ಕಲಾವಿದರನ್ನು ಉತ್ತೇಜಿಸುವ ಗುಣ ಬೆಳೆಸಿಕೊಳ್ಳಬೇಕು

ಚಿತ್ರದುರ್ಗ:

         ಚುನಾಯಿತ ಪ್ರತಿನಿಧಿಗಳು ಕಲಾವಿದರನ್ನು ಗುರುತಿಸಿ ಕಲೆಯನ್ನು ಪ್ರೋತ್ಸಾಹಿಸುವ ಕೆಲಸ ಮಾಡಬೇಕೆಂದು ಮೊಳಕಾಲ್ಮುರು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ಸರ್ಕಾರವನ್ನು ಒತ್ತಾಯಿಸಿದರು.

          ರಂಗಸೌರಭ ಕಲಾ ಸಂಘ ಚಿತ್ರದುರ್ಗ, ರಂಗಜಂಗಮ ಸಂಸ್ಥೆ ಬಳ್ಳಾರಿ ಇವರುಗಳ ಸಂಯುಕ್ತಾಶ್ರಯದಲ್ಲಿ ತ.ರಾ.ಸು.ರಂಗಮಂದಿರದಲ್ಲಿ ಬುಧವಾರ ನಡೆದ ಎಂ.ಸಿ.ಮಂಜುನಾಥ್ ರಚನಾ ಇವರ 60 ರ ಸಂಭ್ರಮ ಅಭಿನಂದನಾ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

            ಎಂ.ಸಿ.ಮಂಜುನಾಥ್ ಸರ್ಕಾರಿ ಕೆಲಸದಲ್ಲಿದ್ದುಕೊಂಡು ಕಲಾವಿದನಾಗಿ ಕಲೆಯನ್ನು ಪ್ರೋತ್ಸಾಹಿಸುತ್ತ ಬರುತ್ತಿರುವುದು ನಿಜಕ್ಕೂ ಉತ್ತಮವಾದ ಕೆಲಸ. ಜಿಲ್ಲೆಯಲ್ಲಿ ಕಲೆಯನ್ನು ಪ್ರದರ್ಶಿಸುವವರು ಅನೇಕ ಮಂದಿಯಿದ್ದಾರೆ. ಅಂತಹವರನ್ನು ಗುರುತಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ನಾನು ಮೊಳಕಾಲ್ಮುರು ಶಾಸಕನಾಗಿದ್ದಾಗ ಕಲಾವಿದರನ್ನು ಗುರುತಿಸಿ ಅನೇಕರಿಗೆ ಮನೆಗಳನ್ನು ಕಟ್ಟಿಸಿಕೊಟ್ಟಿದ್ದೇನೆ. ಮಾಸಿಕ ಪಿಂಚಣಿ ಕನಿಷ್ಟ ಐದು ಸಾವಿರ ರೂ.ಗಳನ್ನಾದರೂ ನೀಡಬೇಕೆಂದು ಸರ್ಕಾರದ ಮಟ್ಟದಲ್ಲಿ ಚರ್ಚಿಸಿದ್ದೆ. ಆದರೆ ಮೂರು ಸಾವಿರ ರೂ.ಗಳ ಪಿಂಚಣಿ ನೀಡಲು ಒಪ್ಪಿದೆ. ಕಲಾವಿದರಲ್ಲಿ ಒಗ್ಗಟ್ಟು ಶಿಸ್ತು ಇಲ್ಲದಂತಾಗಿರುವುದು ಅತ್ಯಂತ ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

          ನಾನು ಕೂಡ ಎರಡು ನಾಟಕಗಳನ್ನು ರಚಿಸಿದ್ದೇನೆ. ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದೇನೆ. ಅದಮ್ಯವಾದ ಶಕ್ತಿಗಳು ಗ್ರಾಮೀಣ ಪ್ರದೇಶಗಳಲ್ಲಿದೆ. ಸರ್ಕಾರ ಎಚ್ಚೆತ್ತುಕೊಂಡಾಗ ಮಾತ್ರ ಕಲಾವಿದರ ಬದುಕು ಸುಧಾರಣೆಯಾಗಲು ಸಾಧ್ಯ ಎಂದು ಹೇಳಿದರು.
ನನ್ನ ಕ್ಷೇತ್ರದಲ್ಲಿ ಯಾರೇ ನಾಟಕವಾಡಿದರೂ ಸಹಾಯ ಮಾಡುತ್ತೇನೆ.ಎಂ.ಸಿ.ಮಂಜುನಾಥ್ ಜ.31 ರಂದು ಸೇವೆಯಿಂದ ನಿವೃತ್ತಿ ಹೊಂದಿದ ನಂತರ ಕಲೆಯಲ್ಲಿ ಹೆಚ್ಚು ತೊಡಗಿಕೊಂಡು ಕಲಾವಿದರನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಿ ಎಂದು ಹಾರೈಸಿದರು.

           ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ಪತ್ರಕರ್ತ ಜಿ.ಎಸ್.ಉಜ್ಜಿನಪ್ಪ ಸರ್ಕಾರಿ ನೌಕರಿಯೆಂದರೆ ವರ್ಗಾವಣೆ, ನಿವೃತ್ತಿಯಾಗಲೇಬೇಕು. ಆದರೆ ಎಂ.ಸಿ.ಮಂಜುನಾಥ್‍ರವರು ಸರ್ಕಾರಿ ಸೇವೆಯಲ್ಲಿದ್ದುಕೊಂಡೆ ರಂಗಾಸಕ್ತಿ ಮೈಗೂಡಿಸಿಕೊಂಡಿರುವುದು ಸುಲಭದ ಕೆಲಸವಲ್ಲ. ಕೆಲವರು ನಿವೃತ್ತಿಯಾದರೆ ಪಿಂಚಣಿ ಸಿಗುವುದಿಲ್ಲ. ಎಂ.ಸಿ.ಮಂಜುನಾಥ್ ಸರ್ಕಾರಿ ಸೇವೆಯಲ್ಲಿ ಯಾವುದೇ ಕಪ್ಪುಚುಕ್ಕೆಯಿಲ್ಲದೆ ನಿವೃತ್ತರಾಗುತ್ತಿರುವುದು ಅವರ ಕರ್ತವ್ಯನಿಷ್ಟೆಗೆ ಸಾಕ್ಷಿಯಾಗಿದೆ ಎಂದು ಗುಣಗಾನ ಮಾಡಿದರು.

       ರಂಗವಿಮರ್ಶಕ, ಪ್ರಾಧ್ಯಾಪಕ ಡಾ.ವಿ.ಬಸವರಾಜ್ ಮಾತನಾಡಿ ಒಂದು ಸಮಾಜದ ಗುರುತಿಸುವಿಕೆಯಾಗಬೇಕಾದರೆ ಆ ಕಾಲಘಟ್ಟದಲ್ಲಿ ಸಾಂಸ್ಕತಿಕ ಮತ್ತು ಸಾಹಿತ್ಯಿಕ ಚಟುವಟಿಕೆಗಳು ಮುಖ್ಯ ಪಾತ್ರ ವಹಿಸುತ್ತವೆ. ಸಾಧನೆ ಒಬ್ಬ ವ್ಯಕ್ತಿಯ ವೈಯಕ್ತಿಕ ನೆಲೆಯಲ್ಲಾದರೂ ಆ ವ್ಯಕ್ತಿ ಹಲವು ಜನ ಹಿತೈಷಿಗಳು, ಸ್ನೇಹಿತರ ಸಹಕಾರದಿಂದ ರೂಪಿತಗೊಳ್ಳುತ್ತಾನೆ. ನಮ್ಮ ನಡುವಿನ ಸಾಧಕರನ್ನು ಗುರುತಿಸಿ ಗೌರವಿಸಿದರೆ ನಮ್ಮನ್ನು ನಾವೇ ಗೌರವಿಸಿಕೊಂಡಂತೆ ಎಂದು ಹೇಳಿದರು.

           ಮೌಲ್ಯಗಳು ಮರೆಯಾಗುತ್ತಿರುವ ಇಂದಿನ ಕಾಲದಲ್ಲಿ ಮೌಲ್ಯಗಳ ಪುನರುತ್ಥಾನಕ್ಕಾಗಿ ಸಾಂಸ್ಕತಿಕ ಮನಸ್ಸುಗಳು ಒಂದೆಡೆ ಸೇರಿ ಸಾಂಸ್ಕತಿಕ ಮೌಲ್ಯಗಳನ್ನು ಉಳಿಸುವ ಪ್ರಯತ್ನ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಐತಿಹಾಸಿಕ ಚಿತ್ರದುರ್ಗ ನಗರದಲ್ಲಿ ರಚನಾ ಹವ್ಯಾಸಿ ಕಲಾ ಸಂಘವು ಸಾಂಸ್ಕತಿಕ ಚರಿತ್ರೆಯಲ್ಲಿ ದಾಖಲಿಸಬಹುದಾದ ರಂಗ ಚಟುವಟಿಕೆಗಳನ್ನು ನಡೆಸುತ್ತ ಬರುತ್ತಿರುವುದು ಉತ್ತಮ ಬೆಳವಣಿಗೆ. ರಚನಾ ಹವ್ಯಾಸಿ ಕಲಾ ಬಳಗ ಇಂಜಿನಿಯರ್ ಎಂ.ಸಿ.ಮಂಜುನಾಥ್‍ರವಲ್ಲಿರುವ ನಾಟಕ ಅಭಿನಯ ಕಲೆಯನ್ನು ಗುರುತಿಸಿ ಮುಂಚೂಣಿಗೆ ತಂದಿರುವುದಕ್ಕೆ ತಿಪ್ಪೇಸ್ವಾಮಿಯಂತಹ ಸಾಧಕರಿಂದ ಮಾತ್ರ ಸಾಧ್ಯ ಎಂದರು.

         ಕರ್ನಾಟಕ ನಾಟಕ ಅಕಾಡೆಮಿ ಮಾಜಿ ಸದಸ್ಯ ಕೆ.ನಾಗರಾಜ್, ಕಾಟಪ್ಪನಹಟ್ಟಿ ತಿಪ್ಪೇಸ್ವಾಮಿ, ಡಾ.ರಾಮಚಂದ್ರನಾಯಕ, ಸಂಸ ರಂಗ ಪತ್ರಿಕೆಯ ಸಂಸ ಸುರೇಶ್, ಹವಾಲ್ದಾರ್ ನಾಗರಾಜ್, ಯುವ ರಂಗ ನಿರ್ದೇಶಕ ಅಣ್ಣಾಜಿ ಕೃಷ್ಣರೆಡ್ಡಿ, ಡಿ.ಓ.ಮುರಾರ್ಜಿ, ಎಂ.ಸಿ.ಮಂಜುನಾಥ್ ರಚನಾ ವೇದಿಕೆಯಲ್ಲಿದ್ದರು.ಗಂಗಾಧರ್ ಪ್ರಾರ್ಥಿಸಿದರು. ಕುಮಾರ್ ಸ್ವಾಗತಿಸಿದರು. ಗಣೇಶಯ್ಯ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap