ಧರ್ಮ ಕಾಪಾಡುವವರಿಗೆ ಸದಾ ರಕ್ಷಣೆ

 ದಾವಣಗೆರೆ:

           ಧರ್ಮೋ ರಕ್ಷಕಿ ರಕ್ಷಿತ ಎಂಬ ಉಕ್ತಿಯಂತೆ, ಧರ್ಮವನ್ನು ಯಾರು ಕಾಪಾಡುತ್ತಾರೋ ಅವರನ್ನು ಧರ್ಮವು ಸದಾ ರಕ್ಷಿಸುತ್ತದೆ ಎಂದು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

            ನಗರದ ಶ್ರೀಶೈಲ ಮಠದಲ್ಲಿ ಶ್ರೀಶೈಲ ಜಗದ್ಗುರು ಲಿಂ|| ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳವರ ಪುಣ್ಯಾರಾಧನಾ ಸೇವಾ ಸಮಿತಿಯ ಆಶ್ರಯದಲ್ಲಿ ಲಿಂ|| ಶ್ರೀವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರ 32 ವಾರ್ಷಿಕ ಪುಣ್ಯಾರಾಧನೆ ಹಾಗೂ ಲಿಂ|| ಶ್ರೀಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ 7ನೇ ವರ್ಷದ ಸ್ಮರಣೋತ್ಸವದ ಪ್ರಯುಕ್ತ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಜನಜಾಗೃತಿ ಧರ್ಮ ಸಮ್ಮೇಳನದ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿದರು.

           ಕೆಲವರು ವೀರಶೈವ-ಲಿಂಗಾಯತ ಧರ್ಮ ಇಬ್ಬಾಗ ಮಾಡಲು ಪ್ರಯತ್ನ ಪಟ್ಟಾಗ, ಈ ಧರ್ಮವನ್ನು ಒಡೆಯದಂತೆ ತಡೆಯುವಲ್ಲಿ ಅನೇಕ ಯುವಕರು ಹಾಗೂ ಸಮಾಜದ ಮುಖಂಡರು ಶಕ್ತಿ ಮೀರಿ ಶ್ರಮಿಸಿದ್ದಾರೆ. ಅದರಲ್ಲಿ ಕೆಲವರಿಗೆ ಈ ವೇದಿಕೆ ಮೂಲಕ ಸಮಾಜ ಸೇವಾ ಭಾಸ್ಕರ ಪ್ರಶಸ್ತಿ ನೀಡಿ, ಗೌವರವಿಸಲಾಗುತ್ತಿದೆ. ನೀವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಿಮ್ಮನ್ನೂ ಸದಾ ರಕ್ಷಿಸುತ್ತದೆ ಎಂದು ಹೇಳಿದರು.

           ಜಗತ್ತಿನ ಅನೇಕ ಧರ್ಮಗಳಿಗೆ ಆ ಧರ್ಮಗಳ ಸಾರವನ್ನು ಸಾರುವ ಕೋಡ್ ನಂಬರ್ ಇರುವಂತೆ, ವೀರಶೈವ ಧರ್ಮಕ್ಕೂ ಧರ್ಮದ ತಿರಳನ್ನು ಸಾರುವ 856 ನಂಬರ್‍ನ ಕೋಡ್ ಇದೆ. 856 ವೀರಶೈವ ಧರ್ಮದ ಮೂಲ ತತ್ವಗಳನ್ನು ಪ್ರತಿನಿಧಿಸುತ್ತದೆ. ಗುರು-ಲಿಂಗ-ಜಂಗಮ, ವಿಭೂತಿ-ರುದ್ರಾಕ್ಷಿ-ಮಂತ್ರ, ಪಾದೋದಕ ಮತ್ತು ಪ್ರಸಾದ ಇವು ಎಂಟು ಅಷ್ಠಾವರಣಗಳು. ಸದಾಚಾರ ಶಿವಾಚಾರ, ಲಿಂಗಾಚಾರ, ಗಣಾಚಾರ ಮತ್ತು ಭೃತ್ಯಾಚಾರ ಇವು ಐದು ಪಂಚಾಚಾರಗಳು. ಭಕ್ತ, ಮಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ, ಹಾಗೂ ಐಕ್ಯ ಇವು ಷಟಸ್ಥಲಗಳು.

           ಇವುಗಳನ್ನೇ ವೀರಶೈವ ಧರ್ಮದ ತತ್ವಗಳೆಂದು ಕರೆಯಲಾಗುತ್ತದೆ ಎಂದರು.ವೀರಶೈವ ಸಾಧಕನಿಗೆ ಅಷ್ಠಾವರಣವೇ ಅಂಗವಾಗಿ, ಪಂಚಾಚಾರಗಳೇ ಪಂಚಪ್ರಾಣಗಳಾಗಿ, ಷಟಸ್ಥಲಗಳೇ ಆತ್ಮವಾಗಿ ಇರಬೇಕೆಂದು ಶಾಸ್ತ್ರಗಳಲ್ಲಿ ಸಾಧನೆಯ ಚೌಕಟ್ಟನ್ನು ವಿಧಿಸಲಾಗಿದ್ದು, 856 ನಂಬರ್ ಈ ತಾತ್ವರ್ಯಗಳನ್ನು ಪ್ರತಿನಿಧಿಸುತ್ತದೆ. ಈ ಕೋಡ್ ನಂಬರ್‍ನಲ್ಲಿ 8 ಅಷ್ಠಾವರಣಗಳನ್ನು, ಐದು ಪಂಚಾಚಾರಗಳನ್ನು ಹಾಗೂ 6 ಷಟಸ್ಥಳನ್ನು ಸಂಕೇತಿಸುತ್ತದೆ.

          ಹೀಗೇ ಅತ್ಯಂತ ತಾತ್ವಿಕವಾಗಿ ಈ 856ರ ಸಂಖ್ಯೆಯನ್ನು ಧರ್ಮದ ಕೋಡ್ ಸಂಖ್ಯೆಯೆಂದು ವೀರಶೈವ ಲಿಂಗಾಯಿತರಾದವರೆಲ್ಲೂ ಎಲ್ಲಾ ಸಂದರ್ಭಗಳಲ್ಲೂ ನಮೂದಿಸಬೇಕೆಂದು ಕಿವಿಮಾತು ಹೇಳಿದರು.ಕರ್ನಾಟಕದ ಮಲೆನಾಡ ಪ್ರಾಂತ್ಯದಲ್ಲಿ ಹಾಗೂ ಮಧ್ಯಭಾಗದಲ್ಲಿ ಸಮೃದ್ಧ ಮಳೆಯಾಗಿ ಅನೇಕ ಜಲಾಶಯಗಳು ತುಂಬಿದ್ದು, ಭದ್ರಾ ಜಲಾಶಯ 4 ವರ್ಷಗಳ ನಂತರ ಭರ್ತಿಯಾಗಿದೆ. ಕೇರಳ ಕೊಡುಗುಳಲ್ಲಿ ಅತಿವೃಷ್ಠಿಯಿಂದ ಸಾಕಷ್ಟು ನಷ್ಟವುಂಟಾಗಿದ್ದು, ಶ್ರೀಪೀಠದಿಂದ 50 ಸಾವಿರ ರೂ.ಗಳನ್ನು ಸಂತ್ರಸ್ಥರಿಗೆ ನೆರವು ನೀಡಿದೆ ಎಂದರು.

           ಬಾದಾಮಿಯ ಶಿವಯೋಗಿ ಮಂದಿರದ ಡಾ.ಅಭಿನವ ಅನ್ನದಾನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ಸುಕ್ಷೇತ್ರ ಸಿದ್ಧರಬೆಟ್ಟದ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ ಉಪದೇಶಾಮೃತ ನೆರವೇರಿಸಿದರು. ನ್ಯಾಮತಿಯ ಶ್ರೀಮಲ್ಲೇಶ್ವರ ಟ್ರೇಡಿಂಗ್ ಕಂಪನಿಯ ಕೆ.ವಿ.ಮನೋಹರ ಅವರಿಗೆ ಎಂ.ಬಿ.ಗುರುಸಿದ್ದಸ್ವಾಮಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

         ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಹೆಚ್.ಬಿ.ಮಂಜುನಾಥ್ ಸಂಸ್ಕøತಿ ರಕ್ಷಣೆಯಲ್ಲಿ ಮಹಿಳೆಯರ ಪಾತ್ರ ವಿಷಯದ ಕುರಿತು ಉಪನ್ಯಾಸ ನೀಡಿದರು. ಹರಿಹರ ಎಸ್‍ಜೆವಿಪಿ ಕಾಲೇಜಿನ ಕಾರ್ಯದರ್ಶಿ ಶಕುಂತಲಯ್ಯ ಗುರುಸಿದ್ದಯ್ಯ, ದಾವಣಗೆರೆ ಅರ್ಬನ್ ಬ್ಯಾಂಕ್ ಉಪಾಧ್ಯಕ್ಷ ಕೋಗುಂಡಿ ಬಕ್ಕೇಶ್, ಪಾಲಿಕೆ ಆರೋಗ್ಯಾಧಿಕಾರಿ ಚಂದ್ರಶೇಖರ್ ಸುಂಖದ್, ಉಪ ಆಯುಕ್ತ ರವೀಂದ್ರ ಮಲ್ಲಾಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

                        ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap