ಸಮಾಜಮುಖಿ ಕೆಲಸ ಮಾಡುವಾಗ ನಿಂದನೆ ಸಹಜ

ಚಿತ್ರದುರ್ಗ :

         ಸಮಾಜದಲ್ಲಿ ಉತ್ತಮ ಕೆಲಸ ಮಾಡುವ ಮಂದಿಗೆ ನಿಂದನೆ ಸಹಜ. ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ನಮ್ಮ ಪಾಲಿನ ಕರ್ತವ್ಯಗಳನ್ನು ನಿರಂತರವಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದು ಡಾ.ಶಿವಮೂರ್ತಿ ಮುರುಘರಾಜೇಂದ್ರ ಶರಣರು ನುಡಿದರು
ನಗರದ ಬಸವಕೇಂದ್ರ ಶ್ರೀಮುರುಘಾಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ (ರಿ) ಚಿತ್ರದುರ್ಗ ಇವರ ಸಹಯೋಗದಲ್ಲಿ ನಡೆದ ಇಪ್ಪತ್ತೆಂಟನೇ ವರ್ಷದ ಹನ್ನೊಂದನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು

         ನಮ್ಮದು ಅತಿಪ್ರಾಚೀನವಾದ ಪರಂಪರೆ. 12ನೇ ಶತಮಾನದಲ್ಲಿ ಎಲ್ಲ ಸಮಾಜದ ಶರಣರು ಅನುಭವ ಮಂಟಪದಲ್ಲಿ ಸೇರಿ ನಾವು ಎಂತಹ ಸಮಾಜವನ್ನು ಕಟ್ಟಬೇಕು ಎಂದು ಚಿಂತನೆ ಮಾಡುತ್ತಿದ್ದರು. ಯಾರೂ ಸುಮ್ಮನೆ ಕುಳಿತು ಉಣ್ಣಬಾರದು ಎಂಬುದು ಅವರ ಧ್ಯೇಯವಾಗಿತ್ತು. ಶರಣರು ಅನ್ನದಾಸೋಹ, ಜ್ಞಾನದಾಸೋಹದ ಜೊತೆಗೆ ಭಕ್ತಿದಾಸೋಹ ಮಾಡುತ್ತ ತ್ರಿವಿಧ ದಾಸೋಹಿಗಳಾಗಿದ್ದರು ಎಂದು ಹೇಳಿದರು.

        ಅಂದಿನ ಸತಿ-ಪತಿಗಳು ಇಬ್ಬರೂ ಕಾಯಕ ಮಾಡುತ್ತಿದ್ದರು. ಶರಣ ಚಳುವಳಿಯು ಇಂತಹ ಸಮಾಜವನ್ನು ಕಟ್ಟುತ್ತಿತ್ತು. ಕಾಯಕ ಮಾಡುತ್ತ ದಾಸೋಹ ಮಾಡುತ್ತಿದ್ದರು. ಕರೆದುಕೊಂಡು ಉಣ್ಣುವುದು ದಾಸೋಹ ಪದ್ಧತಿ. ಭಕ್ತಿ ದಾಸೋಹ ಎಂದರೆ ಸ್ಪಂದನ ದಾಸೋಹ, ಸಮಾಜ ಸೇವೆಯ ದಾಸೋಹ. ಅದನ್ನು ಸಾಂತ್ವನ ದಾಸೋಹ ಎನ್ನುತ್ತಿದ್ದರು.

        ಜೀವನದಲ್ಲಿ ಜನರಿಗೆ ಕಷ್ಟ ನಷ್ಟಗಳು ಬರುವುದು ಸಹಜ. ಈ ಕಷ್ಟಗಳು ಎಲ್ಲ ಸಮಾಜ ಸುಧಾರಕರಿಗೆ ದಾರ್ಶನಿಕರಿಗೂ ಬಿಡಲಿಲ್ಲ. ಅವರದು ಸಮ ಸಮಾಜ ಕಟ್ಟುವ ಕಲ್ಪನೆಯಾಗಿತ್ತು. ಅವರು ಆರೋಗ್ಯಪೂರ್ಣವಾದ ಸಮಾಜ ಕಟ್ಟಿಕೊಟ್ಟು ಹೋಗಿದ್ದಾರೆ. ಸಮಾಜಮುಖಿ ಕಾರ್ಯಗಳನ್ನು ಮಾಡುವವರಿಗೆ ನಿಂದೆಗಳು ಸಹಜ ಎಂದು ಹೇಳಿದರು.

         ವನಕಲ್ ಮಠದ ಶ್ರೀ ಬಸವ ರಮಾನಂದ ಸ್ವಾಮಿಗಳು ಮಾತನಾಡಿ, ಶ್ರೀಗಳು ಸರ್ವಜನಾಂಗದವರಿಗೆ ಸ್ವಾಮಿತ್ವವನ್ನು ಕಲಿಸುವುದರೊಂದಿಗೆ ಹಾಗು ಕಳೆದ 28 ವರ್ಷಗಳಿಂದ ಸಾಮೂಹಿಕ ಕಲ್ಯಾಣ ಮಹೋತ್ಸವ ಕಾರ್ಯಕ್ರಮಗಳು ಈ ಎರಡು ಪೂಜ್ಯರ ಮಹತ್ವದ ಆಲೋಚನೆಗಳಾಗಿವೆ. ಮನೆಯ ದೀಪವನ್ನು ಬೆಳಗಲು ಬರುತ್ತಿರುವ ಹೆಣ್ಣುಮಗಳನ್ನು ಮನೆಯ ಬೆಳಕೆಂದೇ ಪರಿಗಣಿಸಿ ನೂತನ ದಂಪತಿಗಳ ಪೋಷಕರಿಗೆ ಕಿವಿಮಾತು ಹೇಳಿದರು.

        ಮುಖ್ಯಅತಿಥಿ ಚಿತ್ರದುರ್ಗ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ.ಜೆ.ಆಂಥೋಣಿ ಮಾತನಾಡಿ, ಇದೊಂದು ಶ್ಲಾಘನೀಯ ಕಾರ್ಯಕ್ರಮ. ಆರೋಗ್ಯ, ಅಕ್ಷರ, ಅನ್ನದಾಸೋಹವನ್ನು ಮಾಡುತ್ತ ಶ್ರೀಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಭಗವಂತ ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾನೆ. ಇದೊಂದು ಹೊಸ ಅಧ್ಯಾಯ. ನವ ವಧು-ವರರು ಜೀವನವನ್ನು ಸಮಭಾವದಿಂದ ಸ್ವೀಕರಿಸಬೇಕು. ಮುಂದಿನ ದಿನಗಳಲ್ಲಿ ಶ್ರೀಗಳ ಯೋಜನೆಗಳು ಕಾರ್ಯರೂಪಕ್ಕೆ ಬರಲಿ ಎಂದು ಆಶಿಸುತ್ತೇನೆ ಎಂದರು.

      ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಸತೀಶ್‍ಬಾಬು ಮಾತನಾಡಿದರು. ಷಣ್ಮುಖಪ್ಪ ಹನುಮಲಿ, ಕಾರ್ಯಕ್ರಮ ದಾಸೋಹಿಗಳಾದ ಎಸ್.ರುದ್ರಮುನಿಯಪ್ಪ, ಡಾ| ಗೀತಾ, ಡಾ| ಪಾಲಾಕ್ಷಯ್ಯ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ 16 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

        ಶ್ರೀ ಬಸವ ಮಹಾಲಿಂಗ ಸ್ವಾಮಿಗಳು, ಬಸವನಾಗಿದೇವ ಸ್ವಾಮಿಗಳು, ಶ್ರೀ ತಿಪ್ಪೇರುದ್ರ ಸ್ವಾಮಿಗಳು, ಶ್ರೀ ಬಸವಕಿರಣ ಸ್ವಾಮಿಗಳು, ಶ್ರೀ ಪ್ರಜ್ಞಾನಂದ ಸ್ವಾಮಿಗಳು, ಪೈಲ್ವಾನ್ ತಿಪ್ಪೇಸ್ವಾಮಿ, ಕೆಇಬಿ ಷಣ್ಮುಖಪ್ಪ, ಎ.ಜೆ.ಪರಮಶಿವಯ್ಯ, ಎಂ.ಜಿ.ದೊರೆಸ್ವಾಮಿ, ಎನ್.ತಿಪ್ಪಣ್ಣ, ಪಿ.ವೀರೇಂದ್ರಕುಮಾರ್ ಮೊದಲಾದವರಿದ್ದರು.ಜಮುರಾ ಕಲಾವಿದರು ವಚನ ಪ್ರಾರ್ಥನೆ ಮಾಡಿದರು. .ಸಿ.ಎಂ. ಚಂದ್ರಪ್ಪ ಸ್ವಾಗತಿಸಿದರು. ಪ್ರದೀಪ್‍ಕುಮಾರ್ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link