ಪ್ರಕೃತಿಗೆ ಧಕ್ಕೆ ಬಾರದಂತೆ ಅಭಿವೃದ್ಧಿ ನಡೆಯಲಿ

ದಾವಣಗೆರೆ:

       ಪ್ರಕೃತಿ ನಾಶವಾಗದ ರೀತಿಯಲ್ಲಿ ವೈಜ್ಞಾನಿಕವಾಗಿ ಅಭಿವೃದ್ಧಿ ಮಾಡುವ ಕುರಿತು ಆವಿಷ್ಕಾರ, ಸಂಶೋಧನೆ ನಡೆಸಬೇಕಾದ ಅವಶ್ಯಕತೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಆರ್. ಪರಮೇಶ್ವರಪ್ಪ ಪ್ರತಿಪಾದಿಸಿದರು.

       ಸಮೀಪದ ಶಿರಮಗೊಂಡನಹಳ್ಳಿಯ ಅನಮೋಲ್ ಪಬ್ಲಿಕ್ ಸ್ಕೂಲ್‍ನಲ್ಲಿ ಶನಿವಾರ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಜಿಲ್ಲಾ ಘಟಕ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ವಿಜ್ಞಾನ ಕೇಂದ್ರ ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ಪ್ರಸ್ತುತ ಅಭಿವೃದ್ಧಿ ಎಂಬುದು ಪ್ರಕೃತಿಯನ್ನು ನಾಶ ಮಾಡುವಂತಹ ಪರಿಕಲ್ಪನೆಯಲ್ಲಿದೆ. ಯಾವುದೇ ಅಭಿವೃದ್ಧಿ ಕೈಗೊಂಡರೂ ಪ್ರಕೃತಿಯ ಮೇಲೆ ಒಂದಿಲ್ಲೊಂದು ಪರಿಣಾಮ ಬೀರುತ್ತಿದೆ. ಡ್ಯಾಮ್, ಕಟ್ಟಡ, ಕೈಗಾರಿಕೆ ನಿರ್ಮಾಣ, ನೋಟು ಮುದ್ರಣ ಹೀಗೆ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡರೂ ಸಹ ಪ್ರಕೃತಿಯ ಹಾನಿ ನಡೆಯುತ್ತಿದ್ದು, ಇದರಿಂದ ಪರೋಕ್ಷವಾಗಿ ಮಾನವ ಸಂಪನ್ಮೂಲದ ಮೇಲೆ ದುಷ್ಪರಿಣಾಮಗಳು ಬೀರುತ್ತಿವೆ. ಆದ್ದರಿಂದ ಪ್ರಕೃತಿಗೆ ಧಕ್ಕೆ ಬಾರದಂತೆ, ಅಭಿವೃದ್ಧಿ ಕೈಗೊಳ್ಳುವುದರ ಬಗ್ಗೆ ಹೆಚ್ಚಿನ ಆವಿಷ್ಕಾರ ನಡೆಸಬೇಕಾದ ಜವಾಬ್ದಾರಿ ಯುವ ವಿಜ್ಞಾನಿಗಳ ಮೇಲಿದೆ ಎಂದು ಹೇಳಿದರು.

        ಈ ಭೂಮಂಡಲದಲ್ಲಿ ನೂರಾರು ಕೋಟಿ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳು ಸೃಷ್ಟಿಯಾಗಿವೆ. ಇವುಗಳ ಪೈಕಿ ಯಾವ ಪ್ರಾಣಿ, ಪಕ್ಷಿ, ಕ್ರಿಮಿ, ಕೀಟಗಳು ಪರಿಸರವನ್ನು ಹಾಳು ಮಾಡುತ್ತಿಲ್ಲ. ಆದರೆ, ಭಾರೀ ಬುದ್ಧಿವಂತ ಎಂಬುದಾಗಿ ಹೇಳಿಕೊಳ್ಳುವ ಮಾನವರಿಂದಲೇ ಪ್ರಕೃತಿಯ ಮೇಲೆ ದಾಳಿ ನಡೆಯುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.

       ಇರುವ ಪ್ರಕೃತಿಯನ್ನು ಸಂರಕ್ಷಣೆ ಮಾಡಿಕೊಂಡು ಮುಂದಿನ ಪೀಳಿಗೆಗೆ ಕೊಂಡ್ಡೊಯ್ಯುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಹೊಂದಬೇಕೆಂದು ಕರೆ ನೀಡಿದ ಅವರು, ವಿದ್ಯಾರ್ಥಿಗಳೇ ಯುವ ವಿಜ್ಞಾನಿಗಳಾಗಿದ್ದು, ಹಳೇ ಮಾದರಿಗಳನ್ನು ಯಾವುದೇ ಕಾರಣಕ್ಕೂ ಪ್ರದರ್ಶನಕ್ಕೆ ಇಡಬಾರದು. ನಿಮ್ಮಲ್ಲಿರುವ ಅಗಾಧ ಪ್ರತಿಭೆಯನ್ನು ಬಳಸಿಕೊಂಡು ಹೊಸ ಸಂಶೋಧನೆ, ಆವಿಷ್ಕಾರವನ್ನು ಕೈಗೊಳ್ಳುವ ಮೂಲಕ ರಾಜ್ಯ, ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಕಿವಿಮಾತು ಹೇಳಿದರು.

         ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್ ಮಾತನಾಡಿ, ವಿದ್ಯಾರ್ಥಿಗಳು ಸ್ವಚ್ಛ, ಆರೋಗ್ಯವಂತ ರಾಷ್ಟ್ರಕ್ಕೆ ಪೂರಕವಾದ ಸಂಶೋಧನೆ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಇತ್ತೀಚಿನ ದಿನಗಳಲ್ಲಿ ಇ- ತ್ಯಾಜ್ಯ ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತಿದ್ದು, ಕಂಪ್ಯೂಟರ್, ಬ್ಯಾಟರಿ, ಪಾದರಸದಂತಹ ವಸ್ತುಗಳು ಪರಿಸರಕ್ಕೆ ಹೆಚ್ಚು ಹಾನಿಕಾರಕವಾಗಿವೆ. ಇವುಗಳನ್ನು ಮರುಬಳಕೆ ಮಾಡಿಕೊಂಡು ಆರ್ಥಿಕ, ಪರಿಸರ ಸದೃಢರಾಗಬೇಕೆಂದು ಸಲಹೆ ನೀಡಿದರು.

        ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ಜಿಲ್ಲಾ ಘಟಕ ಅಧ್ಯಕ್ಷ ಡಾ.ಬಿ.ಇ. ರಂಗಸ್ವಾಮಿ ಮಾತನಾಡಿ, ದೇಶದಲ್ಲಿ ವಿದ್ಯಾರ್ಥಿಗಳಿಂದ ಸಾಕಷ್ಟು ಸಂಶೋಧನೆ ನಡೆಯುತ್ತಿವೆ. ಇವುಗಳು ಜನೋಪಯೋಗಿಯೂ ಆಗಿವೆ. ಮಕ್ಕಳು ಆಸಕ್ತಿ, ಕುತೂಹಲ ಬೆಳೆಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯುವ ಜವಾಬ್ದಾರಿ ಯುವ ವಿಜ್ಞಾನಿಗಳ ಮೇಲಿದೆ ಎಂದರು.

         ಅನ್‍ಮೊಲ್ ವಿದ್ಯಾಸಂಸ್ಥೆಯ ಅಧ್ಯಕ್ಷ ಸಿ.ಜಿ. ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಷಯ ಪರಿವೀಕ್ಷಕಿ ಆರ್.ಬಿ.ವಸಂತಿಕುಮಾರಿ, ವಿಜ್ಞಾನ ಪರಿಷತ್‍ನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಉದಯರತ್ನ ಕುಮಾರ್, ಕಾರ್ಯದರ್ಶಿ ಎ. ಗುರುಸಿದ್ದಸ್ವಾಮಿ, ಎನ್.ಎಂ.ಕೆ.ಲೋಕೇಶ್, ನಂದಿನಿ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap