ದಿಬ್ಬೂರು ವಸತಿಗೃಹ: ಫಲಾನುಭವಿಗಳ ಪರಿಶೀಲನೆ

ತುಮಕೂರು

    ತುಮಕೂರು ನಗರದ 6 ನೇ ವಾರ್ಡ್ ವ್ಯಾಪ್ತಿಯ ದಿಬ್ಬೂರು ಬಳಿ ರಾಜೀವ್ ಆವಾಸ್ ಯೋಜನೆಯಡಿ ನಿರ್ಮಿಸಿ, ಫಲಾನುಭವಿಗಳಿಗೆ ವಿತರಿಸಿರುವ 1200 ಮನೆಗಳ ಸಂಕೀರ್ಣದಲ್ಲಿ ಅಧಿಕಾರಿಗಳ ತಂಡವೊಂದು ನೈಜ ಫಲಾನುಭವಿಗಳೇ ಇಲ್ಲಿ ವಾಸವಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಪರಿಶೀಲನೆ ಆರಂಭಿಸಿದೆ.

     ಜಿಲ್ಲಾಧಿಕಾರಿಗಳ ಕಚೇರಿ, ತುಮಕೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಲಿಗೆ ಸೇರಿದ ಅಧಿಕಾರಿಗಳ ತಂಡ ಪ್ರಸ್ತುತ ಪರಿಶೀಲನೆ ನಡೆಸುತ್ತಿದೆ.

      ನಗರ ಪ್ರದೇಶದ ನಿರ್ವಸತಿಗರಿಗಾಗಿ ಈ 1200 ಮನೆಗಳನ್ನು ನಿರ್ಮಿಸಿ, ಫಲಾನುಭವಿಗಳಿಗೆ ವಿತರಿಸಲಾಗಿದೆ. ಬೆರಳೆಣಿಕೆಯ ಕೆಲವು ಮನೆಗಳು ಖಾಲಿ ಇರುವುದನ್ನು ಬಿಟ್ಟರೆ, ಮಿಕ್ಕೆಲ್ಲ ಮನೆಗಳಲ್ಲೂ ಜನರು ವಾಸವಿದ್ದಾರೆ. ಸುಮಾರು 4 ಸಾವಿರಕ್ಕೂ ಅಧಿಕ ಜನರು ಇಲ್ಲೀಗ ವಾಸವಿದ್ದಾರೆಂದು ಅಂದಾಜಿಸಲಾಗುತ್ತಿದೆ.

   ಆದರೆ ಯಾರಿಗೆ ಮನೆಗಳನ್ನು ಹಂಚಿಕೆ ಮಾಡಲಾಗಿದೆಯೋ ಅಂಥವರು ಇಲ್ಲಿ ವಾಸ ಮಾಡದೆ, ತಮಗೆ ಮಂಜೂರಾದ ಮನೆಗಳನ್ನು ಇತರರಿಗೆ ಬಾಡಿಗೆಗೆ/ ಲೀಸ್ ಗೆ ನೀಡಿದ್ದಾರೆ ಅಥವಾ ಒಂದಿಷ್ಟು ಲಕ್ಷ ಮೊತ್ತಕ್ಕೆ ಮಾರಾಟ ಮಾಡಿಬಿಟ್ಟಿದ್ದಾರೆ. ಜೊತೆಗೆ ಮನೆ-ನಿವೇಶನ ಇತ್ಯಾದಿ ಸೌಲಭ್ಯ ಹೊಂದಿರುವವರೂ ಇಲ್ಲಿ ಮನೆ ಪಡೆದಿದ್ದಾರೆಂಬ ವ್ಯಾಪಕ ದೂರುಗಳು ಜಿಲ್ಲಾಧಿಕಾರಿಗಳಿಗೆ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡುವಂತೆ ಆದೇಶ ನೀಡಿರುವುದರಿಂದ ಈ ಪರಿಶೀಲನೆ ನಡೆಯುತ್ತಿದೆ

       ಯಾವ ಮನೆಯಲ್ಲಿ ಯಾರು ವಾಸವಾಗಿದ್ದಾರೆ ಎಂಬುದನ್ನು ಅಧಿಕಾರಿಗಳ ತಂಡ ತಪಾಸಣೆ ಮಾಡುತ್ತಿದೆ. ಅಧಿಕೃತ ಪಟ್ಟಿಯ ಪ್ರಕಾರ ಯಾರಿಗೆ ಈ ಮನೆ ಮಂಜೂರಾಗಿದೆಯೋ, ಆ ಮನೆಯಲ್ಲಿ ಆ ಕುಟುಂಬವೇ ಇರಬೇಕು. ತಮ್ಮ ಪಡಿತರ ಕಾರ್ಡ್, ಆಧಾರ್ ಕಾರ್ಡ್ ಜೊತೆಗೆ ಮನೆ ಮಂಜೂರಾತಿ ಪತ್ರವನ್ನೂ ಹಾಜರುಪಡಿಸಬೇಕು.

       ಇಲ್ಲದಿದ್ದರೆ ಅಂತಹ ಮನೆಯನ್ನು ಅಧಿಕಾರಿಗಳ ತಂಡ ಗುರುತು ಹಾಕಿಕೊಳ್ಳಲಿದೆ. 1200 ಮನೆಗಳಿಗೂ ಇದೇ ರೀತಿ ಭೇಟಿ ನೀಡಿ ಖಚಿತ ಪಡಿಸಿಕೊಂಡು, ಜಿಲ್ಲಾಧಿಕಾರಿಗಳಿಗೆ ವರದಿ ಕೊಡಬೇಕಾಗಿದೆ. ಮುಂದಿನ ಸುಮಾರು 15-20 ದಿನಗಳ ಕಾಲ ಈ ಪರಿಶೀಲನೆ ಮುಂದುವರೆಯಲಿದೆ. ಈ ತಂಡ ನೀಡುವ ವರದಿಯನ್ನು ಅನುಸರಿಸಿ ಜಿಲ್ಲಾಧಿಕಾರಿಗಳು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.

ಪತ್ತೆಯಾಗಿದ್ದ ನಕಲಿ ವೈದ್ಯ

       ಇದೇ ವರ್ಷದ ಫೆಬ್ರವರಿಯಲ್ಲಿ ಅಧಿಕಾರಿಗಳ ತಂಡವೊಂದು ತಪಾಸಣೆ ಕೈಗೊಂಡಿದ್ದಾಗ, ಈ ಸಮುಚ್ಛಯದಲ್ಲೇ ನಕಲಿ ವೈದ್ಯನೊಬ್ಬ ಪತ್ತೆಯಾಗಿದ್ದನೆಂಬುದು ಈಗ ಬೆಳಕಿಗೆ ಬಂದಿದೆ. ಇಲ್ಲಿನ ಮನೆಯೊಂದರಲ್ಲಿ ಆತ ಅಕ್ರಮವಾಗಿ ಸೇರಿಕೊಂಡು, ಅನಧಿಕೃತವಾಗಿ ಔಷಧೋಪಚಾರ ಮಾಡುತ್ತಿದ್ದನೆಂದೂ, ತಪಾಸಣೆಗೆ ತೆರಳಿದ್ದ ಅಧಿಕಾರಿಗಳ ತಂಡದವರು ಸದರಿ ವೈದ್ಯನ ನೋಂದಣಿ ಸಂಖ್ಯೆ ಇತ್ಯಾದಿ ವಿಚಾರಿಸುತ್ತಿದ್ದಂತೆ ಆತ ಅಲ್ಲಿಂದ ಕಾಲ್ಕಿತ್ತನೆಂದೂ ಹೇಳಲಾಗುತ್ತಿದೆ.

ಕೆಲವು ನ್ಯೂನತೆಗಳು ಪತ್ತೆ

       ಪ್ರಸ್ತುತ ನಡೆದಿರುವ ತಪಾಸಣೆಯಲ್ಲೂ ಇಲ್ಲಿ ಹಲವು ನ್ಯೂನತೆಗಳು ಪತ್ತೆ ಆಗಿವೆಯೆನ್ನಲಾಗಿದೆ. ಅಧಿಕಾರಿಗಳ ತಂಡ ಭೇಟಿಯಾದಾಗ ಕೆಲವು ಮನೆಗಳಿಗೆ ಬೀಗ ಹಾಕಿರುವುದು ಕಂಡುಬಂದಿದೆ. ಕೆಲವು ಮನೆಗಳವರು ಸೂಕ್ತ ದಾಖಲಾತಿಗಳನ್ನು ಹಾಜರು ಪಡಿಸುತ್ತಿಲ್ಲ. ಮನೆಗಳಲ್ಲಿರುವವರು ತಾವು ಈ ಮನೆಯವರ ಸಂಬಂಧಿಕರು ಎಂದೆಲ್ಲ ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವೆಲ್ಲದರ ನಡುವೆ ಅಧಿಕಾರಿಗಳ ತಂಡ ಪರಿಶೀಲನೆ ಮುಂದುವರೆಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ