ಹುಳಿಯಾರು
ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿನ ರಾಗಿ ಖರೀದಿ ಕೇಂದ್ರದಲ್ಲಿ ಟ್ರಾನ್ಸ್‍ಪೋರ್ಟ್ ವಿಚಾರವಾಗಿ ಲಾರಿ ಮಾಲೀಕರುಗಳಲ್ಲಿ ತಕರಾರು ನಡೆದು ಕೆಲ ಸಮಯ ರೈತರಿಂದ ರಾಗಿ ಖರೀದಿ ಸ್ಥಗಿತಗೊಳಿಸಲಾಗಿತ್ತು. ನಂತರ ಲಾರಿ ಮಾಲೀಕರುಗಳ ನಡುವೆ ಪರಸ್ಪರ ಒಪ್ಪಂದದ ನಂತರ ಸಮಸ್ಯೆ ತಿಳಿಯಾದ ಘಟನೆ ನಡೆದಿದೆ.
ಹುಳಿಯಾರಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ರಾಗಿ ಖರೀದಿ ಕೇಂದ್ರ ತೆರೆಯಲಾಗಿದ್ದು ನಿತ್ಯ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ ಖರೀದಿ ನಡೆಯುತ್ತಿತ್ತು. ಖರೀದಿಸಲ್ಪಟ್ಟ ರಾಗಿಯನ್ನು ಶಿರಾದ ವೇರ್ ಹೌಸ್‍ಗೆ ಟ್ರಾನ್ಸ್‍ಪೋರ್ಟ್ ಮಾಡಲಾಗುತ್ತಿತ್ತು.
ಟ್ರಾನ್ಸ್‍ಪೋರ್ಟ್ ಗುತ್ತಿಗೆ ತೆಗೆದುಕೊಂಡಂತಹ ಸ್ಥಳೀಯ ವ್ಯಕ್ತಿಗೆ ಲಾರಿ ಕಳುಹಿಸಲು ಒಪ್ಪಂದ ಮಾಡಿಕೊಂಡಿದ್ದು, ಈತ ಲಾರಿ ಮಾಲೀಕರುಗಳಿಗೆ ಒಂದೊಂದು ರೀತಿಯ ದರ ನೀಡುತ್ತಿದ್ದು ಒಬ್ಬರಿಗೆ ಚೀಲಕ್ಕೆ ಹತ್ತೊಂಬತ್ತು ರೂಪಾಯಿ ನೀಡಿದರೆ ಮತ್ತೊಬ್ಬರಿಗೆ ಹದಿಮೂರು ರೂಪಾಯಿ ನೀಡುತ್ತಿದ್ದಾರೆ ಎಂದು ಆರೋಪಿಸಿದ ಸ್ಥಳೀಯ ಲಾರಿ ಮಾಲೀಕರುಗಳು ಗುತ್ತಿಗೆದಾರ ಸ್ಥಳಕ್ಕೆ ಬಂದು ಸಮಸ್ಯೆ ಪರಿಹರಿಸುವಂತೆ ಅಲ್ಲಿಯವರೆಗೆ ಖರೀದಿ ಸ್ಥಗಿತಗೊಳಿಸುವಂತೆ ತಕರಾರು ತೆಗೆದಿದ್ದರು.
ಮುಂಜಾನೆಯಿಂದಲೇ ಖರೀದಿ ಕೇಂದ್ರಕ್ಕೆ ಆಗಮಿಸಿದ್ದ ರೈತರು ಕಾದು ಕಾದು ಬೇಸತ್ತು ಇದನ್ನು ಬಲವಾಗಿ ವಿರೋಧಿಸಿ ಟ್ರಾನ್ಸ್‍ಪೋರ್ಟ್‍ಗೂ ನಮಗೂ ಸಂಬಂಧವಿಲ್ಲ, ನಿಮ್ಮಗಳ ಸಮಸ್ಯೆ ಮುಂದು ಮಾಡಿಕೊಂಡು ರಾಗಿ ಖರೀದಿ ಮಾಡದಿದ್ದಲ್ಲಿ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ಸಮಯದಲ್ಲಿ ಪರಸ್ಪರ ವಾಗ್ವಾದ ನಡೆದು ರಾಗಿ ಖರೀದಿ ಕೇಂದ್ರದಲ್ಲಿನ ಸಮಸ್ಯೆಗಳು ಹೊರಬಂತು. ರಾಗಿ ಖರೀದಿ ಕೇಂದ್ರದಲ್ಲಿ ಎಲ್ಲವೂ ಸರಿ ಇಲ್ಲ: ರಾಜ್ಯ ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಸದಸ್ಯ ಅಫ್ಸಲ್ ಅಹಮದ್ ಮಾತನಾಡಿ ರಾಗಿ ಖರೀದಿ ಕೇಂದ್ರದಲ್ಲಿ ಎಲ್ಲವೂ ಸರಿ ಇಲ್ಲ. ಖರೀದಿ ಮಾಡಬೇಕಾದ ರಾಗಿಯ ಗುಣಮಟ್ಟ ಪರೀಕ್ಷೆ ಮಾಡದೆ ಸ್ಯಾಂಪ್ಲರ್‍ಗಳು ಹಾಗೆಯೇ ಲೋಡಿಂಗ್ ಮಾಡುತ್ತಿದ್ದು ಇದರಿಂದ ಒಂದು ವರ್ಗಕ್ಕೆ ಲಾಭವಾಗುತ್ತಿದೆ. ಆದರೆ ಇದನ್ನೆ ನಾವು ಮತ್ತೆ ಸೊಸೈಟಿ ಮೂಲಕ ತಿನ್ನುವಂತಹ ಸ್ಥಿತಿ ಬರುವುದರಿಂದ ಮೇಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು.
ಲಾರಿ ಮಾಲೀಕರು ಪರಸ್ಪರ ತಿಕ್ಕಾಟದಿಂದ ಕೆಲವು ಗಂಟೆಗಳ ಕಾಲ ರಾಗಿ ಖರೀದಿ ಸ್ಥಗಿತವಾಗಿತ್ತು. ಈ ನಡುವೆ ರೈತರು ಹಾಗೂ ಹಮಾಲಿಗಳು ಕೂಡ ಸಮಸ್ಯೆ ಸೃಷ್ಟಿ ಮಾಡಿದ್ದೀರೆಂದು ಲಾರಿ ಮಾಲೀಕರುಗಳ ಮೇಲೆ ಹರಿಹಾಯ್ದರು. ನಂತರ ಸ್ಥಳೀಯವಾಗಿ ಲಾರಿ ಗುತ್ತಿಗೆ ಪಡೆದ ವ್ಯಕ್ತಿ ಆಗಮಿಸಿ ಎಲ್ಲಾ ಲಾರಿಗಳಿಗೆ ಲೋಡ್ ಮಾಡಲು ಅವಕಾಶ ಕೊಡುವುದಾಗಿ ಹೇಳಿದ್ದರಿಂದ ಲೋಡಿಂಗ್ ಮಾಡಲು ಮಾಲೀಕರುಗಳು ಒಪ್ಪಂದ ಮಾಡಿಕೊಂಡಿದ್ದರಿಂದ ಸಮಸ್ಯೆ ಬಗೆ ಹರಿದು ಖರೀದಿ ಆರಂಭವಾಯಿತು.
ಈ ವೇಳೆ ಖರೀದಿ ಕೇಂದ್ರದ ಅಧಿಕಾರಿ ಕೃಷಿ ಇಲಾಖೆಯ ಕರಿಬಸಪ್ಪ ಮಾತನಾಡಿ ಫೆ.12 ರಿಂದ ಖರೀದಿ ಆರಂಭಿಸಲಾಗಿದ್ದು, ಇದುವರೆಗೂ 83 ಜನ ರೈತರಿಂದ 2175 ಕ್ವಿಂಟಾಲ್ ರಾಗಿ ಖರೀದಿಸಲಾಗಿದೆ. ಇದುವರೆಗೂ ಯಾವೊಬ್ಬ ರೈತರಿಂದಲೂ ಖರೀದಿ ಬಗ್ಗೆ ಸಮಸ್ಯೆ ಕೇಳಿ ಬಂದಿಲ್ಲ. ಇಂದಿನ ಘಟನೆಗೂ ಖರೀದಿ ಕೇಂದ್ರಕ್ಕೆ ಸಂಬಂಧವಿಲ್ಲ. ಇದು ಕೇವಲ ಲಾರಿ ಮಾಲೀಕರುಗಳ ನಡುವಿನ ಸಮಸ್ಯೆಯಾಗಿದೆ ಎಂದು ಸ್ಪಷ್ಟನೆ ನೀಡಿದರು.