ದಾವಣಗೆರೆ
ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಶ್ರಮಿಸಿ, ಸೋಂಕಿಗೆ ತುತ್ತಾಗಿ ಬಲಿಯಾಗಿರುವ ಕೋವಿಡ್ ವಾರಿಯರ್ಸ್‍ಗಳಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕುಟುಂಬಕ್ಕೆ ತಲಾ 50 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕೆಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಒತ್ತಾಯಿಸಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ರಾಜ್ಯಾಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ, ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಮಹಾಮಾರಿ ಕೊರೊನಾ ಸೋಂಕು ನಿಯಂತ್ರಣಕ್ಕೆ ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆಯರು ಹಗಲು ರಾತ್ರಿ ಶ್ರಮಿಸುತ್ತಿರುವಂತೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಹ ಶ್ರಮಿಸುತ್ತಿದ್ದು, ಸೋಂಕು ತಗುಲಿ 25 ಜನ ಅಂಗನವಾಡಿ ಸಿಬ್ಬಂದಿಗಳು ಅಸು ನೀಗಿದ್ದಾರೆ. ಆದರೆ, ಇವರ ಕುಟುಂಬದ ಸದಸ್ಯರಿಗೆ ಸರ್ಕಾರ ಈ ವರೆಗೂ ಯಾವುದೇ ರೀತಿಯಲ್ಲಿ ಪರಿಹಾರ ನೀಡದಿರುವುದು ಅತ್ಯಂತ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೇರೆ ಊರುಗಳಿಂದ ಊರುಗಳಿಗೆ ಬರುವವರ ಟ್ರಾವೆಲ್ ಹಿಸ್ಟರಿ ಸಂಗ್ರಹ, ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಮಕ್ಕಳ ಮನೆಗಳಿಗೆ ತೆರಳಿ ರೇಷನ್ ವಿತರಿಸುವುದು, ಸರ್ವೇ ಮಾಡುವುದು ಸೇರಿದಂತೆ ಇತರೆ ಕಾರ್ಯಗಳನ್ನು ಕೊರೊನಾ ವಾರಿಯರ್ಸ್‍ಗಳಾಗಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಮಾಡುತ್ತಿದ್ದಾರೆ. ಆದರೆ, ಈ ವರೆಗೂ ಇವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಿಲ್ಲ ಎಂದು ಆರೋಪಿಸಿದರು.
ಯಾವುದೇ ಸುರಕ್ಷತಾ ಸಾಮಗ್ರಿಗಳು ಸಿಗದ ಕಾರಣದಿಂದಾಗಿಯೇ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿರು ಕೊರೊನಾ ಸೊಂಕಿಗೆ ತುತ್ತಾಗುತ್ತಿದ್ದಾರೆ. ಸೋಂಕಿಗೆ ಬಲಿಯಾದ ಹಲವು ಅಂಗನವಾಡಿ ಸಿಬ್ಬಂದಿಗಳಲ್ಲಿ ಕೆಲವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ದಾವಣಗೆರೆ ಜಿಲ್ಲೆಯೊಂದರಲ್ಲಿಯೇ ಗೌರಮ್ಮ, ಸಾವಿತ್ರಮ್ಮ, ಪದ್ಮಾವತಿ, ಇಂದಿರಮ್ಮ ಸೇರಿದಂತೆ ಐವರು ಅಂಗನವಾಡಿ ಸಿಬ್ಬಂದಿಗಳು ಸಾವಿಗೆ ಈಡಾಗಿರುವುದು ಸೇರಿದಂತೆ ರಾಜ್ಯದಲ್ಲಿ 25 ಜನರು ಮೃತ ಪಟ್ಟಿದ್ದಾರೆ. ಆದರೆ, ಸರ್ಕಾರ ಇವರ್ಯಾರಿಗೂ ಪರಿಹಾರ ವಿತರಿಸದೆ ಅನ್ಯಾಯ ಎಸಗಿದೆ ಎಂದು ಆಪಾದಿಸಿದರು.
ತಕ್ಷಣವೇ ರಾಜ್ಯ ಸರ್ಕಾರ ಮೃತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕುಟುಂಬಗಳಿಗೆ ತಲಾ 50 ಲಕ್ಷ ರೂ. ಪರಿಹಾರ ವಿತರಿಸಬೇಕು. ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಇಲ್ಲದಿದ್ದರೆ, ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.
ಕೊರೊನಾ ಸೋಂಕು ಹರಡದಂತೆ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ತಕ್ಷಣವೇ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಪಿಪಿಇ ಕಿಟ್, ಕೈಗವಸು, ಮುಖಗವಸು, ಸ್ಯಾನಿಟೈಸರ್ ಸೇರಿದಂತೆ ಇತರೆ ಸುರಕ್ಷತಾ ಸಾಮಗ್ರಿಗಳನ್ನು ವಿತರಿಸಬೇಕೆಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಫೆಡರೇಷನ್‍ನ ಎಂ.ಬಿ.ಶಾರದಮ್ಮ, ವಿಶಾಲಾಕ್ಷಿ, ಆವರಗೆರೆ ಚಂದ್ರು, ಎಸ್.ಎಸ್.ಮಲ್ಲಮ್ಮ, ಎನ್.ಎಚ್.ರಾಮಪ್ಪ, ಆವರಗೆರೆ ವಾಸು, ಸುಧ, ರೇಣುಕಾ, ಸರೋಜಾ ಮತ್ತಿತರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ