ಕಾಂಗ್ರೆಸ್‍ನಲ್ಲಿ ಉಂಟಾಗಿದ್ದ ಅತೃಪ್ತಿ ಬಹುತೇಕ ಶಮನ

ಬೆಂಗಳೂರು

        ಕಾಂಗ್ರೆಸ್‍ನಲ್ಲಿ ಉಂಟಾಗಿದ್ದ ಅತೃಪ್ತಿ ಬಹುತೇಕ ಶಮನಗೊಂಡಿದೆ. ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಹಿರಿಯ ಶಾಸಕ ರಾಮಲಿಂಗಾರೆಡ್ಡಿ, ಭೀಮಾನಾಯ್ಕ್, ಸುಧಾಕರ್ ಸೇರಿದಂತೆ ಹಲವು ಶಾಸಕರೊಂದಿಗೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ನಡೆಸಿದ ಮಾತುಕತೆ ಫಲ ನೀಡಿದೆ.

        ಮಂಗಳವಾರ ಬೆಳಗ್ಗೆ ಸಿದ್ದರಾಮಯ್ಯ ನಿವಾಸದಲ್ಲಿ ರಾಮಲಿಂಗಾರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದು, ತಮಗಾಗಿದ್ದ ಅಸಮಾಧಾನವನ್ನು ರೆಡ್ಡಿ ಅವರು ತೋಡಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲರಿಗೂ ಸ್ಥಾನಮಾನ ನೀಡಲು ಸಾಧ್ಯವಾಗಿಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

          ಕಳೆದೆರಡು ದಿನಗಳಿಂದ ರಾಮಲಿಂಗಾರೆಡ್ಡಿ ಪರವಾಗಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಸಾಮೂಹಿಕ ರಾಜಿನಾಮೆ ನೀಡುವುದಾಗಿ ಕೆಲವು ಕಾರ್ಪೊರೇಟರ್‍ಗಳು ಬೆದರಿಕೆ ಹಾಕಿದ್ದರು. ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಅಂತಹ ಯಾವ ಬೆಳವಣಿಗೆಗಳು ನಡೆಯುವ ಸಾಧ್ಯತೆ ಇಲ್ಲ. 

        ಸಚಿವಾಕಾಂಕ್ಷಿಗಳಾಗಿದ್ದ ಸುಧಾಕರ್, ಭೀಮಾನಾಯ್ಕ್ ಅವರೂ ಕೂಡ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿದ್ದು, ಅವರ ಮನವೊಲಿಕೆ ಯತ್ನವು ಸಫಲಗೊಂಡಿದೆ. ಇನ್ನೂ ಹಲವು ಶಾಸಕರೊಂದಿಗೆ ಸಿದ್ದರಾಮಯ್ಯ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಭಿನ್ನಮತ ಉಲ್ಬಣಗೊಳ್ಳದಂತೆ ನಾಯಕರು ಎಲ್ಲಾ ರೀತಿಯ ಕ್ರಮ ವಹಿಸಿದ್ದಾರೆ. ಅತ್ತ ಆನಂದ್‍ಸಿಂಗ್ ಜೊತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತುಕತೆ ನಡೆಸಿದ್ದಾರೆ. ಬಳ್ಳಾರಿಯ ಜಿಂದಾಲ್ ಸ್ಟೀಲ್ ಫ್ಯಾಕ್ಟರಿ ಬಳಿ ಇರುವ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ ಆನಂದ್ ಸಿಂಗ್ ಜೊತೆ ಮಾತುಕತೆ ನಡೆಸಿದ್ದು, ಅಸಮಾಧಾನಗೊಂಡಿದ್ದ ಆನಂದ್‍ಸಿಂಗ್ ಕೂಡ ತಣ್ಣಗಾಗಿದ್ದಾರೆ ಎಂದು ಹೇಳಲಾಗಿದೆ.

           ಒಟ್ಟಾರೆ ಸಂಪುಟ ವಿಸ್ತರಣೆ, ಪುನಾರಚನೆಯಿಂದ ಕಾಂಗ್ರೆಸ್‍ನಲ್ಲಿ ಉಂಟಾಗಿದ್ದ ಭಿನ್ನಮತ ಶಮನಗೊಂಡಂತಾಗಿದೆ. ಇಂದು ಸಂಜೆ ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಗರಕ್ಕೆ ಆಗಮಿಸಲಿದ್ದು, ಅವರೊಂದಿಗೂ ಕೂಡ ಒಂದು ಸುತ್ತಿನ ಮಾತುಕತೆ ನಡೆಯಲಿದೆ. ನಂತರ ನೂತನ ಸಚಿವರಿಗೆ ಖಾತೆ ಹಂಚಿಕೆ ಬಗ್ಗೆ ಚರ್ಚಿಸಿ ಆ ಸಮಸ್ಯೆಯನ್ನೂ ಕೂಡ ಬಗೆಹರಿಸಿಕೊಳ್ಳಲಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap