ಗ್ರಂಥಾಲಯ ಇಲಾಖೆಯಿಂದ ಪುಸ್ತಕಗಳ ಖರೀದಿಯಲ್ಲಿ ತಾರತಮ್ಯ

ವಿಶೇಷ ವರದಿ : -ಯೋಗೇಶ್ ಮಲ್ಲೂರು

      ಪುಸ್ತಕಗಳ ಖರೀದಿಯಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ತಾರತಮ್ಯ ನೀತಿಯನ್ನು ಎಸಗುತ್ತಿರುವುದು ಇತ್ತೀಚೆಗೆ ಕಂಡು ಬಂದಿದೆ. ಕನ್ನಡ ಪುಸ್ತಕಗಳನ್ನು ದರದನ್ವಯ ಖರೀದಿ ಮಾಡುತ್ತಿದೆ. ಆದರೆ ಇಂಗ್ಲಿಷ್ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿ ಮಾಡಲು ಮುಂದಾಗಿದೆ ಎನ್ನಲಾಗಿದೆ.

     2019 ಸೆ.4ರಂದು ನಡೆದ ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಇಂಗ್ಲಿಷ್ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸುವ ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿತ್ತು. ಈ ವಿರುದ್ಧ ಪ್ರಕಾಶಕರಿಂದ ಹಲವು ಹೋರಾಟಗಳೂ ನಡೆದಿದ್ದವು. ಆದರೆ ಈಗ ಪುಸ್ತಕಗಳ ಖರೀದಿಗೆ ಗ್ರಂಥಾಲಯ ಇಲಾಖೆ ಅನುದಾನ ಕಡಿತ ಮಾಡಿರುವುದಕ್ಕೆ ಸಾಹಿತ್ಯಿಕ ಹಾಗೂ ಸಾರ್ವಜನಿಕ ವಲಯಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ.

      ಇನ್ನು ಪ್ರಾಧಿಕಾರಕ್ಕೆ ಆಯ್ಕೆಯಾದ ಪುಸ್ತಕಗಳನ್ನು ಗ್ರಂಥಾಲಯ ಖರೀದಿಸದೇ ಇರುವುದು ಪ್ರಕಾಶನ ಸಂಸ್ಥೆಗಳಿಗೆ ಭಾರಿ ಒಡೆತ ಬಿದ್ದಂತಿದೆ. ಓದುಗರನ್ನು ಸೃಷ್ಠಿಸಬಲ್ಲಂತ ಸಾಮಥ್ರ್ಯವುಳ್ಳ ಗ್ರಂಥಾಲಯಗಳೇ ಹಣಕ್ಕಾಗಿ ಮೌಲ್ಯಯುತ ಪುಸ್ತಕಗಳ ಮೇಲೆ ರಾಜಕೀಯ ಲಾಬಿ ನಡೆಸುತ್ತಿವೆ. ಗ್ರಂಥಾಲಯಗಳು ಮಾಡುತ್ತಿರುವ ಈ ಶೋಚನೀಯತೆಗೆ ನವ ಮತ್ತು ಜನಪ್ರಿಯ ಬರಹಗಾರರ ನಡುವಿನ ಗ್ರಂಥಾಲಯಗಳ ಲಾಭಿತನ ದೊಡ್ಡ ದಂಧೆಯಾಗಿ ಪರಿಣಮಿಸಿದೆ.

2019ರಲ್ಲಿ 400ಕ್ಕೂ ಅಧಿಕ ಕನ್ನಡ ಪುಸ್ತಕಗಳ ಮುದ್ರಣ:

     ಕನ್ನಡ ಸಾಹಿತ್ಯ ವಲಯದಲ್ಲಿ ದಿನದಿಂದ ದಿನಕ್ಕೆ ಉದಯೋನ್ಮುಖ ಬರಹಗಾರರ ಸಂಖ್ಯೆ ಗಣನೀಯವಾಗಿ ಏರುತ್ತಿದೆ. ಈ ನಿಟ್ಟಿನಲ್ಲಿ ಗ್ರಂಥಾಲಯಗಳೂ ಹಾಗೂ ನಮ್ಮ ಆಸುಪಾಸಿನವರ ಪುಸ್ತಕಗಳನ್ನೂ ಒಳಗೊಂಡಂತೆ 2019ನೇ ವರ್ಷದಲ್ಲಿ ಸುಮಾರು 400ಕ್ಕೂ ಅಧಿಕ ಕನ್ನಡ ಪುಸ್ತಕಗಳು ಹೊರಬಂದಿವೆ. ಅವುಗಳಲ್ಲಿ ಹೆಚ್ಚಿನವು ಸಾಹಿತ್ಯ ಕೃತಿಗಳಾದರೆ, ಕನ್ನಡದಲ್ಲಿ ಅನುವಾದ, ಮಾಹಿತಿ, ಚರಿತ್ರೆ, ಸಂಶೋಧನೆ, ಕಥೆ, ಕವನ, ಕಾದಂಬರಿ, ಪ್ರವಾಸ ಕಥನಗಳಾಗಿವೆ.

      ಕವಿಗಳು, ಲೇಖಕರು ಮತ್ತು ಬರಹಗಾರರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಪುಸ್ತಕಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡುತ್ತಿರುವುದು ಸಾಹಿತ್ಯಕ್ಕೆ ಸಂದ ಹೆಮ್ಮೆಯಾಗಿದೆ. ಅಂತೆಯೆ ಜಿಲ್ಲೆಯಲ್ಲೂ ಸಹ ಪ್ರಸಕ್ತ ವರ್ಷದಲ್ಲಿ ಸುಮಾರು 30ಕ್ಕೂ ಹೆಚ್ಚು ಕನ್ನಡ ಪುಸ್ತಕಗಳು ಹೊರ ಬಂದಿವೆ ಎಂದು ಅಂದಾಜಿಸಲಾಗಿದ್ದು ಇವುಗಳಲ್ಲಿ ತೆರೆಮರೆಯಲ್ಲಿ ಮುದ್ರಣಗೊಂಡ ಪುಸ್ತಕಗಳನ್ನು ಒಳಗೊಂಡಿದೆ. ಇ-ಡಿಜಿಟಲ್ ಜಗತ್ತಿನಲ್ಲೂ ಸಾಹಿತ್ಯ ಹಾಗೂ ಪುಸ್ತಕಗಳೆಡೆಗೆ ಒಲವು ಹೆಚ್ಚುತ್ತಿರುವುದು ಒಂದು ಕಡೆಯಾದರೆ, ಅಂತೆಯೆ ಪುಸ್ತಕಗಳನ್ನು ಮುದ್ರಿಸುವ ಪ್ರಕಾಶನಗಳೂ ಅಧಿಕವಾಗುತ್ತಿವೆ.

ಇಂಗ್ಲಿಷ್ ಪುಸ್ತಕಗಳಿಗೆ ರಿಯಾಯಿತಿ, ಕನ್ನಡಕ್ಕೆ ಮಲತಾಯಿ ಧೋರಣೆ:

      ಕನ್ನಡ ಸಾಹಿತ್ಯ ಕ್ಷೇತ್ರ ದಿನಗಳೆದಂತೆ ಹಿಗ್ಗುತ್ತಲೇ ಇದೆ. ಆದರೆ ಸರ್ಕಾರಗಳು ಬದಲಾದಂತೆ ಸಾಹಿತ್ಯಕ್ಕೆ ಪ್ರೋತ್ಸಾಹಕರ ಮನಸ್ಸು ಬದಲಾಗುತ್ತದೆ ಎಂಬುದು ಇಲ್ಲಿ ಸತ್ಯವಾಗಿದೆ. ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಕನ್ನಡ ಪುಸ್ತಕಗಳನ್ನು ಪುಸ್ತಕದ ಅಳತೆ ಮತ್ತು ಕಾಗದದ ಗುಣಮಟ್ಟದ ಆಧಾರದ ಮೇಲೆ ಪ್ರತಿ ಹಾಳೆಗೆ ಇಂತಿಷ್ಟು ದರ ನಿಗದಿಪಡಿಸಿ ಖರೀದಿ ಮಾಡುತ್ತಿದೆ. 1/8 ಕ್ರೌನ್ ಅಳತೆಯ ಪುಸ್ತಕದ ಸಾದಾ ಕಾಗದಕ್ಕೆ 30 ಪೈಸೆ, ಉತ್ತಮ ಕಾಗದಕ್ಕೆ 40 ಪೈಸೆ ಹಾಗೂ 1/8 ಡಮ್ಮಿ ಅಳತೆಯ ಸಾದಾ ಕಾಗದಕ್ಕೆ 40 ಪೈಸೆ, ಉತ್ತಮ ಕಾಗದಕ್ಕೆ 50 ಪೈಸೆ ನಿಗದಿ ಮಾಡಲಾಗಿದ್ದು, ಕೇಸ್ ಬೈಂಡಿಂಗ್ ಕ್ರೌನ್ ಆ್ಯಂಡ್, ಡಮ್ಮಿ 1/8 ಅಳತೆ ಪುಸ್ತಕಕ್ಕೆ 20ರೂ. ಮತ್ತು ಕೇಸ್ ಬೈಂಡಿಂಗ್ ಕ್ರೌನ್ ಅಂಡ್, ಡಮ್ಮಿ ಅಳತೆಯ ಪುಸ್ತಕಕ್ಕೆ 25 ರೂ ಬೆಲೆ ನಿಗದಿಗೊಳಿಸಿದೆ. ಹಾಗಾಗಿ 300 ಪುಟಗಳ ಕನ್ನಡ ಪುಸ್ತಕವೊಂದನ್ನು 200.ರೂನಿಂದ 300ರೂ.ಗಳಿಗೆ ಖರೀದಿ ಮಾಡಲಾಗುತ್ತಿದೆ.

     2017ರವರೆಗೆ ಇಂಗ್ಲಿಷ್ ಸೇರಿದಂತೆ ಯಾವುದೇ ಪರಭಾಷೆ ಪುಸ್ತಕಕ್ಕೆ ಸರ್ಕಾರ ದರ ನಿಗದಿ ಮಾಡಿರಲಿಲ್ಲ. ಹಾಗಾಗಿ ಭಾರತೀಯ ಇತರೆ ಭಾಷೆಯ ಪುಸ್ತಕಗಳಿಗೆ ಮುಖಪುಟದ ಬೆಲೆಗೆ ಶೇ.20ರಷ್ಟು ರಿಯಾಯಿತಿ ಹಾಗೂ ಆಂಗ್ಲ ಭಾಷೆಯ ಪುಸ್ತಕಗಳಿಗೆ ಮುಖಪುಟ ಬೆಲೆ ಮೇಲೆ ಶೇ.20ರಷ್ಟು ರಿಯಾಯಿತಿ ದರದಲ್ಲಿ ಖರೀದಿ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ಪ್ರಕಾಶಕರು ಕನಿಷ್ಟ 300 ಪುಟಗಳ ಒಂದು ಪುಸ್ತಕಕ್ಕೆ ಸುಮಾರು 2000 ದಿಂದ 2500ರೂಗಳವರೆಗೆ ದರ ನಿಗದಿ ಮಾಡಿ ಗ್ರಂಥಾಲಯ ಇಲಾಖೆಗೆ ಮಾರಾಟ ಮಾಡುತ್ತಿದ್ದರು.

     ಕನ್ನಡ ಪುಸ್ತಕಗಳಂತೆ ಇಂಗ್ಲಿಷ್ ಪುಸ್ತಕಗಳಿಗೂ ದರ ನಿಗದಿ ಪಡಿಸಿರುವುದರಿಂದ ಪುಸ್ತಕ ಖರೀದಿ ಆದೇಶ ನೀಡಿದ್ದರೂ ಇಂಗ್ಲಿಷ್ ಪುಸ್ತಕಗಳನ್ನು ಸರಬರಾಜು ಮಾಡಲು ಸರಬರಾಜುದಾರರು ಹಾಗೂ ಪ್ರಕಾಶಕರು ಮುಂದೆ ಬಂದಿಲ್ಲ ಎನ್ನುವ ಕಾರಣಕ್ಕೆ 2019ರ ಸೆ.4ರಂದು ನಡೆದ ರಾಜ್ಯ ಗ್ರಂಥಾಲಯ ಪ್ರಾಧಿಕಾರದ ಸಭೆಯಲ್ಲಿ ಇಂಗ್ಲಿಷ್ ಭಾಷೆಯ ಪುಸ್ತಕಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಲು ನಿರ್ಧರಿಸಿರುವುದು ಕನ್ನಡಕ್ಕೆ ಯಾವುದೇ ರಿಯಾಯಿತಿ ನೀಡದೆ ಮಲತಾಯಿ ಧೋರಣೆಯನ್ನು ತೋರಿದಂತಾಗಿದೆ.

ದುಪ್ಪಟ್ಟು ಹಣಕ್ಕಾಗಿ ಗ್ರಂಥಾಲಯಗಳ ಲಾಬಿ- ಫೇಮಸ್ ಬರಹಗಾರರ ಪುಸ್ತಕಕ್ಕೆ ದುಂಬಾಲು:

     ಗ್ರಂಥಾಲಯಗಳು ಇಂಗ್ಲಿಷ್ ಪುಸ್ತಕವಷ್ಟೇ ಅಲ್ಲದೆ ಕನ್ನಡ ಪುಸ್ತಕ ಹಾಗೂ ಬರಹಗಾರರ ನಡುವೆಯೇ ಲಾಬಿಯನ್ನು ನಡೆಸುತ್ತಿದೆ. ಜನಪ್ರಿಯ ಬರಹಗಾರರೆನಿಸಿಕೊಂಡ, ಫೇಮಸ್ ಕವಿಗಳ ಪುಸ್ತಕಗಳಿಂದೆ ದುಂಬಾಲು ಬಿದ್ದು ಅಂತಹವರ ಪುಸ್ತಕಗಳನ್ನು ಪ್ರಚುರಗೊಳಿಸಿ ದುಪ್ಪಟ್ಟು ಹಣ ಮಾಡುವ ಉದ್ದೇಶ ಗ್ರಂಥಾಲಯಗಳದ್ದಾಗಿದೆ. ಉದಾಹರಣೆಗೆ ಎಸ್. ಎಲ್ ಬೈರಪ್ಪ, ಬರಗೂರು ರಾಮಚಂದ್ರಪ್ಪ, ಜೋಗಿ, ರವಿ ಬೆಳಗೆರೆಯಂತಹ ಫೇಮಸ್ ಬರಹಗಾರರು ತಮ್ಮ ಪುಸ್ತಕಗಳನ್ನು ಹೊತ್ತು ಗ್ರಂಥಾಲಯಕ್ಕೆ ಅಲೆದಾಡಬೇಕಾಗಿಲ್ಲ. ಪ್ರಕಟಕ್ಕೂ ಮುನ್ನವೇ ಬುಕ್ಕಿಂಗ್ ಮಾಡಿಕೊಳ್ಳುವ ಗ್ರಂಥಾಲಯಗಳೂ ಇವೆ. ಇವರುಗಳ ಪುಸ್ತಕಗಳು ಶರವೇಗದಲ್ಲಿ ಗ್ರಂಥಾಲಯ ತಲುಪಿ ಬೇಗನೆ ಎರಡನೆ ಮುದ್ರಣಗಳನ್ನು ಕಂಡು ಬಿಡುತ್ತವೆ.

      ಹೀಗಿರುವಾಗ ಸಾಹಿತ್ಯ ಲೋಕಕ್ಕೆ ಹೊಸ ಚಿಗುರಿನಂತೆ ಹುಟ್ಟಿಕೊಳ್ಳುತ್ತಿರುವ ನವ ಬರಹಗಾರರ ಚೊಚ್ಚಲ ಪುಸ್ತಕಗಳಿಗೆ ಗ್ರಂಥಾಲಯಗಳು ಹಿಂದೇಟು ಹಾಕುತ್ತಿರುವುದಂತೂ ಡೋಲಾಯಮಾನ ಪರಿಸ್ಥಿತಿ. ಇದಲ್ಲದೆ ಕೆಲವು ಬರಹಗಾರರು ಸಂಬಂಧಪಟ್ಟ ಸಚಿವರುಗಳ ಮುಖೇನ ಗ್ರಂಥಾಲಯಗಳ ನಡುವೆ ಮಾತುಕತೆಗಳನ್ನು ಮಾಡಿಕೊಂಡು ಪುಸ್ತಕಗಳನ್ನು ಕೊಡುವ ಅಡ್ಡ ದಾರಿಯೂ ಇದೆ. ಹಣಕ್ಕಾಗಿ ಮೌಲ್ಯಯುತ ಪುಸ್ತಕಗಳ ಮೇಲೆ ರಾಜಕೀಯ ಲಾಬಿ ನಡೆಸುತ್ತಿವೆ. ನವ ಮತ್ತು ಜನಪ್ರಿಯ ಬರಹಗಾರರ ನಡುವಿನ ಗ್ರಂಥಾಲಯಗಳ ಲಾಭಿತನ ದೊಡ್ಡ ದಂಧೆಯಾಗಿ ಪರಿಣಮಿಸಿದೆ.

ಓದುಗರಿಗಿಂತ ಬರೆಯುವವರೇ ಅಧಿಕ:

    ಇಂದು ಓದುಗರ ಸಂಖ್ಯೆ ತೀರಾ ಕಡಿಮೆಯಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ದಿನವಿಡೀ ಕಾಲ ಕಳೆಯುತ್ತಾ ಮನಸೋ ಇಚ್ಛೆ ಬರೆದುಕೊಳ್ಳುವವರು ಹೆಚ್ಚಾಗಿದ್ದಾರೆ. ಪುಸ್ತಕಗಳನ್ನು ಬರೆಯುವವರು ಹೆಚ್ಚಿದಂತೆ ಪ್ರಕಾಶಕರು ಹೆಚ್ಚಾಗುತ್ತಿದ್ದಾರೆ. ಹೀಗೆ ಇದ್ದಬದ್ದವರೆಲ್ಲಾ ಬರಹಗಾರರೇ ಆಗಿಬಿಟ್ಟರೆ ಓದುಗರ್ಯಾರೂ ಎಂಬ ಯಕ್ಷಪ್ರಶ್ನೆ ಕಾಡುವ ದಿನಗಳು ಹತ್ತಿರಲ್ಲಿವೆ.

    ಬರಹಗಾರರು ಹೆಚ್ಚಿದಂತೆ ಸಾಮಾನ್ಯವಾಗಿ ಗ್ರಂಥಾಲಯಗಳಲ್ಲಿ ಪುಸ್ತಕಗಳು ಹೆಚ್ಚಿ ಅವುಗಳನ್ನೆಲ್ಲಾ ಮೂಟೆ ಕಟ್ಟಿ ಹಾಕುವಂತಾಗಿದೆ. ವರ್ಷಾನುಗಟ್ಟಲೆ ಧೂಳಿಡಿದು ಮೂಲೆ ಸೇರುವ ಪುಸ್ತಕಗಳನ್ನು ಗ್ರಂಥಾಲಯ ರಿಯಾಯಿತಿಯಲ್ಲಿ ಪುಸ್ತಕ ನೀಡಿ ಓದಗರನ್ನು ಸೃಷ್ಟಿಸುವ ಗೋಜಿಗೆ ಹೋಗಿಲ್ಲದಿರುವುದು ವಿಷಾದನೀಯ. ಜಿಲ್ಲಾವಾರು ಗ್ರಂಥಾಲಯಗಳಲ್ಲಿ ಓದುಗರು ಕಡಿಮೆಯಾದಂತೆ ಸಮರ್ಪಕ ಪ್ರಚಲಿತ ಪುಸ್ತಕಗಳು ಕ್ಷೀಣಿಸುತ್ತಿವೆ. ಇನ್ನು ಜಿಲ್ಲೆಯಲ್ಲಿ ಬಡಾವಣೆಗೊಂದು ಗ್ರಂಥಾಲಯವಿರಬೇಕಾದ್ದು ನಿಯಮ ಆದರೆ ಪ್ರಾಯೋಗಿಕವಾಗಿ ಈ ನಿಮಯ ಸಫಲವಾಗಿಲ್ಲ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link