ರೋಗಿಗಳ ತ್ವರಿತ ಸೇವೆಗಾಗಿ  ಡಿಜಿಟಲ್ ನರ್ವ್ ಸೆಂಟರ್..!

ತುಮಕೂರು:

      ರೋಗಿಗಳ ತ್ವರಿತ ಸೇವೆಗಾಗಿ ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ಸಂಸ್ಥೆಯು ಡಿಜಿಟಲ್ ನರ್ವ್ ಸೆಂಟರ್ ಅನ್ನು ಶೀಘ್ರದಲ್ಲೇ ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ.
     ಜನರು, ತಂತ್ರಜ್ಞಾನ ಹಾಗೂ ಪ್ರಕ್ರಿಯೆಗಳ ಸಂಯೋಜನೆ ಆಧಾರದಡಿ ಪರಸ್ಪರ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿರುವ ಈ ಡಿಜಿಟಲ್ ನರ್ವ್ ಸೆಂಟರ್ ಯೋಜನೆಯನ್ನು 2.27 ಕೋಟಿ ರೂ.ವೆಚ್ಚದಲ್ಲಿ  ಕೈಗೊಳ್ಳಲಾಗಿದ್ದು, ಕೆಲವೇ ದಿನಗಳಲ್ಲಿ ಚಾಲನೆಗೊಳ್ಳಲಿದೆ.ಗಂಭೀರ ಪರಿಸ್ಥಿತಿಯಲ್ಲಿರುವ ನಗರ ವ್ಯಾಪ್ತಿಯೊಳಗಿನ ರೋಗಿಗಳಿಗೆ ತ್ವರಿತವಾಗಿ ಆರೋಗ್ಯ ಸೇವೆ ಒದಗಿಸುವ ಯೋಜನೆ ಇದಾಗಿದೆ. ರೋಗಿಗಳು ಡಿಜಿಟಲ್ ನರ್ವ್ ಸೆಂಟರ್ ಟೋಲ್ ಫ್ರೀ ಸಂಖ್ಯೆ 1800-425-4325ಕ್ಕೆ ಕರೆ ಮಾಡಿ ತಮ್ಮ ರೋಗದ ಬಗ್ಗೆ ಮಾಹಿತಿ ನೀಡಿದಲ್ಲಿ ಸೆಂಟರ್‍ನಲ್ಲಿರುವ ಆರೋಗ್ಯ ಸೇವಾ ಕಾರ್ಯಕರ್ತರು ತ್ವರಿತವಾಗಿ ವೈದ್ಯಕೀಯ ಸಲಹೆ ನೀಡುವುದರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆರೋಗ್ಯ ಸೇವಾ ಕೇಂದ್ರಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ   ಹಾಗೂ ಜಿಲ್ಲಾಸ್ಪತ್ರೆಗೆ ದಾಖಲಾಗಲು ಮಾರ್ಗದರ್ಶನ ನೀಡಲಿದ್ದಾರೆ. 
     ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದು, ವೈದ್ಯಕೀಯ ಚಿಕಿತ್ಸೆ ಕೊಡಿಸುವುದು, ಚಿಕಿತ್ಸೆಯ ಅವಧಿ ಪೂರ್ಣಗೊಂಡು ಗುಣಮುಖ ರಾಗುವವರೆಗೂ ಈ ಆರೋಗ್ಯ ಸೇವಾ ಕಾರ್ಯಕರ್ತರು ರೋಗಿಯ ಮೇಲೆ ನಿಗಾವಹಿಸಲಿದ್ದಾರೆ.ಮೊದಲ ಹಂತದಲ್ಲಿ ತುಮಕೂರು ನಗರದ ಆಯ್ದ 7 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆ ಮೂಲಕ ಒಂದೇ ಸಂಕೀರ್ಣದಡಿ ನರ್ವ್ ಸೆಂಟರ್ ಕಾರ್ಯನಿರ್ವಹಿಸಲಿದೆ.   ವಿಶೇಷವೆಂದರೆ ನರ್ವ್ ಸೆಂಟರ್ ಮೂಲಕ ದಾಖಲಾದ ರೋಗಿಗಳ ವೈದ್ಯಕೀಯ ದತ್ತಾಂಶವನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಗೊಳಿಸಲಾಗುವುದು.  ಈ ಸೆಂಟರ್‍ನ ಎಲ್ಲ ಸೇವೆಗಳು ಉಚಿತವಾಗಿರುತ್ತವೆ.
    ಇದಕ್ಕಾಗಿ ಸ್ಮಾರ್ಟ್ ಸಿಟಿ ಸಂಸ್ಥೆಯು ಆಶಾ ಸಿಬ್ಬಂದಿಗಳಿಗೆ ತರಬೇತಿ ನೀಡುವುದರೊಂದಿಗೆ 29 ಟ್ಯಾಬ್‍ಗಳನ್ನು ಪೂರೈಕೆ ಮಾಡಲಿದ್ದು, ಸೆಂಟರ್ ನಿರ್ವಹಣೆಗೆ ಅಗತ್ಯವಿರುವ ತಾಂತ್ರಿಕ ಮಾನವ ಶಕ್ತಿ, ಮೂಲಸೌಕರ್ಯಕ್ಕೆ ತಗಲುವ ವೆಚ್ಚವನ್ನು ಸಂಪೂರ್ಣವಾಗಿ ತಾನೇ ಭರಿಸಲಿದೆ.  ಉಳಿದಂತೆ ಅಗತ್ಯ ಆರೋಗ್ಯ ಸೇವೆಯನ್ನು ಜಿಲ್ಲಾಸ್ಪತ್ರೆಯಿಂದ ಒದಗಿಸಲಾಗುವುದು.  
 
    ಈ ಯೋಜನೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪುನರುಜ್ಜೀವನವಾಗುವುದರೊಂದಿಗೆ  ಜಿಲ್ಲಾಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಇಳಿಮುಖವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಳಕೆ ಹೆಚ್ಚಾಗಲಿದೆ.    ಅಲ್ಲದೆ ಹೊರರೋಗಿ ವಿಭಾಗಗಳಲ್ಲಿ(ಒಪಿಡಿ) ಜನಸಂದಣಿಯ ಸಾರ್ವತ್ರಿಕ ಸಮಸ್ಯೆಯನ್ನು ನಿವಾರಿಸಲು ನೆರವಾಗಲಿದೆ ಎಂದು ಸ್ಮಾರ್ಟ್ ಸಿಟಿ ಸಂಸ್ಥೆಯ ಪ್ರಭಾರಿ ವ್ಯವಸ್ಥಾಪಕ ನಿರ್ದೇಶಕ ವಿ. ಅಜಯ್ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap