ಚಳ್ಳಕೆರೆ
ಕ್ಷೇತ್ರದ ಜನತೆ ಎರಡನೇ ಬಾರಿಗೆ ಮತ್ತೊಮ್ಮೆ ಶಾಸಕನಾಗಿ ಆಯ್ಕೆ ಮಾಡುವ ಮೂಲಕ ಮತ್ತಷ್ಟು ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸುವ ಜವಾಬ್ದಾರಿಯನ್ನು ನೀಡಿದೆ. ಈ ಹಿನ್ನೆಲೆಯಲ್ಲಿ ಚಳ್ಳಕೆರೆ ಕ್ಷೇತ್ರದ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಮುಖ್ಯಮಂತ್ರಿ ಗಳೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ಮತ್ತಷ್ಟು ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸುವ ಸೂಚನೆಯನ್ನು ಕ್ಷೇತ್ರದ ಶಾಸಕ, ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ನೀಡಿದರು.
ಅವರು, ಸೋಮವಾರ ಶಾಸಕರ ಭವನದಲ್ಲಿ ಅಭಿಮಾನಿಗಳು ಹಮ್ಮಿಕೊಂಡಿದ್ದ ತಮ್ಮ 55ನೇ ಹುಟ್ಟು ಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಿದರಲ್ಲದೆ, ಅಭಿಮಾನಿಗಳು ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸ್ವಯಂ ಪಾಲ್ಗೊಂಡು ರಕ್ತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪಕ್ಷದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಈ ಬಾರಿಯ ಹುಟ್ಟು ಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಿದ್ದಾರೆ. ವ್ಯಕ್ತಿಯ ಜೀವವನ್ನು ರಕ್ಷಿಸಿ ಅವನಿಗೆ ಹೊಸ ಶಕ್ತಿಯನ್ನು ನೀಡುವ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ಧಾರೆ.
ಅಭಿಮಾನಿಗಳು ನನ್ನ ಮೇಲೆ ಇಟ್ಟಿರುವ ನಂಬಿಕೆ ವಿಶ್ವಾಸಕ್ಕೆ ದಕ್ಕೆಯಾಗದಂತೆ ಕಾರ್ಯನಿರ್ವಹಿಸುವೆ. ಹುಟ್ಟು ಹಬ್ಬದ ಸಂದರ್ಭದಲ್ಲಿ ಶುಭ ಕೋರಿದ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಅಧಿಕಾರಿ ವರ್ಗವನ್ನು ಅಭಿನಂದಿಸಿದರು.
ಜಿಲ್ಲಾ ಕಾರ್ಯದರ್ಶಿ ಆರ್.ಪ್ರಸನ್ನಕುಮಾರ್ ಮಾತನಾಡಿ, ಶಾಸಕರು ತಮ್ಮ ಹುಟ್ಟು ಹಬ್ಬ ಸರಳವಾಗಿರಲಿ ಎಂದು ಸೂಚಿಸಿದ್ದರು. ಆದರೆ, ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ರಕ್ತದಾನ ಶಿಬಿರ ಏರ್ಪಡಿಸುವ ಮೂಲಕ ರೋಗಿಗಳ ಸಂರಕ್ಷಣೆಗೆ ನೆರವಾದರು. ಇಂದು ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು 50ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದ್ದಾರೆ. ಬಾಲಾಜಿ ವೈದ್ಯ ಸಂದೀಪ್, ರಕ್ತಕೇಂದ್ರದ ವ್ಯವಸ್ಥಾಪಕ ತಿಮ್ಮಣ್ಣ ಈ ಕಾರ್ಯದಲ್ಲಿ ನೆರವಾಗಿದ್ಧಾರೆಂದರು.
ನಗರಸಭಾ ಸದಸ್ಯರಾದ ಟಿ.ಮಲ್ಲಿಕಾರ್ಜುನ, ವೀರಭದ್ರಪ್ಪ, ವಿರೂಪಾಕ್ಷಪ್ಪ, ಸುಮಾಭರಮಣ್ಣ, ಸಿ.ಕವಿತಾಬೋರಣ್ಣ, ಸುಜಾತಪಾಲಯ್ಯ, ಎಂ.ಜೆ.ರಾಘವೇಂದ್ರ, ತಾಲ್ಲೂಕು ಪಂಚಾಯಿತಿ ಸದಸ್ಯ ಜಿ.ವೀರೇಶ್, ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್, ಪರಶುರಾಮಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಿರಣ್‍ಶಂಕರ್, ಟಿ.ಜೆ.ವೆಂಕಟೇಶ್, ಅನ್ವರ್ ಮಾಸ್ಟರ್, ಬಡಗಿಪಾಪಣ್ಣ, ಕೆ.ಎಂ.ಜಗದೀಶ್, ಫರೀದ್‍ಖಾನ್, ಕೃಷ್ಣ, ಸೈಯದ್ ಮುಂತಾದವರು ಭಾಗವಹಿಸಿದ್ದರು.