ದಾವಣಗೆರೆ
ಮಹಿಳಾ ಸಬಲೀಕರಣ ಆಗದಿದ್ದರೆ, ದೇಶ ಹಾಗೂ ಸಮಾಜದ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ ಎಂದು ಬಿಇಐಟಿ ಕಾಲೇಜಿನ ನಿರ್ದೇಶಕ ಪ್ರೊ.ವೈ.ವೃಷಭೇಂದ್ರಪ್ಪ ತಿಳಿಸಿದರು.
ನಗರದ ಐಸಿಎಆರ್- ತರಳಬಾಳು ವಿಜ್ಞಾನ ಕೇಂದ್ರದಲ್ಲಿ ಗುರುವಾರ ಹರಿಹರದ ಮಾರ್ಸ್- ಕರ್ನಾಟಕ ಸಂಸ್ಥೆ ವತಿಯಿಂದ ಆಯೋಜಿಸಿದ್ದ ವಿಶ್ವ ಮಹಿಳಾ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಡಾ.ನಿರ್ಮಲಾ ಕೇಸರಿ, ಡಾ.ಲೀಲಾ ಕೇಸರಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಎಲ್ಲಿಯ ವರೆಗೆ ದೇಶದಲ್ಲಿ ಪರುಷರಷ್ಟೇ ಮಹಿಳೆಯರು ಸಮಾನರು ಎಂಬ ಭಾವನೆ ಬರುವುದಿಲ್ಲವೋ ಹಾಗೂ ಮಹಿಳಾ ಸಬಲೀಕರಣ ಆಗುವುದಿಲ್ಲವೋ, ಅಲ್ಲಿಯ ವರೆಗೂ ದೇಶದ ಸಮಗ್ರ ಅಭಿವೃದ್ಧಿ ಅಸಾಧ್ಯ ಎಂದರು.
ಇಂದು ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ನಾವುಗಳು ಬಸವಾದಿ ಶರಣರು ಹಾಕಿಕೊಟ್ಟ ದಾರಿಯನ್ನು ಸ್ಮರಿಸಬೇಕಾದ ಅವಶ್ಯಕತೆ ಇದೆ. 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪದಲ್ಲಿ ಆಯ್ದಕ್ಕಿ ಲಕ್ಕಮ್ಮ, ಮೊಳಿಗೆ ಮಾರಮ್ಮ ಸೇರಿದಂತೆ ಅನೇಕ ಮಹಿಳೆಯರಿಗೆ ಸ್ಥಾನ ನೀಡಿದ್ದರು. ಆಯ್ದಕ್ಕಿ ಲಕ್ಕಮ್ಮ ಈಸಕ್ಕಿ ಆಸೆ ನಮಗೇಕೆ ಎನ್ನುವ ಮೂಲಕ ವಂಚದ ವಿರುದ್ಧ ಅಂದಿನ ಕಾಲದಲ್ಲೇ ದನಿ ಎತ್ತಿದ್ದರು. ಆದರೆ, ಇದನ್ನು ಯಾರೂ ಸಹ ಇಂದು ಸ್ಮರಿಸದಿರುವುದು ದುರ್ದೈವವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಡುಗೆ ಮನೆಯಿಂದಲೇ ಮಹಿಳೆಯ ಸಬಲೀಕರಣ ಆರಂಭವಾಗಬೇಕಾಗಿದೆ. ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಸಬಲರಾಗಿದ್ದಾರೆ. ಇಂಜಿನಿಯರಿಂಗ್‍ನಲ್ಲಿ ಶೇ.75 ರಷ್ಟು ಯುವತಿರಿದ್ದರೆ, ಶೇ.25 ರಷ್ಟು ಮಾತ್ರ ಯುವಕರಿದ್ದಾರೆ. ಹಳ್ಳಿಗಳಲ್ಲಿ ಸಾಮೂಹಿಕ ತತ್ವದಡಿ ಒಗ್ಗಟ್ಟಿನಿಂದ ಕೆಲಸ, ಕಾರ್ಯ ನಡೆಯುತ್ತದೆ. ಗ್ರಾಮೀಣ ಜನತೆಯಲ್ಲಿ ಸಾಮಾಜಿಕ ದೃಷ್ಟಿಕೋನ ಹೆಚ್ಚಾಗಿರುವ ಕಾರಣ ಮಕ್ಕಳ ಓದಿಗೂ ಆದ್ಯತೆ ನೀಡುತ್ತಾರೆ. ಆದ್ದರಿಂದ ಗಂಡು-ಹೆಣ್ಣನ್ನು ಒಂದೇ ಭಾವನೆಯಿಂದ ಕಾಣಬೇಕೆಂದು ಸಲಹೆ ನೀಡಿದರು.
ಮಕ್ಕಳ ತಜ್ಞ ಡಾ.ಬಾಣಾಪುರಮಠ ಮಾತನಾಡಿ, ಡಾ.ನಿರ್ಮಲಾ ಕೇಸರಿ ಮಕ್ಕಳ ಶಾಸ್ತ್ರದಲ್ಲಿ ಸಂಪೂರ್ಣ ಪರಿಣತಿ ಹೊಂದಿದವರು. ಅವರಿಗೆ ಮುಂಬೈ, ಚೆನ್ನೈ, ದೆಹಲಿ ಸೇರಿ ವಿವಿಧೆಡೆ ಭಾರಿ ಬೇಡಿಕೆ ಇದ್ದರೂ ಮಾತೃಭೂಮಿಗೆ ಸೇವೆಗೈಯಲು ದಾವಣಗೆರೆ ಆಯ್ದುಕೊಂಡರು. ಸತತ 50 ವರ್ಷಗಳ ಕಾಲ ಮಕ್ಕಳಿಗಾಗಿ ಜೀವನ ಮುಡಿಪಿಟ್ಟರು. ಇದರಿಂದ ಮಕ್ಕಳ ವಿಭಾಗದಲ್ಲಿ ದಾವಣಗೆರೆ ಹೆಸರುವಾಸಿಯಾಗಿದೆ ಎಂದು ಬಣ್ಣಿಸಿದರು.
ಮಹಿಳೆ ಹೆರಿಗೆಯಾದ ತಕ್ಷಣವೇ ಮಗುವನ್ನು ತನ್ನ ನಿಕಟ ಸಂಪರ್ಕ ತೆಗೆದುಕೊಳ್ಳಬೇಕು. ಮಗು ಜನಿಸಿದ 20ರಿಂದ 40 ನಿಮಿಷಗಳ ಕಾಲ ನಿಚ್ಚಳಾವಸ್ಥೆಯಲ್ಲಿದ್ದು, ಬಳಿಕ ನಿದ್ರಾವಸ್ಥೆಗೆ ಜಾರುತ್ತದೆ. ಇದು ಮಗುವಿನ ಬೆಳವಣಿಗೆಯ ಪ್ರಾರಂಭ ಹಂತವಾಗಿದೆ. ಇಂತಹ ನಿಸರ್ಗದತ್ತ ಸೃಷ್ಟಿಸಂಪರ್ಕ ತಪ್ಪಿಸಬಾರದು. ಇದರಿಂದ ಮಗು ಸದೃಢ, ರೋಗಮುಕ್ತವಾಗಿ ಬೆಳೆಯುತ್ತದೆ. 6 ತಿಂಗಳ ತನಕ ಮಗುವಿಗೆ ತಾಯಿಹಾಲು ಮಾತ್ರ ಕೊಡಬೇಕು ಎಂದು ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಟಿಕೆವಿಕೆ ಮುಖ್ಯಸ್ಥ ಡಾ.ಟಿ.ಎನ್.ದೇವರಾಜ್, ಬಾಪೂಜಿ ವಿದ್ಯಾಸಂಸ್ಥೆಯ ನಿರ್ದೇಶಕಿ ಕಿರುವಾಡಿ ಗಿರಿಜಮ್ಮ, ಮಾರ್ಸ್-ಕೆ ಸಂಸ್ಥೆಯ ಎ.ಹುಲಿಗೇಶ್, ಡಾ.ಪಂಚಾಕ್ಷರಪ್ಪ, ತದ್ವನಂ ಸಂಸ್ಥಾಪಕಿ ಸರೋಜಾ ಎನ್. ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.