ದಿನೇ, ದಿನೇ ಪಾತಾಳ ಸೇರುತ್ತಿರುವ ಅಂತರ್ಜಲ…!!!

ದಾವಣಗೆರೆ

      ವರ್ಷದಿಂದ ವರ್ಷಕ್ಕೆ ಮಳೆ ಕೊರತೆ ಪ್ರಮಾಣ ಕಡಿಮೆಯಾಗುತ್ತಿರುವ ಹಾಗೂ ವಿವೇಚನೆ ಇಲ್ಲದೇ ಅತೀ ಹೆಚ್ಚು ನೀರು ಬಳಕೆ ಮಾಡುತ್ತಿರುವ ಕಾರಣಕ್ಕೆ ದಿನೇ, ದಿನೇ ಜಿಲ್ಲೆಯ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಹನಿ ನೀರಿಗೂ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.

      ಹೌದು… ಅಂತರ್ಜಲ ಎನ್ನುವುದು ನಾವು ಬ್ಯಾಂಕ್‍ನಲ್ಲಿ ಹೊಂದಿರುವ ಉಲಿತಾಯ ಖಾತೆ ಇದ್ದಂತೆ, ಆ ಖಾತೆಗೆ ನಾವು ಆಗಾಗ ಹಣ ಜಮೆ ಮಾಡಿದರೆ ಮಾತ್ರ ಆ ಖಾತೆಯಿಂದ ಹಣ ಹಿಂತೆಗೆದುಕೊಳ್ಳಬಹುದು. ಆದರೆ, ಖಾತೆಯೇ ಬರಿದಾದರೆ ಹಣ ಹಿಂಪಡೆಯಲು ಹೇಗೆ ಸಾಧ್ಯವಿಲ್ಲವೋ. ಅದೇರೀತಿ ನಾವು ಈಗ ಅಂತರ್ಜಲ ಎಂಬ ಖಾತೆಯನ್ನು ಬರಿದು ಮಾಡಲು ಮುಂದಾಗಿದ್ದು, ಅದನ್ನು ಮರುಪೂರ್ಣ ಮಾಡಲು ಮುಂದಾಗಿಲ್ಲ. ಹೀಗಾಗಿ ಅಂತರ್ಜಲ ಮಟ್ಟ ದಿನದಿಂದ ದಿನಕ್ಕೆ ಪಾತಾಳ ಸೇರುತ್ತಿದೆ.

      ಜಿಲ್ಲೆಯಲ್ಲೂ ಅಂತರ್ಜಲ ಮಟ್ಟದಲ್ಲಿ ತೀವ್ರ ಕುಸಿತ ಕಂಡು ಬರುತ್ತಿದೆ. ಈ ವರ್ಷದಲ್ಲಿ ಜನವರಿ ತಿಂಗಳಿಗೆ ಹೋಲಿಸಿದರೆ, ಫೆಬ್ರವರಿ ತಿಂಗಳಲ್ಲಿ ಎಲ್ಲ ತಾಲೂಕುಗಳಲ್ಲೂ ಅಂತರ್ಜಲ ಮತ್ತಷ್ಟು ಕುಸಿದಿದೆ. ದಾವಣಗೆರೆ ತಾಲೂಕಿನಲ್ಲಿ ಜನವರಿ ತಿಂಗಳಲ್ಲಿ 17.17 ಮೀಟರ್ ನಷ್ಟಿದ್ದ ಅಂತರ್ಜಲ ಮಟ್ಟವು ಫೆಬ್ರವರಿಯಲ್ಲಿ 17.19 ಮೀಟರ್‍ಗೆ ಕುಸಿದಿದೆ. ಹರಿಹರ 4.30 ಮೀಟರ್ ನಷ್ಟಿದ್ದ ಅಂತರ್ಜಲ ಮಟ್ಟ 5.02 ಮೀಟರ್‍ಗೆ, ಚನ್ನಗಿರಿ 8.56 ಮೀಟರ್‍ನಿಂದ ರಿಂದ 9.08 ಮೀಟರ್‍ಗೆ, ಜಗಳೂರು ತಾಲೂಕಲ್ಲಿ 24.58 ಮೀಟರ್ ನಷ್ಟಿದ್ದ ಅಂತರ್ಜಲ ಮಟ್ಟವು 25.03 ಮೀಟರ್‍ಗೆ ಕುಸಿದಿದೆ. ಆದರೆ, ಹೊನ್ನಾಳಿ ತಾಲೂಕಿನಲ್ಲಿ ನದಿಗೆ ನೀರು ಬಿಟ್ಟಿದ್ದರಿಂದ ಅಂತರ್ಜಲ ಮಟ್ಟದಲ್ಲಿ ಅಷ್ಟು ಕುಸಿತ ಕಂಡುಬಂದಿಲ್ಲ ಎನ್ನುತ್ತಾರೆ ಪ್ರಭಾರ ಹಿರಿಯ ಭೂ ವಿಜ್ಞಾನಿ ಆರ್.ಬಸವರಾಜಪ್ಪ.

     ಹೀಗೆ ದಿನದಿಂದ ದಿನಕ್ಕೆ ಅಂರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಸುಮಾರು ಸಾವಿರ ಅಡಿಯ ವರೆಗೂ ಕೊಳವೆ ಬಾವಿ ಕೊರೆದರೂ ಸಹ ನೀರಿನ ಲವಲೇಷ ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲೂ ಜಲ ಮರು ಪೂರಣದ ಕಡೆಗೆ ಒತ್ತು ನೀಡದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲೆ ಜಲ ಕ್ಷಾಮಕ್ಕೆ ತುತ್ತಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎನ್ನುತ್ತಾರೆ ಅವರು.

      ಸಾವಿರ ಅಡಿ ಕೊರೆದರೂ ಕುಡಿಯಲಿಕ್ಕೂ ನೀರು ಸಿಗುತ್ತಿಲ್ಲ. ಕೃಷಿ ಬೋರ್‍ವೆಲ್‍ಗಳೂ ಕೂಡ ಬತ್ತಿ ವ್ಯವಸಾಯ ಚಟುವಟಿಕೆಯ ಮೇಲೂ ಸಹ ದುಷ್ಪರಿಣಾಮ ಬೀರುತ್ತಿದೆ. ಜಿಲ್ಲೆಯ ನದಿ ತೀರದ ನೀರಾವರಿ ಪ್ರದೇಶ ಹೊರತು ಪಡಿಸಿದರೆ, ಉಳಿದ ಕಡೆ ಗಂಭೀರ ಪರಿಸ್ಥಿತಿಯಿದೆ. ಅಂತರ್ಜಲ ಮಟ್ಟವನ್ನು ಅಳೆಯಲು ಹರಪನಹಳ್ಳಿ ಸೇರಿ ಜಿಲ್ಲೆಯಲ್ಲಿ 82 ಕೊಳವೆಬಾವಿ ಹಾಗೂ ತೆರೆದ ಬಾವಿಗಳಿವೆ. ಚನ್ನಗಿರಿ ಭಾಗದಲ್ಲಿ ತೆರೆದ ಬಾವಿಗಳು ಹೆಚ್ಚಿವೆ.

       ಜಗಳೂರು ತಾಲೂಕಲ್ಲಿ 15 ಬೋರ್‍ವೆಲ್‍ಗಳಿದ್ದು ಇದರಲ್ಲಿ 8 ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಉಳಿದ ಏಳರಲ್ಲಿ ಮಾತ್ರ ಪರೀಕ್ಷೆ ನಡೆಯುತ್ತದೆ. ಪ್ರತಿ ತಿಂಗಳು ಎಲ್ಲ ಬೋರ್‍ವೆಲ್‍ಗಳಲ್ಲಿ ಅಂತರ್ಜಲ ಮಟ್ಟ ಪರೀಕ್ಷೆ ನಡೆಸಿ ಮಟ್ಟವನ್ನು ಅಳತೆ ಮಾಡಲಾಗುತ್ತಿದ್ದು, ಪ್ರದೇಶದಿಂದ ಪ್ರದೇಶಕ್ಕೆ ಅಂತರ್ಜಲ ಮಟ್ಟದಲ್ಲಿ ಭಾರಿ ಪ್ರಮಾಣದ ವ್ಯತ್ಯಾಸ ಕಂಡು ಬರುತ್ತಿದೆ.

         ಅಂತರ್ಜಲ ಅಂತರ್ಜಲ ಕುಸಿತದಲ್ಲಿ ಜಗಳೂರು ಪ್ರಥಮ ಸ್ಥಾನದಲ್ಲಿದ್ದರೆ ನಂತರ ಹರಪನಹಳ್ಳಿ, ದಾವಣಗೆರೆ ತಾಲೂಕುಗಳಿವೆ. ಹೊಳೆ ತೀರದ ಹೊನ್ನಾಳಿ, ಹರಿಹರ ತಾಲೂಕುಗಳ ಪರಿಸ್ಥಿತಿ ಪರವಾಗಿಲ್ಲ. ಆದರೆ, ಇನ್ನುಳಿದೆಡೆ ಅಂತರ್ಜಲ ಮಟ್ಟ ಭಾರಿ ಕುಸಿದಿದೆ.

        2013-14ರಿಂದ 2015-16 ರವರೆಗೆ ಅಂತರ್ಜಲ ಕುಸಿತ ಅಷ್ಟಾಗಿ ಕಂಡು ಬಂದಿಲ್ಲ. ಆದರೆ 2016-17ರಲ್ಲಿ ಬಯಲು ಸೀಮೆ ತಾಲೂಕುಗಳಾದ ದಾವಣಗರೆ, ಹರಪನಹಳ್ಳಿ, ಜಗಳೂರು ತಾಲೂಕು ಮತ್ತು ಚನ್ನಗಿರಿ ತಾಲೂಕಿನ ಕೆಲ ಭಾಗದಲ್ಲಿ ಎರಡರಿಂದ ಮೂರು ಮೀಟರ್ ಆಳಕ್ಕೆ ಕುಸಿದಿದೆ.

        2017-18 ಅಂದರೆ ಕಳೆದ ವರ್ಷ ಭದ್ರಾ ಚಾನಲ್‍ನಲ್ಲಿ ನೀರೂ ಕೂಡ ಹರಿಸದ ಕಾರಣ ಅಂತರ್ಜಲ ಮಟ್ಟ ಇನ್ನಷ್ಟು ಕೆಳಗಿಳಿದಿದೆ. 2018-19 ರಲ್ಲಿ ನದಿ ಹಲವು ದಿನಗಳ ಕಾಲ ತುಂಬಿ ಹರಿದಿದ್ದು, ಮುಂಗಾರು ಮತ್ತು ಬೇಸಿಗೆ ಬೆಳೆಗೆ ಒಟ್ಟು ಆರು ತಿಂಗಳು ಭದ್ರಾ ಚಾನಲ್‍ನಲ್ಲಿ ನೀರು ಹರಿಸಿದ್ದರಿಂದ ನೀರಾವರಿ ಭಾಗವೂ ಸೇರಿ ಜಿಲ್ಲೆಯಲ್ಲಿ ಒಂದಿಷ್ಟು ಅಂತರ್ಜಲ ಮಟ್ಟದಲ್ಲಿ ಏರಿಕೆ ಆಗಿದೆ. ಆದರೆ, ಜನವರಿ ತಿಂಗಳ ನಂತರ ನಿರಂತರ ಕುಸಿತ ಕಂಡಿದ್ದು, ಬೋರ್‍ವೆಲ್‍ಗಳೂ ಸಹ ಬತ್ತಿ ಹೋಗುತ್ತಿವೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap