ನೊಂದವರಿಗೆ ತ್ವರಿತವಾಗಿ ನ್ಯಾಯ ದೊರೆಯಲಿ

ದಾವಣಗೆರೆ:

     ನೊಂದವರಿಗೆ ತ್ವರಿತಗತಿಯಲ್ಲಿ ಗುಣಮಟ್ಟದ, ಪರಿಣಾಮಕಾರಿಯಾಗಿ ನ್ಯಾಯ ದೊರೆಯುವಂತಾಗಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಆಶಯ ವ್ಯಕ್ತಪಡಿಸಿದರು.ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಭೇಟಿ ನೀಡಿ, ನ್ಯಾಯಾಲಯದ ಸಂಕೀರ್ಣದಲ್ಲಿರುವ ವಕೀಲರ ಸಾಂಸ್ಕೃತಿಕ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೊಂದು ನ್ಯಾಯಾಲಯಗಳಿಗೆ ಬಂದಿರುವ ಜನರಿಗೆ ತ್ವರಿತಗತಿಯಲ್ಲಿ ನ್ಯಾಯ ಒದಗಿಸುವತ್ತ ನ್ಯಾಯಾಧೀಶರು ಮತ್ತು ವಕೀಲರು ಗಮನ ಹರಿಸಬೇಕೆಂದು ಕಿವಿಮಾತು ಹೇಳಿದರು.

    ಕಳೆದ ಹತ್ತು ವರ್ಷಗಳಿಂದ ಬಾಕಿ ಇರುವ ಎಲ್ಲ ಕ್ರಿಮಿನಲ್ ಮತ್ತು ಸಿವಿಲ್ ಪ್ರಕರಣಗಳನ್ನು ಒಂದು ವರ್ಷದೊಳಗೆ ವಿಲೇವಾರಿ ಮಾಡಬೇಕು. ನಂತರದ ಒಂದು ವರ್ಷದಲ್ಲಿ ಏಳು ವರ್ಷಕ್ಕಿಂತ ಹಳೇಯದಾದ ಪ್ರಕರಣಗಳನ್ನು ಹಾಗೂ ಮತ್ತೆ ಐದು ವರ್ಷಕ್ಕಿಂತ ಮೇಲಿನ ಪ್ರಕರಣಗಳನ್ನು ಇತ್ಯರ್ಥಪಡಿಸಲು ವಕೀಲರು ಸಹಕಾರ ನೀಡಬೇಕೆಂದು ಸಲಹೆ ನೀಡಿದರು.

    ಕರ್ನಾಟಕದ ಯಾವುದೇ ನ್ಯಾಯಾಲಯಗಳಲ್ಲು ಐದು ವರ್ಷ ಮೀರಿದ ಪ್ರಕರಣಗಳು ಇರದಂತೆ ಮಾಡುವ ಉದ್ದೇಶ ತಮ್ಮದಾಗಿದೆ ಎಂದ ಅವರು, ಕಟ್ಟಡ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಲ್ಲಿ ಇತರೆ ರಾಜ್ಯಗಳನ್ನು ಹೋಲಿಸಿದರೆ, ಕರ್ನಾಟಕದ ನ್ಯಾಯಾಲಯಗಳು ಸಾಕಷ್ಟು ಸುಧಾರಿಸಿವೆ. ದೆಹಲಿ, ಹರ್ಯಾಣ, ಪಂಜಾಬ್‍ಗಳ ನ್ಯಾಯಾಲಗಳ ವ್ಯವಸ್ಥೆಗಳನ್ನು ಹೊರತು ಪಡಿಸಿದರೆ, ರಾಜ್ಯದ ನ್ಯಾಯಾಲಯಗಳೇ ಮುಂದಿವೆ. ಆದ್ದರಿಂದ ನ್ಯಾಯದಾನದಲ್ಲಿಯೂ ನಾವು ಮುಂದೆ ಇರಬೇಕು ಎಂದರು.

    ಜಿಲ್ಲೆಯ ನ್ಯಾಯಾಲಯದ ಮೂಲಭೂತ ಸೌಕರ್ಯಕ್ಕೆ ಸಂಬಂಧಿಸಿದಂತೆ 15 ಕೋಟಿ ರೂ.ಗಳನ್ನು ಸರ್ಕಾರ ಮಂಜೂರು ಮಾಡಿದ್ದು, ಈಗಾಗಲೇ ವಕೀಲರ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಬಂದಿದೆ. ನಾನು ಹೈಕೋರ್ಟ್‍ಗಿಂತ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿರುವ ನ್ಯಾಯಾಲಯಗಳಲ್ಲಿಯೇ ಹೆಚ್ಚು ಕಲಿತಿದ್ದೇನೆ. 13 ಜಿಲ್ಲೆಗಳ ನ್ಯಾಯಾಲಯಗಳಿಗೆ ಭೇಟಿ ನೀಡಿ ಇಲ್ಲಿಗೆ ಬಂದಿದ್ದೇನೆ. ಕೆಳಸ್ತರದ ನ್ಯಾಯಾಲಯಗಳು ಅಗತ್ಯ ಮೂಲಭೂತ ಸೌಲಭ್ಯಗಳನ್ನು ಹೊಂದುವಂತಾಗಬೇಕು ಎಂದು ಹೇಳಿದರು.

    ನಮಗೆ ಎಲ್ಲಾ ಧರ್ಮಗ್ರಂಥಗಳಿಂದ ಸಂವಿಧಾನವೇ ಪವಿತ್ರ ಗ್ರಂಥವಾಗಿದೆ. ಹೀಗಾಗಿ ಸಂವಿಧಾನ ದಿನವನ್ನು ಎಲ್ಲ ನ್ಯಾಯಾಲಯಗಳಲ್ಲಿ ಸಂಭ್ರಮದಿಂದ ಆಚರಿಸಬೇಕು. ಯಾಕೆಂದರೆ ಸಂವಿಧಾನ ಇರುವುದರಿಂದ ನ್ಯಾಯಾಲಯಗಳು ಇವೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಯ ಕೊನೆಯ ಸಂವಾದದಲ್ಲಿ ಎಲ್ಲ ಗೊಂದಲಗಳಿಗೆ, ಸಂಶಯಗಳಿಗೆ ಸುದೀರ್ಘವಾಗಿ ಉತ್ತರವನ್ನು ನೀಡಿದ್ದರು. ಅದನ್ನೆಲ್ಲ ನಾವು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.

    ಕಾರ್ಯಕ್ರಮದಲ್ಲಿ ಹೈಕೋರ್ಟ್‍ನ ಜನರಲ್ ರಿಜಿಸ್ಟ್ರಾರ್ ರಾಜೇಂದ್ರ ಬದಮಿಕರ್, ಇನ್‍ಫ್ರಾಸ್ಟ್ರಕ್ಚರ್ ಮತ್ತು ಮೈಂಟೆನೆನ್ಸ್ ರಿಜಿಸ್ಟ್ರಾರ್ ಎಂ.ಚಂದ್ರಶೇಖರ ರೆಡ್ಡಿ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಂಬಾದಾಸ್ ಜಿ ಕುಲಕರ್ಣಿ ಮತ್ತಿತರರು ಉಪಸ್ಥಿತರಿದ್ದರು.ಸೌಮ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಸ್ವಾಗತಿಸಿದರು. ಉಪಾಧ್ಯಕ್ಷ ಎಚ್. ದಿವಾಕರ್ ಪರಿಚಯಿಸಿದರು. ಬಿ.ಎಸ್. ಲಿಂಗರಾಜ್ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಕಾರ್ಯದರ್ಶಿ ಎಸ್.ಬಸವರಾಜು ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link