ಚಿತ್ರದುರ್ಗ

ಪರಿಶಿಷ್ಟಜಾತಿ ಕಾಲೊನಿಗಳಲ್ಲಿ ಮೂಲಬೂತ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಲಾಗಿರುವ ಪ್ರಗತಿ ಕಾಲೋನಿ ಯೋಜನೆಯಡಿಯಲ್ಲಿ ಅನುದಾನ ಬಿಡುಗಡೆ ವಿಚಾರದಲ್ಲಿ ರಾಜ್ಯ ಸರ್ಕಾರ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಜಿ.ಬಿ.ಬಾಲಕೃಷ್ಣ ಸ್ವಾಮಿ ಗಂಭಿರ ಆರೋಪ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ರಾಜ್ಯ ಬಿಜೆಪಿ ಸರ್ಕಾರ ಅಭಿವೃದ್ದಿ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುತ್ತಿರುವ ಕ್ಷೇತ್ರಗಳಿಗೆ ನಯಾ ಪೈಸೆಯೂ ಹಣ ಬಿಡುಗಡೆ ಮಾಡುತ್ತಿಲ್ಲವೆಂದು ಹೇಳಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರಗಳಿಗೆ ತಲಾ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡಿ ಸದರಿ ಕ್ಷೇತ್ರದಲ್ಲಿನ ಎಸ್. ಸಿ ಕಾಲೊನಿಗಳನ್ನು ಉನ್ನತೀಕರಿಸುವ ಸದುದ್ದೇಶದ ಯೋಜನೆ ಇದಾಗಿದ್ದು, 2011ರ ಜನಗಣತಿಯ ಜನಸಂಖ್ಯೆಯನ್ನಾಧರಿಸಿ 2019-20ನೇ ಸಾಲಿಗೆ ರಾಜ್ಯಾಧ್ಯಂತ 120 ವಿಧಾನಸಭೆ ಕ್ಷೇತ್ರಗಳನ್ನು ಆಯ್ಕೆ ಮಾಡಿ 119.78 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿ 2019ನೇ ಸಾಲಿನ ನವಂಬರ್ 05 ರಂದು ಸಮಾಜಕಲ್ಯಾಣ ಇಲಾಖೆಗೆ ಈಗಿನ ಬಿಜೆಪಿ ಸರ್ಕಾರ ಆದೇಶ ನೀಡಿತ್ತು .ಆದರೆ ಉಪಚುನಾವಣೆ ಕಾರಣಕ್ಕೆ ಯೋಜನೆ ಅನುಷ್ಠಾನ ಸ್ಥಗಿತವಾಗಿದ್ದು, ಚುನಾವಣೆ ನಂತರ ಯೋಜನೆಯ ಚಟುವಟಿಕೆಗಳು ಪುನಾರಂಭಗೊಂಡಿವೆ.
ಪಕ್ಕದ ದಾವಣಗೆರೆ ಜಿಲ್ಲೆಯಲ್ಲಿರುವ 7 ವಿಧಾನಸಭಾ ಕ್ಷೇತ್ರಗಳ ಪೈಕಿ 5 ಬಿಜೆಪಿ ಶಾಸಕರಿದ್ದು ಉಳಿದ ಹರಿಹರ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಇನ್ನು ಚಿತ್ರದುರ್ಗ ಜಿಲ್ಲೆಯಲ್ಲಿರುವ ಒಟ್ಟು 6 ವಿಧಾನಸಭಾ ಕ್ಷೇತ್ರಗಳ ಪೈಕಿ 5 ರಲ್ಲಿ ಬಿಜೆಪಿ ಶಾಸಕರಿದ್ದು ಉಳಿದಿರುವ ಒಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್ ಶಾಸಕರಿದ್ದಾರೆ.
ಈ ಎರಡೂ ಜಿಲ್ಲೆಗಳಲ್ಲಿ ಮಾತ್ರವಲ್ಲದೇ ರಾಜ್ಯಾದ್ಯಂತ ಇರುವ ಕಾಂಗ್ರೆಸ್ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಸದರಿ ಪ್ರಗತಿ ಕಾಲೊನಿಗೆ ಬಿಡುಗಡೆಯಾಗಬೇಕಾಗಿದ್ದ ಒಂದು ಕೋಟಿ ರೂ. ಅನುದಾನ ಬಿಡುಗಡೆ ಮಾಡದೇ ಮಲತಾಯಿ ಧೋರಣಿಯನ್ನು ಅನುಸರಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ
ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ ಈ ಯೋಜನೆ ಅನ್ವಯಿಸದ ಹಾಗೆ ನೋಡಿಕೊಳ್ಳುತ್ತಾ ಅಲ್ಲಿನ ಜನರ ಅಭಿವೃದ್ಧಿಯನ್ನು ಮೊಟಕುಗೊಳಿಸುತ್ತಿರುವುದು ಯಡಿಯೂರಪ್ಪ ಸರ್ಕಾರಕ್ಕೆ ಶೋಭೆತರುವಂತದ್ದಲ್ಲ. ಈ ರೀತಿ ತಾರತಮ್ಯ ಮಾಡುತ್ತಿರುವುದರಿಂದ ಶೇ. 55 ರಷ್ಟು ಎಸ್ಸಿ ಎಸ್.ಟಿ ಜನಸಂಖ್ಯೆ ಇರುವ ಚಳ್ಳಕೆರೆ ಕ್ಷೇತ್ರದ ಜನತೆ ತಮ್ಮ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಪಕ್ಷವನ್ನು ಪರಿಗಣಿಸಿ ಈ ಯೋಜನೆ ವ್ಯಾಪ್ತಿಗೆ ಕ್ಷೇತ್ರವನ್ನು ಆಯ್ಕೆ ಮಾಡಿದರೆ, ಈ ಸಮುದಾಯಗಳು ಅಭಿವೃದ್ಧಿಯಿಂದ ಇನ್ನೂ ದೂರ ಉಳಿಯುವುದಂತೂ ಖಚಿತವೆಂದು ಬಾಲಕೃಷ್ಣಸ್ವಾಮಿ ಹೇಳಿದ್ದಾರೆ
ಸಿದ್ದರಾಮಯ್ಯ ಸರ್ಕಾರವಿದ್ದ ಸಂದರ್ಭದಲ್ಲಿ 2,380 ಕೋಟಿ ರೂ. ವೆಚ್ಚದ ತುಂಗಭದ್ರಾ ಹಿನ್ನೀರಿನ ಯೋಜನೆ ಜಾರಿ ಮಾಡಲಾಗಿತ್ತು, ಕೂಡ್ಲಿಗಿ, ಚಳ್ಳಕೆರೆ, ಮೊಳಕಾಲ್ಮೂರು, ಪಾವಗಡ ಕ್ಷೇತ್ರಗಳಲ್ಲಿ ಯೋಜನೆ ಜಾರಿಗೊಳಿಸಲಾಯಿತು. ಈ ನಾಲ್ಕು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಶಾಸಕರಿರುವುದು ಚಳ್ಳಕೆರೆಯಲ್ಲಿ ಮಾತ್ರ. ಹಾಗೆಂದು ಚಳ್ಳಕೆರೆಗೆ ಮಾತ್ರ ನೀರಿನ ಯೋಜನೆ ಜಾರಿಗೊಳಿಸಲಿಲ್ಲ. ರಾಜ್ಯ ಬಿಜೆಪಿ ಸರ್ಕಾರ ಪ್ರಗತಿ ಕಾಲೊನಿ ಅಭಿವೃದ್ಧಿ ಯೋಜನೆಯೂ ಈ ಕ್ಷೇತ್ರಗಳಲ್ಲಿ ಅನುಷ್ಠಾನ ಮಾಡದಿರುವುದು ಶೋಚನೀಯ. ಈ ಕುರಿತಂತೆ ಸಿಎಂ ಮತ್ತು ಸಮಾಜಕಲ್ಯಾಣ ಸಚಿವರು ಗಮನಹರಿಸಿ ಕಾಂಗ್ರೆಸ್ ಕ್ಷೇತ್ರಗಳ ಸಮುದಾಯಗಳ ಜನರಿಗೆ ನ್ಯಾಯ ಒದಗಿಸುವ ಜವಾಬ್ದಾರಿ ಅವರದ್ದು ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








