ದಾವಣಗೆರೆ:
ಕಳೆದ 3 ದಶಕಗಳಿಂದ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಹಾಗೂ ಮೌಲ್ಯಾಧಾರಿತ ಶಿಕ್ಷಣ ನೀಡುವ ಮುಖೇನಾ ಹೆಸರುವಾಸಿಯಾದ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿವಿ ಅಧ್ಯಯನ ಕೇಂದ್ರ 2019ನೇ ಸಾಲಿನ ಕೋರ್ಸ್‍ಗಳಿಗೆ ನೋಂದಣಿಗಾಗಿ ಆಹ್ವಾನಿಸಿದೆ ಎಂದು ಕೇಂದ್ರದ ಬೆಂಗಳೂರು ವಿಭಾಗೀಯ ಕಚೇರಿ ಸಹಾಯಕ ವಿಭಾಗೀಯ ನಿರ್ದೇಶಕ ಡಾ. ಷಣ್ಮುಗಂ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1985ರಲ್ಲಿ ನವದೆಹಲಿಯಲ್ಲಿ ಆರಂಭವಾದ ಈ ವಿವಿಯು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ 1987ರಲ್ಲಿ ತನ್ನ ಶಾಖೆ ಆರಂಭಿಸಿ ಈವರೆಗೆ ಉತ್ತನ ಪದವಿ, ಡಿಪ್ಲೋಮಾ ಮತ್ತು ಪ್ರಮಾಣ ಪತ್ರಗಳ ಕೋರ್ಸ್ ಹಾಗೂ ಆಧುನಿಕ ನವೀನ ಅಧ್ಯಯನಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸರ್ವತೋಮುಖ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸುತ್ತಿದೆ ಎಂದರು.
64 ಪ್ರಾದೇಶಿಕ ಕಚೇರಿ, 3000 ಕ್ಕೂ ಅಧಿಕ ಅಧ್ಯಯನ ಕೇಂದ್ರ ಹೊಂದಿದ್ದು, ದಾವಣಗೆರೆಯಲ್ಲಿ 1995ರಲ್ಲಿ ಕಾರ್ಯಾರಂಭ ಮಾಡಲಾಗಿದ್ದು, ಈಗಾಗಲೇ ಜಿಲ್ಲೆಯಿಂದ 4 ಸಾವಿರ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ನೀಡಿದೆ. ಜಿಲ್ಲೆಯಲ್ಲಿ 34 ಕೋರ್ಸ್‍ಗಳಿದ್ದು, ಈ ಕೋರ್ಸ್‍ಗಳಿಗೆ ನೋಂದಣಿಯಾಗಿ ದೇಶದ ಯಾವುದೇ ಭಾಗದಲ್ಲಿಯೂ ಪರೀಕ್ಷೆ ಬರೆಯುವ ಅವಕಾಶ ನೀಡಿದೆ. ಅಲ್ಲದೆ, ತ್ರಿಲಿಂಗಿಗಳು, ಶಿಕ್ಷಣ ವಂಚಿತರು ಹಾಗೂ ಎಸ್ಸಿ,ಎಸ್ಟಿಯವರಿಗೆ ಉಚಿತ ಅಡ್ಮಿಷನ್ ಕಲ್ಪಿಸಿದೆ ಎಂದ ಅವರು, 2019ನೇ ಸಾಲಿನ ಶೈಕ್ಷಣಿಕ ವರ್ಷದ ನೋಂದಣಿ ಪ್ರಾರಂಭವಾಗಿದ್ದು, 2019ರ ಜನವರಿ 15 ಕೊನೆ ದಿನವಾಗಿದ್ದು, ನೋಂದಣಿ ಮಾಡಿಕೊಳ್ಳಲು ವಿವಿ ವೆಬ್ಸೈಟ್ ಮೂಲಕ ನೋಂದಣಿ ಮಾಡಬಹುದು ಹಾಗೂ ಹೆಚ್ಚಿನ ಮಾಹಿತಿಗೆ ದಾವಣಗೆರೆ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ಅಧ್ಯಯನ ಕೇಂದ್ರ ಸಂಪರ್ಕಿಸಬಹುದು ಎಂದರು.
ಸುದ್ದಿಗೋಷ್ಠಿಯಲ್ಲಿ ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ, ಸಂಯೋಜಕ ಪ್ರೊ.ಎಸ್.ಬಿ.ಮಲ್ಲಿಕಾರ್ಜುನ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ