ಕೃಷಿಯನ್ನು ವೈಜ್ಞಾನಿಕವಾಗಿ ಬೆಳೆಸಿ: ಎಸ್.ಎ.ರವೀಂದ್ರನಾಥ್

ದಾವಣಗೆರೆ :

     ವಿಜ್ಞಾನದ ವಿದ್ಯಾರ್ಥಿಗಳು ಕೃಷಿಯ ಬಗ್ಗೆಯೂ ಚಿಂತನೆ ನಡೆಸಿ, ಸಂಶೋಧನೆ ಕೈಗೊಳ್ಳುವ ಮೂಲಕ ಕೃಷಿಯನ್ನು ವೈಜ್ಞಾನಿಕವಾಗಿ ಬೆಳೆಸಬೇಕು ಎಂದು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ.ರವೀಂದ್ರನಾಥ್ ಕರೆ ನೀಡಿದರು.

    ಇಲ್ಲಿನ ನಿಟ್ಟುವಳ್ಳಿಯ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ (ಆರ್.ಎಂ.ಎಸ್.ಎ)ಯಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ-2019 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ವಿಜ್ಞಾನ ಎಂದರೆನೇ ಹೊಸ ಹೊಸ ಸಂಶೋಧನೆಗಳಲ್ಲಿ ತೊಡಗಿಸಿಕೊಳ್ಳುವುದು ಹಾಗೂ ವೈಜ್ಞಾನಿಕ ಚಿಂತನೆ ಮಾಡುವುದಾಗಿದೆ. ಕೃಷಿಯನ್ನೂ ವೈಜ್ಞಾನಿಕವಾಗಿ ತಿಳಿದು ಬೆಳೆಸುವ ಮೂಲಕ ಮಕ್ಕಳು ಉತ್ತಮ ವಿಜ್ಞಾನಿಗಳಾಗಿ ಹೊರಹೊಮ್ಮಬೇಕು. ಪ್ರಸ್ತುತ ವಿವಿಧ ಮಾಧ್ಯಮಗಳ ಮೂಲಕ ವೈಜ್ಞಾನಿಕ ವಿಷಯಗಳು ಮಕ್ಕಳನ್ನು ತಲುಪುತ್ತಿವೆ. ಆದರೆ, ಮಕ್ಕಳು ಆಧಾರಸಹಿತವಾಗಿ ಚರ್ಚಿಸಿ ವಿಜ್ಞಾನವನ್ನು ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಇಂದು ಬಿಎಸ್‍ಸಿ ಅಗ್ರಿಯಲ್ಲಿ ಪದವಿ ಪಡೆದವರಿಗೂ ಸಹ ಎನ್‍ಪಿಕೆ ಎಂದರೇನು? ಎಂಬುದು ತಿಳಿದಿರುವುದಿಲ್ಲ. ಅಲ್ಲದೇ, ಬಿತ್ತನೆಗೆ ಯಾವ ಗೊಬ್ಬರ ಹಾಕಬೇಕು. ಏನು ಹಾಕಿದರೆ ಏನು ಬೆಳೆಯುತ್ತದೆ. ಬಿತ್ತನೆ ಬೀಜಗಳ ಬಗ್ಗೆ ತಿಳಿದಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

    ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ ಅಧ್ಯಕ್ಷೆ ಯಶೋಧಮ್ಮ ಮರುಳಪ್ಪ ಮಾತನಾಡಿ, ಅಂಧಕಾರವನ್ನು ಅಳಿಸಿ ಬೆಳಕು ಮೂಡಿಸುವಲ್ಲಿ ವಿಜ್ಞಾನದ ಪಾತ್ರ ದೊಡ್ಡದಾಗಿದೆ. ಈ ನಿಟ್ಟಿನಲ್ಲಿ ವೈಜ್ಞಾನಿಕ ವಿಚಾರಗಳಲ್ಲಿ ಮಕ್ಕಳು ಆಸಕ್ತಿಯಿಂದ ಪಾಲ್ಗೊಳ್ಳಲು ಇಂತಹ ಮಕ್ಕಳ ವಿಜ್ಞಾನ ಹಬ್ಬ ಉತ್ತಮ ಪ್ರೇರಣೆಯಾಗಿದೆ ಎಂದರು.

   ಟಿವಿ ಮತ್ತು ಮೊಬೈಲ್‍ಗಳಿಂದ ಮಕ್ಕಳನ್ನು ದೂರ ಇಟ್ಟು ಕಲಿಕೆಗೆ ಸಹಕಾರಿಯಾಗುವಂತಹ ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಭಾಗವಹಿಸುವ ಅವಶ್ಯಕತೆ ಇದೆ. ಎಲ್ಲ ಮಕ್ಕಳಲ್ಲಿಯೂ ಒಂದು ಜ್ಞಾನ ಶಕ್ತಿ ಅಡಗಿದ್ದು ಅದನ್ನು ಹೊರತೆಗೆಯಲು ನಾವೆಲ್ಲರೂ ಬೆಂಬಲ ನೀಡಬೇಕು. ಶಿಕ್ಷಕರು ಕಲಿಸಿದ ಪಾಠವನ್ನು ಬೇಕಾದರೂ ಮಕ್ಕಳು ಮರೆಯುತ್ತಾರೆ. ಆದರೆ, ಪ್ರಾಯೋಗಿಕ ಜ್ಞಾನವನ್ನು ಮರೆಯುವುದಿಲ್ಲ ಎಂದು ಹೇಳಿದರು.

    ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ವರ ಮಾತನಾಡಿ, ಮಕ್ಕಳಲ್ಲಿ ವಿಜ್ಞಾನದ ಬಗ್ಗೆ ಅರಿವು ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿಯಾಗಿದ್ದು, ನಿನ್ನೆ ತಾನೇ ಸೂರ್ಯಗ್ರಹಣದ ವಿಸ್ಮಯವನ್ನು ಎಲ್ಲರೂ ಸಾಕ್ಷೀಕರಿಸಿದ್ದೀರಿ. ಸರ್ಕಾರಿ ಶಾಲೆಯ ಮಕ್ಕಳಲ್ಲಿಯೂ ಅನೇಕ ಪ್ರತಿಭಾವಂತರಿದ್ದು ಅಬ್ದುಲ್ ಕಲಾಂ ಆಗುವ ನಿಟಿನಲ್ಲಿ ಸಾಧನೆ ಮಾಡಬೇಕು, ಜಿಲ್ಲೆಗೆ ಕೀರ್ತಿ ತರಬೇಕೆಂದು ಹಾರೈಸಿದರು.

     ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ(ಅಭಿವೃದ್ದಿ) ಹೆಚ್.ಕೆ.ಲಿಂಗರಾಜ್ ಮಾತನಾಡಿ, ವೈಜ್ಞಾನಿಕ ಕಲಿಕೆಗೆ ಹಬ್ಬ ಎಂದು ಹೆಸರಿಸಿರುವುದು ಅತ್ಯಂತ ಸೂಕ್ತವಾಗಿದೆ. ಹಿಂದೆ ನಮ್ಮ ದೇಶವನ್ನು ಅತ್ಯಂತ ಹಿಂದುಳಿದ ಬಡ ದೇಶವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇಂದು ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿದ್ದು ದೇಶ ಅಭಿವೃದ್ದಿಯತ್ತ ಸಾಗಿದೆ ಎಂದರು.

     ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಮಾತನಾಡಿ, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಈ ವಿಜ್ಞಾನ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಆರಂಭಿಸಿದ್ದು, ಈಗಾಗಲೇ ಜಿಲ್ಲೆಯ ಆಯ್ದ 18 ಕ್ಲಸ್ಟರ್‍ಗಳಲ್ಲಿ ಈ ಹಬ್ಬ ನಡೆದು ಈಗ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದೆ. ಶ್ರೀರಂಗಪಟ್ಟಣದಲ್ಲಿ ರಾಜ್ಯ ಮಟ್ಟದ ಹಬ್ಬ ನಡೆಯಲಿದ್ದು, ವೈಜ್ಞಾನಿಕ ವಿಶ್ಲೇಷಣಾ ಶಕ್ತಿಯನ್ನು ಹೆಚ್ಚಿಸುವ ಇಂತಹ ಕಾರ್ಯಕ್ರಮದಲ್ಲಿ ಮಕ್ಕಳು ಸಕ್ರಿಯರಾಗಿ ಪಾಲ್ಗೊಳ್ಳಬೇಕೆಂದು ಕರೆ ನೀಡಿದರು.ಡಿವೈಪಿಸಿ ಮಂಜುನಾಥಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು.

    ಜಿ.ಪಂ. ಸದಸ್ಯೆ ಸಾಕಮ್ಮ, ಮಹಾನಗರಪಾಲಿಕೆ ಸದಸ್ಯೆ ಉಮಾ ಪ್ರಕಾಶ್, ಎಸ್.ಡಿ.ಎಂ.ಸಿ ಪ್ರೌಢಶಾಲಾ ಅಧ್ಯಕ್ಷ ಎಸ್.ಎಂ ರಾಜು, ಎಸ್.ಡಿ.ಎಂ.ಸಿ ಪ್ರಾಥಮಿಕ ಶಾಲಾ ಅಧ್ಯಕ್ಷ ಜಮೀಲ್ ಅಹಮದ್, ದಕ್ಷಿಣ ಬಿಇಓ ಸಿದ್ದಪ್ಪ, ಬಿಆರ್‍ಸಿ ಉಮಾ, ಉನ್ನತೀಕರಿಸಿದ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ದುರ್ಗಪ್ಪ, ಉನ್ನತೀಕರಿಸಿದ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಚಂದ್ರಪ್ಪ, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ರಂಗನಾಥ ಹವಾಲ್ದಾರ್, ವಕೀಲರಾದ ಪ್ರಕಾಶ್, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ವಿಜ್ಞಾನ ಶಿಕ್ಷಕ ಬಸವರಾಜ್ ಪ್ರಾರ್ಥಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link