ತುಮಕೂರು
ಕರ್ನಾಟಕ ಬಂದ್‍ಗೆ ಕರೆ ನೀಡಿರುವ ವಿವಿಧ ರೈತ ಸಂಘಟನೆಗಳ ಬೆಂಬಲಕ್ಕೆ ಹಣ್ಣು ಮತ್ತು ತರಕಾರಿ ಸಗಟು ವರ್ತಕರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಈ ಕೂಡಲೇ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ವಾಪಸ್ ಪಡೆಯದೇ ಇದ್ದರೆ ರೈತರು ತೀವ್ರ ಗೊಂದಲದಲ್ಲಿ ಸಿಲುಕುತ್ತಾರೆ.
ರೈತರು ತೊಂದರೆಯಲ್ಲಿ ಸಿಲುಕಿದರೆ ನಾವು ಅಂದರೆ ತರಕಾರಿ ಸಗಟು ವ್ಯಾಪಾರಸ್ಥರು ತೊಂದರೆಗೆ ಸಿಲುಕುತ್ತೇವೆ. ರೈತರು ನಮ್ಮ ಬೆನ್ನೆಲುಬಾಗಿದ್ದು, ನಾವು ರೈತರಿಗೆ ಬೆನ್ನೆಲುಬಾಗಿದ್ದೇವೆ. ಆದ್ದರಿಂದ ಸರ್ಕಾರ ಈ ಕೂಡಲೇ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆಯನ್ನು ಹಿಂಪಡೆಯಬೇಕೆಂದು ತರಕಾರಿ ಮತ್ತು ಹಣ್ಣು ಸಗಟು ವರ್ತಕರ ಸಂಘದ ಅಧ್ಯಕ್ಷ ಆರ್.ವಿ.ಗೋಪಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕರ್ನಾಟಕ ಅಣ್ಣಾ ಡಿಎಂಕೆ ಬೆಂಬಲ:
ರೈತ ಸಂಘಟನೆಗಳು ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಅಣ್ಣಾ ಡಿಎಂಕೆ ತನ್ನ ಬೆಂಬಲ ವ್ಯಕ್ತಪಡಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ಧ ಇಂದು ನಡೆಸುತ್ತಿರುವ ಕರ್ನಾಟಕ ಬಂದ್‍ಗೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಕೆಜಿಎಫ್, ಶಿವಮೊಗ್ಗ, ಬಳ್ಳಾರಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕರ್ನಾಟಕ ಅಣ್ಣಾ ಡಿಎಂಕೆ ಪಕ್ಷವು ಬಂದ್ ನಡೆಸುತ್ತದೆ ಎಂದು ಕಾರ್ಯದರ್ಶಿ ಕೆ.ಆರ್.ಕೃಷ್ಣರಾಜು ತಿಳಿಸಿದ್ದಾರೆ.
ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಬೆಂಬಲ :
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಂಗೀಕರಿಸಿರುವ ಎಪಿಎಂಸಿ ಕಾಯ್ದೆ ತಿದ್ದುಪಡಿ, ಅಗತ್ಯ ವಸ್ತುಗಳ ಕಾಯ್ದೆ ತಿದ್ದುಪಡಿ, ಗುತ್ತಿಗೆ ಕಾಯ್ದೆ, ವಿದ್ಯುಚ್ಛಕ್ತಿ ಕಾಯ್ದೆ 2020 ರ ತಿದ್ದುಪಡಿ, ಬೆಂಬಲ ಬೆಲೆ ಕಾಯ್ದೆ ತಿದ್ದುಪಡಿಗಳ ವಿರುದ್ಧ ಮತ್ತು ರಾಜ್ಯ ಬಿಜೆಪಿ ನೇತೃತ್ವದ ಸರ್ಕಾರವು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿಗಳ ವಿರುದ್ಧ ಅಖಿಲ ಭಾರತ ಕಿಸಾನ್ ಸಮನ್ವಯ ಸಮಿತಿಯು ಕರೆ ನೀಡಿರುವ ಇಂದಿನ ಕರ್ನಾಟಕ ಬಂದ್ ಹೋರಾಟಕ್ಕೆ ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷವು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಭಾರತ ಕಮ್ಯೂನಿಸ್ಟ್ ಪಕ್ಷ ಬೆಂಬಲ :
ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ –ಕರ್ನಾಟಕವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ಹಾಗೂ ಜನ ವಿರೋಧಿ ಕೃಷಿ ಮಸೂದೆಗಳನ್ನು ಪ್ರತಿರೋಧಿಸಿ ಇಂದು ಸ್ವಯಂ ಪ್ರೇರಣೆಯ ಕರ್ನಾಟಕ ಬಂದ್ ನಡೆಸಲು ಕರೆ ನೀಡಿದೆ. ಈ ಕರೆಯು ಸಮಾಜದ ಅನ್ನದಾತರಾದ ರೈತರ ಸಂಕಷ್ಟಕ್ಕೆ ಪರಿಹಾರ ಕಾಣಲು ಸರ್ಕಾರಗಳನ್ನು ಒತ್ತಾಯಿಸಲು ನಡೆಸುತ್ತಿರುವ ಈ ಹೋರಾಟಕ್ಕೆ ಎಲ್ಲರೂ ಬೆಂಬಲಿಸುವುದು ಆದ್ಯ ಕರ್ತವ್ಯವಾಗಿದೆ, ಸಿಪಿಐ ಎಂ ತುಮಕೂರು ಜಿಲ್ಲಾ ಸಮಿತಿಯು ಈ ಹೋರಾಟಕ್ಕೆ ತನ್ನ ಬೆಂಬಲ ಸೂಚಿಸಿದೆ.
ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಬೆಂಬಲ :
ಕೇಂದ್ರ ಸರ್ಕಾರ ಕೈಗೊಂಡಿರುವ ರೈತ ಕಾರ್ಮಿಕ ತಿದ್ದುಪಡಿಗಳು ಹಾಗೂ ರಾಜ್ಯ ಸರ್ಕಾರ ವಿಧಾನಸಭೆಯಲ್ಲಿ ಅಂಗೀಕರಿಸಿರುವ ಎಪಿಎಂಸಿ ಕಾನೂನು ತಿದ್ದುಪಡಿ ಹಾಗೂ ಭೂ ಸುಧಾರಣಾ ಕಾನೂನು ತಿದ್ದುಪಡಿಗಳನ್ನು ವಿರೋಧಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಕರ್ನಾಟಕವು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ಹಾಗೂ ಜನ ವಿರೋಧಿ ಕೃಷಿ ಮಸೂದೆಗಳನ್ನು ಪ್ರತಿರೋಧಿಸಿ ಇಂದು ನಡೆಸುತ್ತಿರುವ ಸ್ವಯಂ ಪ್ರೇರಣೆಯ ಕರ್ನಾಟಕ ಬಂದ್‍ಗೆ ಸೆಂಟರ್ ಆಫ್ ಯೂನಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಖಜಾಂಚಿ ಎ.ಲೋಕೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಜಿ.ಕಮಲ ಅವರುಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ