ದಾವಣಗೆರೆ:
ಯುವ ಬ್ರಿಗೇಡ್ ಹಾಗೂ ಸೋದರಿ ನಿವೇದಿತಾ ಪ್ರತಿಷ್ಠಾನದಿಂದ ದೇಶಾದ್ಯಂತ ಸಂಚರಿಸುತ್ತಿರುವ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ನಾಳೆ (ಅ.6ರಂದು) ನಗರಕ್ಕೆ ಆಗಮಿಸಲಿದೆ ಎಂದು ಬ್ರಿಗೇಡ್‍ನ ಚಂದ್ರಮೋಹನ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1893ರಲ್ಲಿ ನಡೆದ ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಮಾಡಿರುವ ಉಪನ್ಯಾಸಕ್ಕೆ 125 ವರ್ಷ ತುಂಬಿರುವ ಹಿನ್ನೆಲೆಯಲ್ಲಿ ಅವರ ವಿಚಾರಧಾರೆಗಳನ್ನು ಇಂದಿನ ಯುವಕರಲ್ಲಿ ತುಂಬುವ ಉದ್ದೇಶದಿಂದ ದೇಶಾದ್ಯಂತ ಸಂಚರಿಸುತ್ತಿರುವ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆ ನಾಳೆ ಮಧ್ಯಾಹ್ನ ಹರಿಹರದ ಮೂಲಕ ದೊಡ್ಡ ಬಾತಿಗೆ ಆಗಮಿಸಿ ನಂತರ ನಗರವನ್ನು ಪ್ರವೇಶಿಸಲಿದೆ ಎಂದರು.
ಮಧ್ಯಾಹ್ನ 2 ಗಂಟೆಗೆ ನಗರದ ಪಿಬಿ ರಸ್ತೆಯಲ್ಲಿರುವ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ರಥಯಾತ್ರೆ ಬಂದು ತಲುಪಲಿದೆ. ವೃತ್ತಲ್ಲಿರುವ ರಾಯಣ್ಣರ ಪುತ್ಥಳಿಗೆ ಬ್ರಿಗೇಡ್‍ನ ಮಾರ್ಗದರ್ಶಕ ಸೂಲಿಬೆಲೆ ಚಕ್ರವರ್ತಿ ಮಾಲಾರ್ಪಣೆ ಮಾಡಲಿದ್ದಾರೆ. ಅಲ್ಲಿಂದ ಬೈಕ್ ರ್ಯಾಲಿಯ ಮೂಲಕ ಬಕ್ಕೇಶ್ವರ ಕಲ್ಯಾಣ ಮಂಟಪದ ಮೂಲಕ ಎಂಸಿಸಿ ಎ ಬ್ಲಾಕ್‍ನಲ್ಲಿರುವ ರಾಮಕೃಷ್ಣ ಆಶ್ರಮವನ್ನು ರಥಯಾತ್ರೆ ತಲುಪಲಿದೆ. ಬಳಿಕ ಮಧ್ಯಾಹ್ನ 3 ಗಂಟೆಗೆ ಆಶ್ರಮದ ಆವರಣದಿಂದ ಸೂಲಿಬೆಲೆ ಚಕ್ರವರ್ತಿ ಹಾಗೂ ರಾಮಕೃಷ್ಣ ಮಿಷನ್‍ನ ಕಾರ್ಯದರ್ಶಿ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್ ಅವರುಗಳ ನೇತೃತ್ವದಲ್ಲಿ ಆರಂಭವಾಗುವ ಬೃಹತ್ ಶೋಭಾಯಾತ್ರೆಯು ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಸೋಮೇಶ್ವರ ವಿದ್ಯಾಲಯದ ಆವರಣರ ತಲುಪಲಿದೆ ಎಂದು ಮಾಹಿತಿ ನೀಡಿದರು.
ಬಳಿಕ ಸೋಮೇಶ್ವರ ವಿದ್ಯಾಲಯದ ಆವರಣದಲ್ಲಿ ಸಂಜೆ 5.45ಕ್ಕೆ ನಡೆಯಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ದಿಕ್ಸೂಚಿ ಭಾಷಣ ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 8 ಸಾವಿರಕ್ಕೂ ಹೆಚ್ಚುಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ರಿಗೇಡ್ ಹಾಗೂ ಪ್ರತಿಷ್ಠಾನದ ಕಾರ್ತಿಕ್, ಪವನ್, ಶ್ರೀರಕ್ಷ, ಮನೋಜ್, ಮೇಘರಾಜ್, ನಿಖಿಲ್ ಮತ್ತಿತರರು ಹಾಜರಿದ್ದರು.