಜ್ಞಾನ ವಿಷಯವನ್ನು ಕೇವಲ ಉದ್ಯೋಗಕ್ಕಾಗಿ ಮಾತ್ರ ಅಭ್ಯಾಸ ಮಾಡಬಾರದು, ಬದುಕಿಗೆ ಅಗತ್ಯವಿರುವ, ಸಮಾಜದ ಸುತ್ತಮುತ್ತಲಿನ ವೈಜ್ಞಾನಿಕ ವಿಚಾರಗಳನ್ನು ಅರಿತುಕೊಳ್ಳುವ ಸಲುವಾಗಿ ವಿಜ್ಞಾನ ಅವಶ್ಯಕವಾಗಿ ಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸಿ.ಸತ್ಯಭಾಮ ಹೇಳಿದರು.
ನಗರದ ತ.ರಾ.ಸು ರಂಗಮಂದಿರದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಕೀಲರ ಸಂಘ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಚಿತ್ರದುರ್ಗ ವಿಜ್ಞಾನಕೇಂದ್ರ, ಸರ್ಕಾರಿ ವಿಜ್ಞಾನ ಕಾಲೇಜು, ಸರಸ್ವತಿ ಕಾನೂನು ಕಾಲೇಜು, ಪಿ.ವಿ.ಎಸ್.ಶಿಕ್ಷಣ ಸಂಸ್ಥೆ, ಎಸ್.ಆರ್.ಎಸ್. ಶಿಕ್ಷಣ ಸಂಸ್ಥೆ, ಕಬೀರಾನಂದ ಮಠ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಇನ್ನರ್‍ವೀಲ್ ಕ್ಲಬ್, ವಾಸವಿ ಮಹಿಳಾ ಸಂಘ, ಚಿತ್ರದುರ್ಗ ಇವರ ಸಹಯೋಗದೊಂದಿಗೆ ಮಂಗಳವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವಿಜ್ಞಾನ ನಾಯಕತ್ವ ತರಬೇತಿ ಶಿಬಿರ ಹಾಗೂ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ವಿಷಯಕ್ಕೆ ಬೇರೆ ದೇಶಗಳಿಗಿಂತ ಭಾರತವು ಹೆಚ್ಚಿನ ಆದ್ಯತೆಯನ್ನು ನೀಡಿದೆ. ವಿಜ್ಞಾನ ವಿಷಯವೆಂಬುದು ವಿಶೇಷವಾದ ಅಧ್ಯಯನ ವಸ್ತುವಾಗಿದ್ದು, ವಿಜ್ಞಾನ ವಿಷಯದಲ್ಲಿ ನಾಯಕತ್ವವನ್ನು ಬೆಳೆಸಿಕೊಂಡು ಹಲವು ವಿಚಾರಧಾರೆಗಳನ್ನು ತಿಳಿದುಕೊಳ್ಳಬೇಕು. ಜಿಲ್ಲೆ ತೀವ್ರ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಹಲವು ಕಡೆ ಹೆಚ್ಚಿನ ಮಳೆಯಾಗಿದೆ, ಆದರೆ ನಾವು ಮಳೆಯ ನೀರನ್ನು ಶೇಖರಣೆ ಮಾಡುವುದಿಲ್ಲ, ಮಳೆಯ ನೀರನ್ನು ಶೇಖರಣೆ ಮಾಡಿಕೊಂಡರೆ ಮನೆಯಲ್ಲಿ ಪಾತ್ರೆ, ಬಟ್ಟೆ ಹಾಗೂ ದೈನಂದಿನ ಬಳಕೆಗೆ ಉಪಯೋಗಿಸಬಹುದು. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎಲ್ಲರಿಗೂ ಗೊತ್ತಾಗುತ್ತೆ, ಆದರೆ ಮಳೆಗಾಲದಲ್ಲಿ ಜನರು ಸಮಸ್ಯೆ ಮರೆತು ಬಿಡುತ್ತಾರೆ. ಹೀಗಾಗಿ ಮುಂಜಾಗ್ರತೆಯಾಗಿ ನೀರನ್ನು ಸಂರಕ್ಷಿಸುವ ಕಾರ್ಯವನ್ನು ಎಲ್ಲರೂ ಮಾಡಬೇಕು ಎಂದು ಹೇಳಿದರು.
ಪ್ರತಿಯೊಂದು ವಸ್ತುವೂ ಮಾನವ ನಿರ್ಮಿತವಾದದ್ದು, ಅದರೆ ನೀರನ್ನು ಮಾತ್ರ ಮಾನವ ನಿರ್ಮಿಸಲು ಸಾಧ್ಯವಾಗಿಲ್ಲ. ಮಳೆ ಬಂದರೆ ಅಂತರ್ಜಲ, ಇಲ್ಲವಾದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತದೆ. ನೀರನ್ನು ಶುದ್ಧೀಕರಣ ಮಾಡುವ ಸಮಯದಲ್ಲಿ ಕಲುಷಿತ ನೀರು ವ್ಯರ್ಥವಾಗುತ್ತದೆ ಅದನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮದಾಗಬೇಕು ಎಂದರು.
ಅರಣ್ಯ ನಾಶ ಮಾಡಿದಲ್ಲಿ ಮಳೆಯು ಬರಲು ಸಾಧ್ಯವಿಲ್ಲ. ಪ್ರಸ್ತುತ ದಿನಮಾನದಲ್ಲಿ ಆದಷ್ಟು ಹೆಚ್ಚು, ಹೆಚ್ಚು ಗಿಡಗಳನ್ನು ನೆಡುವ ಕಾರ್ಯ ಮಾಡಬೇಕು. ಜಿಲ್ಲೆಯಲ್ಲಿ 2.50 ಲಕ್ಷ ಮಕ್ಕಳಿದ್ದು ಶಾಲೆಗಳಲ್ಲಿ 01 ರಿಂದ 5ನೆ ತರಗತಿಯ ಮಕ್ಕಳಿಗೆ ತಲಾ ಒಂದು ಗಿಡವನ್ನು ನೆಡುವುದು ಮತ್ತು ಬೆಳಸುವ ಜವಾಬ್ದಾರಿ ನೀಡಲಾಗುವುದು. ಅವರಿಗೆ ತಿಳಿಸಲಾಗುತ್ತದೆ, 5ನೇ ತರಗತಿಯಿಂದ 10 ನೇ ತರಗತಿವರೆಗಿನ ಮಕ್ಕಳಿಗೆ 2 ಗಿಡಗಳನ್ನು ನಡುವಂತೆ ಹಾಗೂ ಪೋಷಿಸುವಂತೆ ಪ್ರೇರೇಪಿಸಲಾಗುತ್ತದೆ, ಈ ಗಿಡ ನೆಡುವ ಕಾರ್ಯವನ್ನು ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಆಂದೋಲನದ ರೀತಿ ಮಾಡಲಾಗುತ್ತದೆ ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಆರ್.ದಿಂಡಲಕೊಪ್ಪ ಮಾತನಾಡಿ, ಪರಿಸರಕ್ಕೆ ವಿರೋಧವಾಗಿ ಜೀವಿಸಲು ಸಾಧ್ಯವಿಲ್ಲ, ಪ್ರಸ್ತುತ ಪರಿಸರ ಹಾನಿ ಮಾಡುವ ಕಾರ್ಯವನ್ನೆ ಮಾಡಲಾಗುತ್ತಿದೆ. ನೈಸರ್ಗಿಕ ಸಂಪನ್ಮೂಲಗಳಾದ ಅರಣ್ಯ, ಬೆಟ್ಟಗುಡ್ಡ, ಮರಗಳನ್ನು ನಾಶಪಡಿಸುವುದರಿಂದ ಕಾಲಕ್ಕನುಗುಣವಾಗಿ ಮಳೆಯಾಗದೆ ಅಂತರ್ಜಲ ಮಟ್ಟ ಕಡಿಮೆಯಾಗಿ ನೀರಿನ ಸಮಸ್ಯೆ ಉಂಟಾಗಿದ್ದು, ನೈಸರ್ಗಿಕ ವಿಕೋಪಗಳು ಸಂಭವಿಸುತ್ತವೆ. ರಸ್ತೆ ಅಗಲೀಕರಣ ಮಾಡುವಾಗ ಬೃಹದಾಕಾರವಾಗಿ ಬೆಳೆದ ಮರಗಳನ್ನು ಕಡಿಯಲಾಗುತ್ತದೆ, ಆದರೆ ಮತ್ತದೆ ಸ್ಥಳದಲ್ಲಿ ಗಿಡಗಳನ್ನು ನೆಡುವ ಕಾರ್ಯವನ್ನು ಮಾಡಲು ಯಾರು ಮುಂದಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಜ್ಞಾನ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆಗಳನ್ನು ಮಾಡಿರುವ ಸಾಧಕರಿದ್ದಾರೆ, ಅವರೆಲ್ಲ ಇತರರಿಗೆ ಮಾದರಿಯಾಗಬೇಕು. ಆದರೆ ದುಶ್ಚಟಗಳಿಗೆ ದಾಸರಾಗಿ ಪರಿಸರ ಹಾಗೂ ಸಮಾಜಕ್ಕೆ ಹಾನಿ ಮಾಡುವ ರಾಸಾಯನಿಕ ಅಂಶವುಳ್ಳ ಗುಟ್ಕಾ, ಸಿಗರೇಟ್ ಇವುಗಳಿಗೆ ಬಲಿಯಾಗುತ್ತಾರೆ. ಅಂತಹ ದುರಾಭ್ಯಾಸದಿಂದ ಮುಕ್ತರಾಗಿ ಉತ್ತಮ ನಾಯಕತ್ವ ಬೆಳೆಸಿಕೊಳ್ಳುವತ್ತ ಗಮನಹರಿಸಬೇಕು. ಮೌಢ್ಯತೆಯನ್ನು ಅನುಸರಿಸುವವರಿಗೆ ವೈಜ್ಞಾನಿಕ ಪರಿಹಾರೋಪಾಯಗಳನ್ನು ತಿಳಿಸಿ ಅದರಿಂದ ಮುಕ್ತರಾಗಿಸುವ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ವಿಜಯ್‍ಕುಮಾರ್, ಖ್ಯಾತ ಮನೋವೈದ್ಯ ಡಾ:ಸಿ.ಆರ್.ಚಂದ್ರಶೇಖರ್, ಜಿಲ್ಲಾ ಶಸ್ತ್ರ ಚಿಕಿತ್ಸಾಧಿಕಾರಿ ಜಯಪ್ರಕಾಶ್, ಕೆ.ಕೆ ಕಮಾನಿ, ರಾಜಾನಾಯ್ಕ್ ಹಾಗೂ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.